ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ತೆರಳುವ ಭಾರತ ಹಾಕಿ ತಂಡಕ್ಕೆ ಒಗ್ಗಟ್ಟಿನ ಬಲ: ಮನ್‌ಪ್ರೀತ್‌

Last Updated 25 ಜೂನ್ 2021, 11:17 IST
ಅಕ್ಷರ ಗಾತ್ರ

ಬೆಂಗಳೂರು: ‘ತಂಡ ಉತ್ತಮ ಲಯದಲ್ಲಿದ್ದಾಗಲೇ ಕೋವಿಡ್‌ನಿಂದಾಗಿ ಅಭ್ಯಾಸಕ್ಕೆ ತೊಂದರೆಯಾಯಿತು. ಆದರೆ ಈಗ ತರಬೇತಿ ಸುಸೂತ್ರವಾಗಿ ನಡೆಯುತ್ತಿದ್ದು ಯಾವ ರೀತಿಯ ಒತ್ತಡವೂ ಇಲ್ಲದೆ ಒಲಿಂಪಿಕ್ಸ್‌ಗೆ ತೆರಳಲು ಸಿದ್ಧವಾಗಿದೆ’ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್ ಹೇಳಿದರು. ಅವರ ಮಾತಿಗೆ ಕೋಚ್‌ ಗ್ರಹಾಂ ರೀಡ್ ದನಿಗೂಡಿಸಿದರು.

ಭಾರತ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕೇಂದ್ರದಿಂದ ಅವರು ಶುಕ್ರವಾರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಪನಾಯಕ ಬೀರೇಂದ್ರ ಲಾಕ್ರ ಮತ್ತು ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಕೂಡ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದು ಕಣಕ್ಕೆ ಇಳಿಯಲು ಹಾತೊರೆಯುತ್ತಿದ್ದೇನೆ. ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಖುಷಿಯ ವಿಷಯ. ತಂಡದಲ್ಲಿ ಅನೇಕ ಅನುಭವಿ ಆಟಗಾರರು ಇರುವುದರಿಂದ ನಾಯಕತ್ವ ದೊಡ್ಡ ಸವಾಲೇನೂ ಅಲ್ಲ. ತಂಡಕ್ಕೆ ಒಗ್ಗಟ್ಟಿನ ಬಲ ಇದೆ’ ಎಂದು ಮನ್‌ಪ್ರೀತ್ ಸಿಂಗ್ ಹೇಳಿದರು.

‘ಒಂದೂವರೆ ವರ್ಷದ ಹಿಂದೆ ತಂಡ ಉತ್ತಮ ಸಾಧನೆ ಮಾಡಿದೆ. ಜರ್ಮನಿ, ಇಂಗ್ಲೆಂಡ್‌ ಮತ್ತು ಅರ್ಜೆಂಟೀನಾ ತಂಡಗಳ ಎದುರಿನ ಸರಣಿಗಳಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಆದರೆ ಕೋವಿಡ್‌ ಕಾಡಿದ ನಂತರ ಅಭ್ಯಾಸಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಈಗ ಬೆಂಗಳೂರಿನಲ್ಲಿ ಒಂದು ಕುಟುಂಬದಂತೆ ಇದ್ದೇವೆ. ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಅವಲೋಕನ ನಡೆಯುತ್ತಿದೆ. ಒಂದೆರಡು ವರ್ಷಗಳಿಂದ ಕಠಿಣ ತರಬೇತಿ ಸಿಗುತ್ತಿದೆ. ಒಲಿಂಪಿಕ್ಸ್‌ಗೂ ಮೊದಲು ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.

ಅನುಭವಿ ಆಟಗಾರ ಮತ್ತು ಗೋಲ್‌ಕೀಪರ್‌ ಶ್ರೀಜೇಶ್ ಬಗ್ಗೆ ಮಾತನಾಡಿದ ಮನ್‌ಪ್ರೀತ್ ಸಿಂಗ್ ‘ಶ್ರೀಜೇಶ್ ಅತ್ಯುತ್ತಮ ಆಟಗಾರ. ಗೋಲ್‌ಕೀಪಿಂಗ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಯಲ್ಲಿ ಆಟವನ್ನು ನಿಯಂತ್ರಿಸುತ್ತಿರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಸೂಕ್ತ ಸಲಹೆಗಳನ್ನು ನೀಡುತ್ತಿರುತ್ತಾರೆ. ಅವರು ತಂಡದ ದೊಡ್ಡ ಶಕ್ತಿ’ ಎಂದರು.

‘ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವುದು ಈಗ ತಂಡಕ್ಕೆ ಸುಲಭಸಾಧ್ಯವಾಗುತ್ತಿದೆ. ಡ್ರ್ಯಾಗ್ ಫ್ಲಿಕ್‌, ಸ್ಟಾಪಿಂಗ್ ಮತ್ತು ಗೋಲು ಹೊಡೆಯುವುದರಲ್ಲಿ ಪಳಗಿದವರು ಇದ್ದಾರೆ. ಅವರನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದೆ ಸಾಗುತ್ತಿದ್ದೇವೆ’ ಎಂದು ಮನ್‌ಪ್ರೀತ್‌ ವಿವರಿಸಿದರು.

ಒಲಿಂಪಿಕ್ಸ್‌ನಂಥ ಮಹತ್ವದ ಟೂರ್ನಿಗೆ ಹೊಸ ಆಟಗಾರರನ್ನು ಹೆಚ್ಚು ಬಳಸಿಕೊಳ್ಳುವ ನಿರ್ಧಾರವನ್ನು ಸಮರ್ಥಿಸಿಕೊಂಡ ಕೋಚ್ ಗ್ರಹಾಂ ರೀಡ್ ‘ವಿಶ್ವದ ಎಲ್ಲ ತಂಡಗಳೂ ಹೊಸ ಆಟಗಾರರಿಗೆ ಅವಕಾಶ ನೀಡುತ್ತಿವೆ. ಆಸ್ಟ್ರೇಲಿಯಾದಂಥ ತಂಡದಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡುವ ಅನೇಕ ಮಂದಿ ಇದ್ದಾರೆ. ಯುವ ಆಟಗಾರರು ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿದ್ದಾರೆ’ ಎಂದರು.

’ಶೂಟೌಟ್‌ನಲ್ಲಿ ಮತ್ತು ನಿರ್ಣಾಯಕ ಸಂದರ್ಭದಲ್ಲಿ ಚೆಂಡನ್ನು ಗುರಿ ಸೇರಿಸುವ ಕಲೆಯನ್ನು ಆಟಗಾರರು ಕರಗತ ಮಾಡಿಕೊಂಡಿದ್ದಾರೆ. ಮುಂದಿನ ಮೂರು ವಾರಗಳಲ್ಲಿ ಇನ್ನಷ್ಟು ಕಠಿಣ ತರಬೇತಿ ಇರುತ್ತದೆ. ನಿತ್ಯವೂ ಅಭ್ಯಾಸ ಮಾಡುವುದರಿಂದ ತಂಡದ ಮೇಲೆ ಬೀರುವ ಪರಿಣಾಮವೇ ಬೇರೆ’ ಎಂದು ಅವರು ವಿವರಿಸಿದರು.

ಫಿಟ್‌ ಇಲ್ಲದಿದ್ದರೆ ಆಡುವುದು ಸರಿಯಲ್ಲ

ಆಟಗಾರನಿಗೆ ಫಿಟ್‌ನೆಸ್ ಮುಖ್ಯ. ಅಂಗಣದಲ್ಲಿ ಸಾಮರ್ಥ್ಯ ತೋರಲು ಸಾಧ್ಯವಿಲ್ಲ ಎಂದಾದರೆ ಆಡಲು ಮುಂದಾಗಬಾರದು. ಅದರಿಂದ ವೈಯಕ್ತಿಕವಾಗಿ ವೃತ್ತಿಜೀವನಕ್ಕೂ ತಂಡಕ್ಕೂ ತೊಂದರೆ ಆಗುತ್ತದೆ ಎಂದು ಉಪನಾಯಕ ಬೀರೇಂದ್ರ ಲಕ್ರಾ ಅಭಿಪ್ರಾಯಪಟ್ಟರು.

‘ನನಗಿದು ಎರಡನೇ ಒಲಿಂಪಿಕ್ಸ್‌. ಕಳೆದ ಬಾರಿ ಗಾಯದ ಸಮಸ್ಯೆಯಿಂದ ಆಡಲಿಲ್ಲ. ನಂತರ ಸಂಪೂರ್ಣ ಚೇತರಿಸಿಕೊಳ್ಳುವ ವರೆಗೆ ಕಾದೆ. ಆಗ ತಂಡದಿಂದ ಲಭಿಸಿದ ಸಹಕಾರವನ್ನು ಎಂದೂ ಮರೆಯಲಾರೆ. ನಾನು ಏಕಾಂಗಿ ಎಂದು ಎನಿಸದ ಹಾಗೆ ಎಲ್ಲರೂ ನೆರವಾದರು. ಈಗ ಬಲಶಾಲಿಯಾಗಿದ್ದೇನೆ. ಒಲಿಂಪಿಕ್ಸ್‌ಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಉಪನಾಯಕನಾಗಿರುವುದರಿಂದ ಜವಾಬ್ದಾರಿ ಇದೆ. ನಾಯಕನಿಂದ ಮತ್ತು ಅನುಭವಿಗಳಿಂದ ಉತ್ತಮ ಸಹಕಾರ ಸಿಗುತ್ತಿದ್ದು ಯುವ ಆಟಗಾರರೂ ಸಮರ್ಥರಾಗಿದ್ದಾರೆ. ಹೀಗಾಗಿ ಒತ್ತಡ ಇಲ್ಲ’ ಎಂದು ಅವರು ಹೇಳಿದರು.

ಹರ್ಮನ್‌ಪ್ರೀತ್ ಸಿಂಗ್‌ ಮಾತನಾಡಿ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲು ಕಾತರನಾಗಿದ್ದೇನೆ. ಹೊಸಬರು ಮತ್ತು ಅನುಭವಿ ಆಟಗಾರರಿಂದ ಸಾಕಷ್ಟು ಕಲಿತಿದ್ದು ಆಟದ ಶೈಲಿ ತುಂಬ ಬದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT