ಬುಧವಾರ, ಜನವರಿ 29, 2020
23 °C

ನಿಖರ ‘ಗುರಿ’ಯ ಹಾದಿಯಲ್ಲಿ...

ಪ್ರಮೋದ್ Updated:

ಅಕ್ಷರ ಗಾತ್ರ : | |

ಭಾರತ ಶೂಟಿಂಗ್‌ ‌ತಂಡದ ಆಯ್ಕೆಗೆ ನಡೆಯುವ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿರುವ ಹುಬ್ಬಳ್ಳಿಯ ವಿನುತಾ ಲಕಮನಹಳ್ಳಿ, ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆಯ ಭರವಸೆ ಮೂಡಿಸಿದ್ದಾರೆ. ವಿಶೇಷವೆಂದರೆ, ಶೂಟಿಂಗ್‌ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ ಒಂದೇ ವರ್ಷದಲ್ಲಿ ಅವರು ಈ ಅರ್ಹತೆ ಗಳಿಸಿದ್ದಾರೆ.

ನಿವೃತ್ತ ಯೋಧ ರವಿಚಂದ್ರ ಬಾಲೆಹೊಸೂರ ಅವರ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ವಿನುತಾ ವೃತ್ತಿಪರ ಶೂಟಿಂಗ್‌ ಆರಂಭಿಸಿದ 2017ರಲ್ಲಿ ಮೊದಮೊದಲು ಓಪನ್‌ ಸೈಟ್ ರೈಫಲ್‌ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅದರ ಮರುವರ್ಷವೇ ಶೂಟಿಂಗ್‌ನ ಮತ್ತೊಂದು ವಿಭಾಗದಲ್ಲಿ (10 ಮೀಟರ್‌ ಏರ್‌ ಪಿಸ್ತೂಲ್‌) ಸಾಧನೆ ಹಾದಿ ನಿರ್ಧರಿಸಿದರು.

2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 10 ಮೀಟರ್‌ ಏರ್‌ ರೈಫಲ್‌ ಪಿಸ್ತೂಲ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ, ಕೇರಳದ ಇಡುಕ್ಕಿಯಲ್ಲಿ ಜರುಗಿದ ದಕ್ಷಿಣ ವಲಯದ ಟೂರ್ನಿಗೆ ಅರ್ಹತೆ ಪಡೆದುಕೊಂಡು ಅಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಒಟ್ಟು 400 ಅಂಕಗಳಿಗೆ 360 ಅಂಕ ಕಲೆಹಾಕಿ ಭೋಪಾಲ್‌ನಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಸಂಪಾದಿಸಿದ್ದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಶೂಟರ್‌ಗಳ ನಡುವೆಯೂ ಕಠಿಣ ಸ್ಪರ್ಧೆ ಒಡ್ಡಿದ ವಿನುತಾ ರಾಷ್ಟ್ರೀಯ ಟೂರ್ನಿಯಲ್ಲಿ 600ಕ್ಕೆ 549 ಅಂಕಗಳನ್ನು ಗಳಿಸಿ ಭಾರತ ತಂಡದ ಆಯ್ಕೆಗೆ ನಡೆಯುವ ಅರ್ಹತಾ ಟೂರ್ನಿಗೆ ಅವಕಾಶ ಪಡೆದಿದ್ದಾರೆ. ಫೆಬ್ರುವರಿಯಲ್ಲಿ ತಿರುವನಂತಪುರದಲ್ಲಿ ಅರ್ಹತಾ ಟೂರ್ನಿ ಜರುಗಲಿದೆ. ಇರುವ ಸೀಮಿತ ಸೌಲಭ್ಯಗಳಲ್ಲಿಯೇ ವಿನುತಾ ಮಾಡಿರುವ ಸಾಧನೆ ಈ ಭಾಗದ ಶೂಟರ್‌ಗಳಿಗೆ ಸ್ಫೂರ್ತಿಯಾಗಿದೆ.

ಏಕೆಂದರೆ, ದೇಶವನ್ನು ಪ್ರತಿನಿಧಿಸಲು ಬೇಕಾದ ಅಗತ್ಯ ತರಬೇತಿ ಸೌಲಭ್ಯಗಳು ಬೆಂಗಳೂರು, ಪುಣೆ, ಮುಂಬೈನಲ್ಲಿರುವಂತೆ ಹುಬ್ಬಳ್ಳಿಯಲ್ಲಿ ಇಲ್ಲ. ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ವಿನುತಾ ಒಂದೇ ವರ್ಷದಲ್ಲಿ ಭರವಸೆಯ ಶೂಟರ್‌ ಆಗಿ ಹೊರಹೊಮ್ಮಿದ್ದಾರೆ.

ವಿನುತಾ ತಂದೆ ಶಿವಪ್ರಸಾದ ಲಕಮನಹಳ್ಳಿ ಹುಬ್ಬಳ್ಳಿ–ಧಾರವಾಡ ರೈಫಲ್‌ ಸಂಸ್ಥೆ ಕಾರ್ಯದರ್ಶಿಯಾಗಿ ಶೂಟಿಂಗ್‌ ಬಗ್ಗೆ ತರಬೇತಿ ಕೊಡುತ್ತಿದ್ದರು. ಅಪ್ಪನ ಜೊತೆ ಆಗಾಗ ಹೋಗಿ ಶೂಟಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಳು. ವಿನುತಾ, ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ ಹಾಗೂ ಆದರ್ಶ ಕಾಲೇಜಿನಲ್ಲಿ ಓದಿದ್ದು, ಈಗ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿದ್ದಾಳೆ.

‘ನನ್ನ ಸಾಧನೆಯ ಕ್ಷೇತ್ರ ಶೂಟಿಂಗ್‌ ಎಂದು ನಿರ್ಧರಿಸಿದ ಬಳಿಕ ನಿತ್ಯ ಅಭ್ಯಾಸ ಮಾಡುತ್ತಿದ್ದೇನೆ. ಮುಂದೆ ಭಾರತ ತಂಡ ಮತ್ತು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಹೆಗ್ಗುರಿಯಿದೆ. ಅದಕ್ಕೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ. ಭಾರತ ತಂಡದ ಆಯ್ಕೆಗೆ ನಡೆಯುವ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಷ್ಟೇ ಸದ್ಯದ ಗುರಿ’ ಎಂದು ವಿನುತಾ ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶಿವಪ್ರಸಾದ್ ‘ಒಲಿಂಪಿಯನ್‌ ಶೂಟರ್ ಅಭಿನವ್‌ ಬಿಂದ್ರಾ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದವರು. ಅವರಂತೆಯೇ ನನ್ನ ಮಗಳು ಕೂಡ ಸಾಧನೆ ಮಾಡಬೇಕು ಎನ್ನುವ ಆಸೆ ನನ್ನದು. ಇದಕ್ಕೆ ಬೇಕಾದ ಸಾಮರ್ಥ್ಯ ಆಕೆಯಲ್ಲಿದೆ. ಆದರೆ, ಇದುವರೆಗೂ ಪಾಲ್ಗೊಂಡ ಎಲ್ಲ ಶೂಟಿಂಗ್‌ ಟೂರ್ನಿಗಳಿಗೂ ಸ್ವಂತ ಹಣ ಖುರ್ಚು ಮಾಡಿದ್ದೇವೆ. ಒಂದು ಪಿಸ್ತೂಲ್‌ ಖರೀದಿಸಲು ಕನಿಷ್ಠ ₹ 2 ಲಕ್ಷ ಬೇಕಾಗುತ್ತದೆ. ಆದ್ದರಿಂದ ಪ್ರಾಯೋಜಕರು ನೆರವಾದರೆ ಮಗಳ ಸಾಧನೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ.


ಕೋಚ್‌ ರವಿಚಂದ್ರ ಬಾಲೆಹೊಸೂರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ವಿನುತಾ ಲಕಮನಹಳ್ಳಿ

‘ವಿನುತಾ ನಮ್ಮ ಭರವಸೆ’
ವೃತ್ತಿಪರ ಶೂಟಿಂಗ್‌ ಆರಂಭಿಸಿದ ಒಂದೇ ವರ್ಷದಲ್ಲಿ ವಿನುತಾ ಉತ್ತಮ ಸಾಧನೆ ಮಾಡಿದ್ದಾಳೆ. ಅಭ್ಯಾಸದ ಬಗ್ಗೆ ಹೊಂದಿರುವ ಬದ್ಧತೆ ಹಾಗೂ ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣ. ಪಿಸ್ತೂಲ್‌ ವಿಭಾಗದಲ್ಲಿ ಅರ್ಹತಾ ಟೂರ್ನಿಗೆ ಆಯ್ಕೆಯಾದ ನಮ್ಮ ಅಕಾಡೆಮಿಗೆ ಏಕೈಕ ಶೂಟರ್‌ ಆಗಿದ್ದು, ಭಾರತ ತಂಡಕ್ಕೆ ಆಯ್ಕೆಯಾಗುವ ಭರವಸೆಯಿದೆ ಎಂದು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿ ಕೋಚ್‌ ರವಿಚಂದ್ರ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು