ಭಾನುವಾರ, ಮೇ 9, 2021
26 °C

ಕೃಣಾಲ್‌-ಕೆಎಲ್‌ ಬಿರುಸಿನ ಬ್ಯಾಟಿಂಗ್;‌ ಇಂಗ್ಲೆಂಡ್‌ ಗೆಲುವಿ‌ಗೆ 318 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 318 ರನ್‌ ಕಲೆ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕರಾದ ಉಪನಾಯಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 15.1 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟವಾಡಿತು.

ರೋಹಿತ್‌ (28) ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ನಾಯಕ ವಿರಾಟ್‌ ಕೊಹ್ಲಿ (56) ಶಿಖರ್‌ ಜೊತೆಗೂಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 105 ರನ್‌ ಸೇರಿಸಿದರು. 106 ಎಸೆತಗಳನ್ನು ಎದುರಿಸಿದ ಧವನ್‌, 98 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

ರನ್‌ ಗತಿ ಏರಿಸಿದ ಕೃಣಾಲ್‌-ಕೆಎಲ್‌
ಅಗ್ರ ಕ್ರಮಾಂಕದ ಐದು ವಿಕೆಟ್‌ಗಳು ತಂಡದ ಮೊತ್ತ 206 ರನ್‌ ಆಗುವಷ್ಟರಲ್ಲಿ ಉರುಳಿದ್ದವು. 41ನೇ ಓವರ್‌ನಲ್ಲಿ ಜೊತೆಯಾದ ಕನ್ನಡಿಗ ಕೆ.ಎಲ್.‌ ರಾಹುಲ್‌ ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಕೃಣಾಲ್‌ ಪಾಂಡ್ಯ ರನ್‌ ಗತಿ ಹೆಚ್ಚಿಸಿದರು. ಟಿ20 ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿದ ಈ ಜೋಡಿ ಮುರಿಯದ 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 57 ಎಸೆತಗಳಲ್ಲಿ 112 ರನ್‌ ಗಳಿಸಿತು. ಹೀಗಾಗಿ ತಂಡದ ಮೊತ್ತ 310ರ ಗಡಿ ದಾಟಿತು.

ರಾಹುಲ್‌ 43 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಬೌಂಡರಿ ಸಹಿತ 62 ರನ್‌ ಗಳಿಸಿದರೆ, ಆರಂಭದಿಂದಲೂ ಬಿರುಸಾಗಿ ಬ್ಯಾಟ್‌ ಬೀಸಿದ ಕೃಣಾಲ್‌ 31 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 7 ಬೌಂಡರಿ ಸಹಿತ 58 ಚಚ್ಚಿದರು.

ಇಂಗ್ಲೆಂಡ್‌ ಪರ ಬೆನ್ಸ್‌ ಸ್ಟೋಕ್ಸ್‌ ಮೂರು, ಮಾರ್ಕ್‌ ವುಡ್‌ ಎರಡು ವಿಕೆಟ್‌ ಪಡೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು