ಜಯದ ಮುನ್ನುಡಿ ಬರೆದ ಭಾರತ

ಭಾನುವಾರ, ಮೇ 19, 2019
32 °C
ಹಾಕಿ: ಥಂಡರ್‌ಸ್ಟಿಕ್ಸ್‌ಗೆ ನಿರಾಸೆ: ಲಾಕ್ರಾ, ಹರ್ಮನ್‌ಪ್ರೀತ್‌ ಕೈಚಳಕ

ಜಯದ ಮುನ್ನುಡಿ ಬರೆದ ಭಾರತ

Published:
Updated:
Prajavani

ಪರ್ತ್‌: ಬೀರೇಂದ್ರ ಲಾಕ್ರಾ ಮತ್ತು ಹರ್ಮನ್‌ಪ್ರೀತ್‌ ಸಿಂಗ್ ಅವರು ಬುಧವಾರ ಪರ್ತ್‌ ಹಾಕಿ ಕ್ರೀಡಾಂಗಣದಲ್ಲಿ ಕೈಚಳಕ ತೋರಿದರು.

ಇವರು ಗಳಿಸಿದ ತಲಾ ಒಂದು ಗೋಲುಗಳ ಬಲದಿಂದ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದ ತನ್ನ ಮೊದಲ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿಯಿತು.

ಮನಪ್ರೀತ್‌ ಸಿಂಗ್‌ ಬಳಗವು 2–0 ಗೋಲುಗಳಿಂದ ಡಬ್ಲ್ಯು.ಎ. ಥಂಡರ್‌ಸ್ಟಿಕ್ಸ್‌ ತಂಡವನ್ನು ಸೋಲಿಸಿತು.

ಉಭಯ ತಂಡಗಳು ಮೊದಲ ಕ್ವಾರ್ಟರ್‌ನಲ್ಲಿ ಚುರುಕಿನ ಸಾಮರ್ಥ್ಯ ತೋರಿದವು. ಐದನೇ ನಿಮಿಷದಲ್ಲಿ ಭಾರತಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡಿದ ಜಸ್‌ಕರಣ್‌ ಸಿಂಗ್‌ ಇದನ್ನು ಕೈಚೆಲ್ಲಿದರು.‌

ಇದರ ಬೆನ್ನಲ್ಲೇ ಥಂಡರ್‌ಸ್ಟಿಕ್ಸ್‌ ಕೂಡಾ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡಿತ್ತು. ಆತಿಥೇಯ ತಂಡದ ಆಟಗಾರನ ಪ್ರಯತ್ನಕ್ಕೆ ಭಾರತದ ಹರ್ಮನ್‌ಪ್ರೀತ್‌ ಮತ್ತು ರೂಪಿಂದರ್‌ ಪಾಲ್‌ ಸಿಂಗ್‌ ಅಡ್ಡಿಯಾದರು.

ಮೊದಲ ಕ್ವಾರ್ಟರ್‌ನ ಆಟ ಮುಗಿಯಲು ಕೆಲವು ಸೆಕೆಂಡುಗಳು ಬಾಕಿ ಇದ್ದಾಗ ಆಕಾಶ್‌ದೀಪ್‌ ಸಿಂಗ್‌ಗೆ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ಆಕಾಶ್‌ದೀಪ್‌ ಬಾರಿಸಿದ ಚೆಂಡನ್ನು ಎದುರಾಳಿ ತಂಡದ ಗೋಲ್‌ಕೀಪರ್‌ ಬೆನ್‌ ರೆನಿ ಅಮೋಘ ರೀತಿಯಲ್ಲಿ ತಡೆದರು.

ಭಾರತ ತಂಡವು ಎರಡನೇ ಕ್ವಾರ್ಟರ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ನಾಯಕ ಮನಪ್ರೀತ್‌ ಮತ್ತು ಮನದೀಪ್‌ ಸಿಂಗ್‌ ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿ ಭರವಸೆ ಮೂಡಿಸಿದ್ದರು.  ಥಂಡರ್‌ಸ್ಟಿಕ್ಸ್‌ ತಂಡದ ಗೋಲ್‌ಕೀಪರ್‌ನ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸಲು ಇಬ್ಬರೂ ವಿಫಲರಾದರು.

ಭಾರತದ ಸತತ ಪ್ರಯತ್ನಕ್ಕೆ 23ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಬೀರೇಂದ್ರ ಲಾಕ್ರಾ, ಫೀಲ್ಡ್‌ ಗೋಲು ಹೊಡೆದು ಸಂಭ್ರಮಿಸಿದರು.

1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಮನಪ್ರೀತ್‌ ಪಡೆಯು ದ್ವಿತೀಯಾರ್ಧದಲ್ಲೂ ಮೋಡಿ ಮಾಡಿತು. ಭಾರತ ತಂಡದ ಆಟಗಾರರು ಶುರುವಿನಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಮುಂದಾದರು.

40ನೇ ನಿಮಿಷದಲ್ಲಿ ಪ್ರವಾಸಿ ಪಡೆಗೆ ಮುನ್ನಡೆ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶ ಸಿಕ್ಕಿತ್ತು. ಇದನ್ನು ಲಾಕ್ರಾ ಸದುಪಯೋಗಪಡಿಸಿಕೊಳ್ಳಲಿಲ್ಲ. 42ನೇ ನಿಮಿಷದಲ್ಲಿ ಮನದೀಪ್‌ ಸಿಂಗ್‌ ಕೂಡಾ ಗೋಲು ಗಳಿಸುವ ಅವಕಾಶ ಹಾಳು ಮಾಡಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಥಂಡರ್‌ಸ್ಟಿಕ್ಸ್‌ ತಂಡ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಭಾರತವು ಮುನ್ನಡೆ ಹೆಚ್ಚಿಸಿಕೊಳ್ಳಲು ಹೋರಾಡಿತು. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

50ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್‌, ಮನಪ್ರೀತ್‌ ಪಡೆಯ ಆಟಗಾರರು ಖುಷಿಯಿಂದ ಕುಣಿಯುವಂತೆ ಮಾಡಿದರು.

ಮೇ 10ರಂದು ನಡೆಯುವ ಹೋರಾಟದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ‘ಎ’ ಎದುರು ಸೆಣಸಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !