ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಮಿನುಗಿದ ಈಜುಪಟು ಲಿಖಿತ್‌

Last Updated 22 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಎಡೆಬಿಡದೆ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆ ಹುಡುಗ, 19ರ ಹರೆಯದಲ್ಲೇ ಕ್ರೀಡಾ ಬದುಕಿಗೆ ಪೂರ್ಣ ವಿರಾಮ ಇಡಲು ತೀರ್ಮಾನಿಸಿಬಿಟ್ಟಿದ್ದ.

ತನ್ನಿಂದ ಇನ್ನು ಏನನ್ನೂ ಸಾಧಿಸಲು ಆಗೋಲ್ಲ ಅಂದುಕೊಂಡವನಿಗೆ ಮರುಜನ್ಮ ನೀಡಿದ್ದು ಬೆಂಗಳೂರಿನಲ್ಲಿರುವ ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ). ಈ ಕೇಂದ್ರಕ್ಕೆ ಸೇರಿದ ಬಳಿಕ ಆತನ ನೋವಿನ ದಿನಗಳು ಮರೆಯಾದವು. ಮತ್ತೆ ಸಾಧನೆಯ ಕಿಚ್ಚು ಹೊತ್ತಿಸಿಕೊಂಡು ಭಾರತದ ಈಜುಲೋಕದಲ್ಲಿ ಮಿನುಗುತ್ತಿರುವ ಆ ತಾರೆಯೇ ಎಸ್‌.ಪಿ.ಲಿಖಿತ್‌.

ಬೆಂಗಳೂರಿನ ಲಿಖಿತ್‌, ಒಂಬತ್ತರ ಹರೆಯದಲ್ಲೇ ಈಜುಕೊಳಕ್ಕೆ ಧುಮುಕಿದ್ದರು. ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಈಜಲು ಆರಂಭಿಸಿದ ಅವರು ಕ್ರಮೇಣ ವಯೋವರ್ಗದ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳಿಗೆ ಕೊರಳೊಡ್ಡುತ್ತಾ ಸಾಗಿದರು. ಹೀಗೆ ಗೆದ್ದ ಪದಕಗಳು ಲಿಖಿತ್‌ ಬದುಕಿಗೆ ಹೊಸ ದಾರಿ ತೋರಿದವು. 100 ಮೀಟರ್ಸ್‌
(ಗುಂಪು–1) ಮತ್ತು 50 ಮೀಟರ್ಸ್‌ (ಗುಂಪು–2) ಬ್ರೆಸ್ಟ್‌ಸ್ಟ್ರೋಕ್‌ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಅವರು ಗಾಯದಿಂದಾಗಿ ನಾಲ್ಕು ವರ್ಷ ನರಕ ಯಾತನೆ ಅನುಭವಿಸಿದ್ದರು.

ಇದರಿಂದ ಚೇತರಿಸಿಕೊಂಡ ನಂತರ ಮತ್ತೆ ಮೋಡಿ ಮಾಡಿದ್ದರು. ಈ ವರ್ಷದ ಜನವರಿಯಲ್ಲಿ ನಡೆದಿದ್ದ ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಆರು ಪದಕಗಳು ಲಿಖಿತ್‌ ಕೊರಳಿಗೇರಿದ್ದವು. ಇದರಲ್ಲಿ ಐದು ಚಿನ್ನದ ಪದಕಗಳು ಸೇರಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಏಷ್ಯನ್‌ ವಯೋವರ್ಗ ಚಾಂಪಿಯನ್‌ಷಿಪ್‌, ಇತ್ತೀಚೆಗೆ ಕಠ್ಮಂಡುವಿನಲ್ಲಿ ಜರುಗಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲೂ ಪದಕಗಳ ಸಾಧನೆ ಮಾಡಿದ್ದ ಲಿಖಿತ್‌ ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ಗಾಯದ ಕಾರಣ ನಾಲ್ಕು ವರ್ಷ ಈಜುಕೊಳದಿಂದ ದೂರ ಇದ್ದಿರಿ. ಮತ್ತೆ ಪುಟಿದೇಳುವ ವಿಶ್ವಾಸ ಇತ್ತೆ?

ಖಂಡಿತವಾಗಿಯೂ ಇರಲಿಲ್ಲ. ಗಾಯದ ಸಮಸ್ಯೆ ನಿರಂತರವಾಗಿ ಕಾಡುತ್ತಿತ್ತು. ಹೀಗಾಗಿ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿರಲಿಲ್ಲ. ಸಾಮರ್ಥ್ಯ ಮಟ್ಟ ಕೂಡ ಕ್ಷೀಣಿಸುತ್ತಿತ್ತು. ಇದೆಲ್ಲದರ ನಡುವೆ ಸಂಸ್ಥೆಯೊಂದು ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸಿದ್ದರಿಂದ ದಿಕ್ಕೇ ತೋಚದಂತಾಗಿತ್ತು. ಇದರಿಂದ ಬೇಸತ್ತು ನಿವೃತ್ತಿಯ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಒಮ್ಮೆ ನೆಟ್ಟಕಲ್ಲಪ್ಪ ಈಜು ಕೇಂದ್ರದ ಮುಖ್ಯ ಕೋಚ್‌ ಪಾರ್ಥ ವಾರಣಾಸಿಯವರನ್ನು ಭೇಟಿ ಮಾಡಿದೆ. ಆ ಭೇಟಿ ನನ್ನ ಬದುಕಿಗೆ ಹೊಸ ತಿರುವು ನೀಡಿತು.

ಆ ನಾಲ್ಕು ವರ್ಷ ನೀವು ಮಾಡಿದ್ದೇನು?

ಆ ಅವಧಿಯಲ್ಲಿ ಸುಮ್ಮನೆ ಕೂರಲಿಲ್ಲ. 2015ರಿಂದ 2017ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಗ್ರಹಾಂ ಹಿಲ್‌ ಅವರ ಬಳಿ, ನಂತರ ಆಸ್ಟ್ರಿಯಾದಲ್ಲಿ (2017ರಿಂದ 2018) ಡಿರ್ಕ್‌ ಲಾಂಗ್‌ ಹತ್ತಿರ ತರಬೇತಿ ಪಡೆದೆ. ಈ ಅವಧಿಯಲ್ಲಿ ಒಟ್ಟು ಐದು ಕೋಚ್‌ಗಳನ್ನು ಬದಲಿಸಿದೆ. ಒಬ್ಬೊಬ್ಬರು ಒಂದೊಂದು ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಸೂಚಿಸಿದರು. ಅವುಗಳನ್ನು ಮೈಗೂಡಿಸಿಕೊಂಡು ಮತ್ತೆ ಸ್ಪರ್ಧಾತ್ಮಕ ಈಜಿಗೆ ಮರಳಲು ಪ್ರಯತ್ನಿಸಿದೆ.

ನೆಟ್ಟಕಲ್ಲಪ್ಪ ಈಜು ಕೇಂದ್ರಕ್ಕೆ ಸೇರಿದ ಮೇಲೆ ನಿಮ್ಮ ಬದುಕಲ್ಲಾದ ಬದಲಾವಣೆಗಳೇನು?

ಎನ್‌ಎಸಿ, ನನಗೆ ಪುನರ್ಜನ್ಮ ನೀಡಿತು. ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವ ಈ ಕೇಂದ್ರದಲ್ಲಿ ಗುಣಮಟ್ಟದ ತರಬೇತಿ ಲಭಿಸಿತು.

ಕೋಚ್‌ಗಳಾದ ಪಾರ್ಥ, ಲೋಕೇಶ್‌ ಮತ್ತು ನಿರುಪ್‌ ಸರ್‌ ಅವರು ಈಜಿನ ಜೊತೆಗೆ ಯೋಗ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಇದರಿಂದ ಕ್ರಮೇಣ ಒತ್ತಡ ಕಡಿಮೆಯಾಗಿ ಸಾಮರ್ಥ್ಯ ವೃದ್ಧಿಸಿತು.

ಈ ವರ್ಷ ನಡೆದಿದ್ದ ಮಲೇಷ್ಯಾ ಓಪನ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ನಿಮ್ಮಿಂದ ವೈಯಕ್ತಿಕ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿತ್ತು. ಈ ಸಾಧನೆ ಬಗ್ಗೆ ಹೇಳಿ

ಮೊದಲೆಲ್ಲಾ ಕೂಟಗಳಲ್ಲಿ ಭಾಗವಹಿಸುವಾಗ ಒತ್ತಡಕ್ಕೆ ಒಳಗಾಗುತ್ತಿದ್ದೆ. ಮಲೇಷ್ಯಾ ಓಪನ್‌ನಲ್ಲಿ ಪಾಲ್ಗೊಂಡಾಗ ನನ್ನ ಮೇಲೆ ಯಾವ ನಿರೀಕ್ಷೆಯೂ ಇರಲಿಲ್ಲ. ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಖುಷಿಯಾಗಿ ಈಜಬೇಕೆಂಬುದಷ್ಟೇ ನನ್ನ ಗುರಿಯಾಗಿತ್ತು. ಹೀಗಾಗಿ 1 ನಿಮಿಷ 02.02 ಸೆಕೆಂಡುಗಳಲ್ಲಿ ಗುರಿ ಮುಟ್ಟಲು ಸಾಧ್ಯವಾಯಿತು. ಜೊತೆಗೆ ವಿಶ್ವ ಚಾಂಪಿಯನ್‌ಷಿಪ್‌ಗೆ ‘ಬಿ’ಅರ್ಹತೆಯೂ ಲಭಿಸಿತ್ತು. ನಂತರ ಬೆನ್ನು ನೋವು ಕಾಡಿದ್ದರಿಂದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಆಗಲಿಲ್ಲ.

2019 ನಿಮ್ಮ ಪಾಲಿಗೆ ಅದೃಷ್ಟದ ವರ್ಷವೇ?

ಈ ವರ್ಷ ಹಲವು ವ್ಯಕ್ತಿಗಳನ್ನು ಭೇಟಿ ಮಾಡಿದ್ದೆ. ಅವರು ಕೊಟ್ಟ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ನಡೆಸಿದ್ದೆ. ಹೀಗಾಗಿ ಋತುವಿನ ಆರಂಭದಲ್ಲಿ ನಡೆದಿದ್ದ ಖೇಲೊ ಇಂಡಿಯಾ, ಏಷ್ಯಾ ವಯೋವರ್ಗ ಮತ್ತು ಇತ್ತೀಚೆಗೆ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲೂ ಪದಕಗಳ ಸಾಧನೆ ಅರಳಿತ್ತು.

ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಸ್ಪರ್ಧೆ ಹೇಗಿತ್ತು?

ಸಾಕಷ್ಟು ಮಂದಿ ಪ್ರತಿಭಾನ್ವಿತ ಈಜುಪಟುಗಳು ಭಾಗವಹಿಸಿದ್ದರು. ಮುಖ್ಯವಾಗಿ ಶ್ರೀಲಂಕಾದವರಿಂದ ಕಠಿಣ ಸ್ಪರ್ಧೆ ಎದುರಾಗಿತ್ತು. ಎಲ್ಲಾ ಸವಾಲುಗಳನ್ನು ಮೀರಿ ನಾಲ್ಕು ಪದಕಗಳನ್ನು ಜಯಿಸಿದ್ದರಿಂದ ಅತೀವ ಖುಷಿಯಾಗಿದೆ.

ಬ್ರೆಸ್ಟ್‌ಸ್ಟ್ರೋಕ್‌ ವಿಭಾಗವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?

ನನ್ನ ಶರೀರವು ಬ್ರೆಸ್ಟ್‌ಸ್ಟ್ರೋಕ್‌ಗೆ ಹೊಂದಿಕೊಳ್ಳುತ್ತಿತ್ತು. ಹೀಗಾಗಿ ಮೊದಲಿನಿಂದಲೂ ಈ ವಿಭಾಗದಲ್ಲೇ ಸ್ಪರ್ಧಿಸುತ್ತಿದ್ದೇನೆ.

ಭಾರತದ ಈಜುಪಟುಗಳು ಒಲಿಂಪಿಕ್ಸ್‌ಗೆ ‘ಎ’ ಅರ್ಹತೆ ಗಳಿಸಲು ವಿಫಲರಾಗುತ್ತಿದ್ದಾರಲ್ಲ. ಇದಕ್ಕೆ ಕಾರಣವೇನು?

ಸ್ಪೋರ್ಟ್ಸ್‌ ಸೈನ್ಸ್‌ನಲ್ಲಿ (ಕ್ರೀಡಾ ವಿಜ್ಞಾನ) ನಾವು ಇತರ ದೇಶಗಳಿಗಿಂತ ತುಂಬಾ ಹಿಂದುಳಿದಿದ್ದೇವೆ. ನಮ್ಮಲ್ಲಿ ಉತ್ಕೃಷ್ಟ ಗುಣಮಟ್ಟದ ಮೂಲ ಸೌಕರ್ಯಗಳ ಕೊರತೆಯೂ ಇದೆ.

ಸರ್ಕಾರದಿಂದಲೂ ಈಜುಪಟುಗಳಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ ಅನೇಕರು ಈಜಿನಿಂದ ವಿಮುಖರಾಗುತ್ತಿದ್ದಾರೆ. ಇದು ಪ್ರತಿಭಾನ್ವೇಷಣೆಗೆ ತೊಡಕಾಗಿ ಪರಿಣಮಿಸುತ್ತಿದೆ. ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದೆ. ವೀರಧವಳ್‌ ಖಾಡೆ, ಶ್ರೀಹರಿ ನಟರಾಜ್‌, ಸಾಜನ್‌ ಪ್ರಕಾಶ್‌ ಅವರು ‘ಎ’ ಅರ್ಹತೆಯ ಸನಿಹದಲ್ಲಿದ್ದಾರೆ.

2020ರ ಟೋಕಿಯೊ ಒಲಿಂಪಿಕ್ಸ್‌ಗೆ ‘ಎ’ ಅರ್ಹತೆ ಗಳಿಸಲು ನಮ್ಮವರಿಗೆ ಇನ್ನೂ ಅವಕಾಶ ಇದೆಯೇ?

ಜುಲೈ 6ರ ವರೆಗೆ ಅವಕಾಶ ಇದೆ. ಮಾರ್ಚ್‌ನಲ್ಲಿ ಸಿಂಗಪುರ ಓಪನ್‌, ಏಪ್ರಿಲ್‌ನಲ್ಲಿ ಮಲೇಷ್ಯಾ ಓಪನ್‌ ಮತ್ತು ಜೂನ್‌ನಲ್ಲಿ ಮತ್ತೊಮ್ಮೆ ಸಿಂಗಪುರ ಓಪನ್ ಚಾಂಪಿಯನ್‌ಷಿಪ್‌ ನಡೆಯಲಿದ್ದು ಇವುಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಟೋಕಿಯೊ ಟಿಕೆಟ್‌ ಗಿಟ್ಟಿಸಬಹುದು.

ನೀವೇನಾದರೂ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಯ ಮೇಲೆ ಕಣ್ಣಿಟ್ಟಿದ್ದೀರಾ?

ಖಂಡಿತವಾಗಿಯೂ ಆ ಕನಸು ಇದೆ. ಈಗ ತೋರುತ್ತಿರುವ ಸಾಮರ್ಥ್ಯವನ್ನೇ ಮುಂದುವರಿಸಿದರೆ ಟೋಕಿಯೊಗೆ ರಹದಾರಿ ಪಡೆಯಬಹುದು.

ಈಜು ಪಯಣ ಶುರುವಾಗಿದ್ದು ಹೇಗೆ?

ಒಂಬತ್ತನೇ ವಯಸ್ಸಿನಲ್ಲೇ ಈಜು ಕಲಿಯಲು ಶುರು ಮಾಡಿದೆ. ಆರಂಭದಲ್ಲಿ ನನ್ನಿಂದ ಅಷ್ಟೇನು ಪರಿಣಾಮಕಾರಿ ಸಾಮರ್ಥ್ಯ ಮೂಡಿಬರುತ್ತಿರಲಿಲ್ಲ. ಆಗ ಬಸವನಗುಡಿ ಈಜು ಕೇಂದ್ರದಲ್ಲಿ (ಬಿಎಸಿ) ತರಬೇತಿ ಪಡೆಯುತ್ತಿದ್ದೆ. ಅಲ್ಲಿನ ಕೋಚ್‌ಗಳು ನನ್ನ ಪ್ರತಿಭೆಗೆ ಸಾಣೆ ಹಿಡಿದರು. ಅವರ ಮಾರ್ಗದರ್ಶನದಲ್ಲಿ ವಿನೂತನ ಕೌಶಲಗಳನ್ನು ಕಲಿತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಛಾಪು ಮೂಡಿಸಿದೆ. ಜೊತೆಗೆ ರಾಷ್ಟ್ರೀಯ ದಾಖಲೆಗಳನ್ನೂ ಬರೆದಿದ್ದೆ. ಆಗ ಜೆಎಸ್‌ಡಬ್ಲ್ಯು ಸಂಸ್ಥೆಯ ಪ್ರಾಯೋಜಕತ್ವವೂ ಲಭಿಸಿತ್ತು. ಇದರಿಂದ ವಿದೇಶಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿತ್ತು.

ನಿಮ್ಮ ಅಭ್ಯಾಸ ಕ್ರಮದ ಬಗ್ಗೆ ಹೇಳಿ

ನಿತ್ಯ ಬೆಳಿಗ್ಗೆ 5.30 ರಿಂದ 8 ಗಂಟೆವರೆಗೆ ಈಜುಕೊಳದಲ್ಲಿ ತಾಲೀಮು ನಡೆಸುತ್ತೇನೆ. ನಂತರ ಒಂದು ಗಂಟೆ ಯೋಗ ಮಾಡುತ್ತೇನೆ. ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಮತ್ತೆ ಈಜು ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ.

ವಾರದಲ್ಲಿ ಐದು ದಿನ ಜಿಮ್‌ನಲ್ಲಿ ಬೆವರು ಹರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT