ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಚಿನ್ನ

ಇಂಡೊನೇಷ್ಯಾ ವಿರುದ್ಧ ಏಕಪಕ್ಷೀಯ ಗೆಲುವು; ಮೋಹಕ ಆಟವಾಡಿದ ಲಕ್ಷ್ಯ, ಕಿದಂಬಿ; ಸಾತ್ವಿಕ್–ಚಿರಾಗ್ ಮಿಂಚು
Last Updated 15 ಮೇ 2022, 14:35 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಹದಿನಾಲ್ಕು ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಅಮೋಘ ಆಟವಾಡಿದ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನದ ಪದಕ ಗಳಿಸಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಆಧಿಪತ್ಯ ಮೆರೆದ ಭಾರತ 3–0ಯಿಂದ ಜಯ ಗಳಿಸಿತು.

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಮ ಸೇನ್ 8–21, 21–17, 21–16ರಲ್ಲಿ ಆ್ಯಂಟನಿ ಸಿನಿಸುಕ ಜಿಂಟಿಂಗ್ ವಿರುದ್ಧ ಜಯ ಗಳಿಸಿ ಮುನ್ನಡೆ ತಂದುಕೊಟ್ಟರು. ನಂತರ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ್ ಸುಖಮುಲ್ಜೊ ಜೋಡಿಯನ್ನು 18–21, 23–21, 21–19ರಲ್ಲಿ ಮಣಿಸಿದರು. ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಭರ್ಜರಿ ಆಟವಾಡಿ 21–15, 23–21ರಲ್ಲಿ ಗೆದ್ದರು. ಹೀಗಾಗಿ ಉಳಿದೆರಡು ಪಂದ್ಯಗಳನ್ನು ಆಡುವ ಅಗತ್ಯ ಬೀಳಲಿಲ್ಲ.

ಭಾರತ ಈ ಹಿಂದೆ 13 ಬಾರಿ ಥಾಮಸ್ ಕಪ್ ಟೂರ್ನಿಯಲ್ಲಿ ಆಡಿತ್ತು. 1979ರಲ್ಲಿ ಇಂಡೊನೇಷ್ಯಾದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಗರಿಷ್ಠ ಸಾಧನೆಯಾಗಿತ್ತು. ಆ ವರ್ಷ ನಾಲ್ಕರ ಘಟ್ಟದಲ್ಲಿ ಭಾರತ ತಂಡ ಡೆನ್ಮಾರ್ಕ್‌ಗೆ ಮಣಿದಿತ್ತು. ಈ ಬಾರಿ ಆರಂಭದಲ್ಲೇ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ತಂಡ ನಂತರ ಅಮೋಘ ಸಾಮರ್ಥ್ಯ ಪ್ರದರ್ಶಿಸಿತ್ತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ತಂಡ ಈ ಅವಕಾಶವನ್ನು ಚಿನ್ನದ ಸಾಧನೆಯನ್ನಾಗಿ ಪರವರ್ತಿಸಿಕೊಂಡಿತು.

ನಾಕೌಟ್ ಹಂತದ ಎರಡು ಪಂದ್ಯಗಳಲ್ಲಿ ಸೋತಿದ್ದ ಯುವ ಆಟಗಾರ ಲಕ್ಷ್ಯ ಸೇನ್ ಫೈನಲ್‌ನಲ್ಲೂ ಮೊದಲ ಗೇಮ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು. ಆದರೆ ಛಲ ಬಿಡದೆ ಕಾದಾಡಿದ ಅವರು ವಿಶ್ವ ಕ್ರಮಾಂಕದ ಐದನೇ ಸ್ಥಾನದಲ್ಲಿರುವ ಆ್ಯಂಟನಿ ಸಿನಿಸುಕ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಪ್ರಮುಖ ಟೂರ್ನಿಗಳಲ್ಲಿ ಲಕ್ಷ್ಯ ಸೇನ್ ಮತ್ತು ಜಿಂಟಿಂಗ್ ಈ ಮೊದಲು ಎರಡು ಬಾರಿ ಮುಖಾಮುಖಿಯಾಗಿದ್ದು ಎರಡೂ ಬಾರಿ ಸೇನ್ ಜಯ ಗಳಿಸಿದ್ದರು.

ದೇಶದ ಶ್ರೇಷ್ಠ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಬಲಿಷ್ಠ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಎದುರು ಮೊದಲ ಗೇಮ್‌ನಲ್ಲಿ ಸೋತಿದ್ದರು. ಎರಡನೇ ಗೇಮ್‌ನಲ್ಲಿ ಸೋಲಿನ ಅಂಚಿನಲ್ಲಿದ್ದ ಅವರು ನಾಲ್ಕು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡು ಗೇಮ್ ಮತ್ತು ಪಂದ್ಯವನ್ನು ಭಾರತದ ತೆಕ್ಕೆಯಲ್ಲಿ ಉಳಿಸಿದರು. ಮೂರನೇ ಗೇಮ್‌ನಲ್ಲಿ ನಿರಾಯಾಸವಾಗಿ ಆಡಿ 2–0 ಮುನ್ನಡೆ ಗಳಿಸಿಕೊಟ್ಟರು.

ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಕೇವಲ 48 ನಿಮಿಷಗಳಲ್ಲಿ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಉಕ್ಕಿಸಿದರು. ತಾಳ್ಮೆಯಿಂದ ಆಡಿದ ಶ್ರೀಕಾಂತ್ ನೆಟ್‌ ಬಳಿ ಮೋಹಕ ಡ್ರಾಪ್‌ಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಅವಕಾಶ ಸಿಕ್ಕಿದಾಗಲೆಲ್ಲ ಅಂಗಣದ ಎರಡೂ ಬದಿಗಳಲ್ಲಿ ಸ್ಮ್ಯಾಷ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು.

ಆರಂಭದಲ್ಲಿ 8–3ರ ಮುನ್ನಡೆಯಲ್ಲಿದ್ದ ಶ್ರೀಕಾಂತ್ ಕೆಲವು ತಪ್ಪುಗಳನ್ನು ಎಸಗಿದ್ದರಿಂದಾಗಿ ಎದುರಾಳಿ 15–15ರ ಸಮಬಲ ಸಾಧಿಸಿದರು. ಆದರೆ ಛಲ ಬಿಡದ ಶ್ರೀಕಾಂತ್ 20–16ರ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ ಕೂಡ ಜಿದ್ದಾಜಿದ್ದಿಯಿಂದ ಕೂಡಿತ್ತು. ಒಂದು ಹಂತದಲ್ಲಿ ಗೇಮ್‌ 18–18ರಲ್ಲಿ ಸಮ ಆಗಿತ್ತು. ನಂತರ ರೋಚಕ ರ‍್ಯಾಲಿಗಳಿಗೆ ಗೇಮ್ ಸಾಕ್ಷಿಯಾಯಿತು. ಜಂಪ್ ಸ್ಮ್ಯಾಷ್ ಮೂಲಕ ಪಾಯಿಂಟ್ ಗಳಿಸಿದ ಶ್ರೀಕಾಂತ್ ಗೆಲುವಿನ ಸನಿಹ ತಲುಪಿದರು. ನಂತರ ಉಭಯ ಆಟಗಾರರು ಜಿದ್ದಾಜಿದ್ದಿಯಿಂದ ಹೋರಾಡಿದರು. ಹೈ–ಜಂಪ್ ಸ್ಮ್ಯಾಷ್ ಮೂಲಕ ಶ್ರೀಕಾಂತ್ ಚಾಂಪಿಯನ್‌ಷಿಪ್ ಪಾಯಿಂಟ್ ಗಳಿಸಿದರು.

₹ 1 ಕೋಟಿ ಬಹುಮಾನ

ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಇಲಾಖೆ ₹ 1 ಕೋಟಿ ಬಹುಮಾನ ಘೋಷಿಸಿದೆ. ಈ ವಿಷಯವನ್ನು ಘೋಷಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ‘ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೊನೇಷ್ಯಾದಂಥ ಬಲಿಷ್ಠ ತಂಡಗಳನ್ನು ಮಣಿಸಿದ ಭಾರತ ಬ್ಯಾಡ್ಮಿಂಟನ್ ತಂಡ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್.ಪ್ರಣಯ್ ಅವರು ಆಡಿದ ಎಲ್ಲ ಪಂದ್ಯಗಳಲ್ಲೂ ಪಾರಮ್ಯ ಮೆರೆದಿದ್ದಾರೆ. ಆರು ಪಂದ್ಯಗಳ ಪೈಕಿ ಐದರಲ್ಲಿ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ನಿರ್ಣಾಯಕ ಹಂತಗಳಲ್ಲಿ ಪಾಯಿಂಟ್‌ಗಳನ್ನು ಗೆದ್ದುಕೊಂಡು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಲಕ್ಷ್ಯ ಸೇನ್ ಫೈನಲ್‌ನಲ್ಲಿ ಮೊದಲ ಪಂದ್ಯ ಗೆದ್ದು ಭರವಸೆ ಮೂಡಿಸಿದ್ದರು’ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ನಾಲ್ಕು ವರ್ಷಗಳಲ್ಲಿ ₹ 67 ಕೋಟಿ ವೆಚ್ಚ

ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಬ್ಯಾಡ್ಮಿಂಟನ್ ತಂಡಕ್ಕಾಗಿ ಕೇಂದ್ರ ಸರ್ಕಾರ ₹ 67.19 ಕೋಟಿ ಮೊತ್ತವನ್ನು ವೆಚ್ಚ ಮಾಡಿದೆ. ತರಬೇತಿ, ಸ್ಪರ್ಧೆ ಮತ್ತು ವೇತನಕ್ಕಾಗಿ ಈ ಮೊತ್ತವನ್ನು ವಿನಿಯೋಗಿಸಲಾಗಿದೆ. ಭಾರತದ ಕೋಚ್‌ಗಳ ಜೊತೆ ವಿದೇಶಿ ಕೋಚ್‌ಗಳ ಪ್ರತಿಭೆಯನ್ನೂ ಬಳಸಿಕೊಳ್ಳಲಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ₹ 4.5 ಕೋಟಿ ವೆಚ್ಚ ಮಾಡಿ ಆಟಗಾರರಿಗೆ ಒಟ್ಟು 13 ವಿದೇಶ ಪ್ರವಾಸವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಡ್ಮಿಂಟನ್ ಸಂಸ್ಥೆಯಿಂದ ₹ 1 ಕೋಟಿ

ತಂಡದ ಆಟಗಾರರಿಗೆ ಒಟ್ಟು ₹ 1 ಕೋಟಿ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ನೆರವು ಸಿಬ್ಬಂದಿಗೆ ಒಟ್ಟು ₹ 20 ಲಕ್ಷ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಥಾಮಸ್ ಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಬ್ಯಾಂಕಾಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಇಂಡೊನೇಷ್ಯಾವನ್ನು ಮಣಿಸಿದ ಭಾರತ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಂಡೊನೇಷ್ಯಾ ಒಟ್ಟು 14 ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಕಳೆದ ಬಾರಿಯೂ ಚಾಂಪಿಯನ್ ಆಗಿತ್ತು.

ಹಣಾಹಣಿ ಫಲಿತಾಂಶ

ಭಾರತ 3

ಇಂಡೊನೇಷ್ಯಾ 0

ಪಂದ್ಯಗಳ ವಿವರ

ಮೊದಲ ಸಿಂಗಲ್ಸ್‌

ಲಕ್ಷ್ಯಸೇನ್‌ಗೆ 8‍–21, 21–17, 21–16ರಲ್ಲಿ ಆ್ಯಂಟನಿ ಜಿಂಟಿಂಗ್ ವಿರುದ್ಧ ಜಯ

ಡಬಲ್ಸ್‌

ಸಾತ್ವಿಕ್ ಸಾಯಿರಾಜ್–ಚಿರಾಗ್ ಶೆಟ್ಟಿಗೆ 18–21, 23–21, 21–19ರಲ್ಲಿ ಮೊಹಮ್ಮದ್ ಅಹ್ಸಾನ್–ಕೆವಿನ್ ಸುಖಮುಲ್ಜೊ ಎದುರು ಗೆಲುವು

ಎರಡನೇ ಸಿಂಗಲ್ಸ್‌

ಕಿದಂಬಿ ಶ್ರೀಕಾಂತ್‌ಗೆ 21–15, 23–21ರಲ್ಲಿ ಜೊನಾಥನ್ ಕ್ರಿಸ್ಟಿ ಎದುರು ಜಯ

ಪ್ರಮುಖ ಅಂಶಗಳು

* ಇಂಡೊನೇಷ್ಯಾ ತಂಡ ಥಾಮಸ್ ಕಪ್‌ ಟೂರ್ನಿಯಲ್ಲಿ ಒಟ್ಟು 14 ಬಾರಿ ಚಾಂಪಿಯನ್ ಆಗಿದೆ. ಕಳೆದ ಬಾರಿಯೂ ಚಾಂಪಿಯನ್ ಆಗಿತ್ತು.

* ಭಾರತ ಈ ವರೆಗೆ 13 ಆವೃತ್ತಿಗಳಲ್ಲಿ ಆಡಿದ್ದು 1979ರಲ್ಲಿ ಇಂಡೊನೇಷ್ಯಾದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಗರಿಷ್ಠ ಸಾಧನೆಯಾಗಿತ್ತು. ಆ ವರ್ಷ ನಾಲ್ಕರ ಘಟ್ಟದಲ್ಲಿ ಭಾರತ ತಂಡ ಡೆನ್ಮಾರ್ಕ್‌ಗೆ ಮಣಿದಿತ್ತು.

* ಈ ಬಾರಿಯ ಫೈನಲ್‌ ಹಣಾಹಣಿಗೂ ಮೊದಲು ತಂಡ ಸ್ಪರ್ಧೆಗಳಲ್ಲಿ ಭಾರತ ಮತ್ತು ಇಂಡೊನೇಷ್ಯಾ 7 ಬಾರಿ ಮುಖಾಮುಖಿಯಾಗಿವೆ. ಇಂಡೊನೇಷ್ಯಾ ಅಜೇಯವಾಗಿತ್ತು.

* ಭಾರತ ಮತ್ತು ಇಂಡೊನೇಷ್ಯಾ ಈ ವರ್ಷದ ಆರಂಭದಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ಮೊದಲ ಹಣಾಹಣಿ 2010ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT