ಮಂಗಳವಾರ, ಸೆಪ್ಟೆಂಬರ್ 21, 2021
23 °C

Tokyo Olympics: ಗುರಿ ತಪ್ಪಿದ ಭಾರತದ ಶೂಟರ್‌ಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಶೂಟರ್‌ಗಳು ನಿಖರ ಗುರಿ ಇಡುವಲ್ಲಿ ಮತ್ತೊಮ್ಮೆ ವಿಫಲರಾದರು. ಕ್ರೀಡಾಕೂಟದ ಮಿಶ್ರ ತಂಡ ವಿಭಾಗಗಳಲ್ಲಿ  ಫೈನಲ್ ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.

ಪದಕದ ಭರವಸೆ ಮೂಡಿಸಿದ್ದ ಸೌರಭ್ ಚೌಧರಿ ಹಾಗೂ ಮನು ಭಾಕರ್ ಅವರು ಮಂಗಳವಾರ ಅಸಾಕ ಶೂಟಿಂಗ್ ರೇಂಜ್‌ನಲ್ಲಿ ನಡೆದ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲೇ ಕೈಚೆಲ್ಲಿದರು. ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಅಭಿಷೇಕ್ ವರ್ಮಾ ಹಾಗೂ ಯಶಸ್ವಿನಿ ಸಿಂಗ್ ದೇಸ್ವಾಲ್ ಜೋಡಿ ಕೂಡ ನಿರಾಸೆ ಅನುಭವಿಸಿತು.

ಮೊದಲ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದ್ದ ಸೌರಭ್ ಮತ್ತು ಮನು ಜೋಡಿ, ಎರಡನೇ ಅರ್ಹತಾ ಸುತ್ತನ್ನು ಏಳನೇ ಸ್ಥಾನದೊಂದಿಗೆ ಕೊನೆಗೊಳಿಸಿತು. ಅಭಿಷೇಕ್ ಹಾಗೂ ಯಶಸ್ವಿನಿ ಮೊದಲ ಅರ್ಹತಾ ಸುತ್ತಿನಲ್ಲೇ 17ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

10 ಮೀ. ಏರ್ ರೈಫಲ್‌ ವಿಭಾಗದಲ್ಲಿಯೂ ಭಾರತದ ಸ್ಪರ್ಧಿಗಳಿಗೆ ನಿರಾಸೆ ಕಾದಿತ್ತು. ಇಳವೆನ್ನಿಲಾ ವಾಳರಿವನ್‌ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಜೋಡಿಯು ಮೊದಲ ಹಂತದ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನ ಗಳಿಸಿದರೆ, ಅಂಜುಮ್‌ ಮೌದ್ಗಿಲ್ ಹಾಗೂ ದೀಪಕ್ ಕುಮಾರ್‌ ಅವರು 18ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

ಚಿನ್ನ ಬಾಚಿಕೊಂಡ ಚೀನಾ: 10 ಮೀ. ಏರ್‌ ರೈಫಲ್ ಮತ್ತು ಪಿಸ್ತೂಲ್ ಮಿಶ್ರ ತಂಡ ವಿಭಾಗಗಳ ಎರಡೂ ಚಿನ್ನದ ಪದಕಗಳನ್ನು ಚೀನಾ ತನ್ನದಾಗಿಸಿಕೊಂಡಿತು.

10 ಮೀ. ಏರ್‌ ರೈಫಲ್‌ನಲ್ಲಿ ಚೀನಾದ ಯಾಂಗ್‌ ಕಿಯಾನ್‌–ಯಾಂಗ್‌ ಹೋರನ್‌ ಜೋಡಿಯು 17–13ರಿಂದ ಅಮೆರಿಕದ ಮೇರಿ ಟಕ್ಕರ್‌– ಲೂಕಾಸ್‌ ಕೊಜೆನಿಸ್ಕಿ ಜೋಡಿಯನ್ನು ಪರಾಭವಗೊಳಿಸಿತು. ಈ ವಿಭಾಗದ ಕಂಚು ರಷ್ಯಾದ ಯೂಲಿಯಾ ಕರಿಮೊವಾ–ಸೆರ್ಜೆ ಕೆಮೆನ್‌ಸ್ಕಿಯ್ ಪಾಲಾಯಿತು.

ಚೀನಾದ ಜಿಯಾಂಗ್‌ ರ‍್ಯಾನ್‌ಕ್ಸಿನ್‌–ಪಾಂಗ್ ವೇ ಜೋಡಿಯು 16–14ರಿಂದ ರಷ್ಯಾದ ವಿಟಾಲಿನಾ ಬ್ಯಾಟ್ಸ್‌ರಸ್ಕಿನಾ–ಆರ್ಟೆಮ್ ಚೆರ್ನೊಸೊವ್ ಅವರನ್ನು ಮಣಿಸಿ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟಿತು. ಉಕ್ರೇನ್ ತಂಡದ ಒಲೆನಾ ಕೋಸ್ಟಯಿಚ್‌ ಮತ್ತು ಒಲೆಹ್‌ ಒಮೆಲ್ಚುಕ್ ಅವರಿಗೆ ಒಲಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು