ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೈನಾಗೆ ಸೋಲು; ಶ್ರೀಕಾಂತ್‌ಗೆ ನೋವು

ಚಿರಾಗ್–ಸಾತ್ವಿಕ್‌, ಅಶ್ವಿನಿ ಪೊನ್ನಪ್ಪಗೆ ಪರಾಭವ; ಭಾರತದ ಸವಾಲು ಅಂತ್ಯ
Last Updated 14 ಜನವರಿ 2021, 14:34 IST
ಅಕ್ಷರ ಗಾತ್ರ

ಬ್ಯಾಂಕಾಕ್: ಸ್ಥಳೀಯ ಆಟಗಾರ್ತಿ ಬುಸನನ್ ಒಂಗ್‌ಬಮ್‌ರುಂಗ್ಫನ್‌ ಅವರ ಸವಾಲು ಮಟ್ಟಿನಿಲ್ಲಲು ವಿಫಲರಾದ ಭಾರತದ ಸೈನಾ ನೆಹ್ವಾಲ್ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದರು. ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ನೋವಿನಿಂದ ಬಳಲಿ ನಿವೃತ್ತರಾದರು. ಡಬಲ್ಸ್‌ ಪಂದ್ಯಗಳಲ್ಲೂ ನಿರಾಸೆ ಅನುಭವಿಸುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಮಹಿಳೆಯರ ವಿಭಾಗದ ಸಿಂಗಲ್ಸ್ ಹಣಾಹಣಿಯ ಆರಂಭ ಅತ್ಯಂತ ರೋಚಕವಾಗಿತ್ತು. ಜಿದ್ದಾಜಿದ್ದಿಯ ಸೆಣಸಾಟ ಕಂಡುಬಂದ ಮೊದಲ ಗೇಮ್‌ನಲ್ಲಿ ಸೈನಾ 23–21ರ ಗೆಲುವು ಸಾಧಿಸಿದರು. ಆದರೆ ನಂತರ 14–21, 16–21ರಲ್ಲಿ ಸೋತು ಹೊರಬಿದ್ದರು. 68 ನಿಮಿಷಗಳ ಪಂದ್ಯದಲ್ಲಿ ನಿರಾಸೆ ಅನುಭವಿಸುವುದರೊಂದಿಗೆ ವಿಶ್ವದ 12ನೇ ಕ್ರಮಾಂಕದ ಆಟಗಾರ್ತಿ ಬುಸನನ್ ಎದುರು ಸೈನಾ ಸತತ ನಾಲ್ಕನೇ ಸೋಲು ಕಂಡಂತಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಮಲೇಷ್ಯಾದ ಲೀ ಜಿ ಜಿಯಾ ಎದುರು ಶ್ರೀಕಾಂತ್ ಕಣಕ್ಕೆ ಇಳಿಯಲೇ ಇಲ್ಲ. ಬಲಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ಎದುರಾಳಿಗೆ ವಾಕ್ ಓವರ್‌ ನೀಡಿದರು.

ಬೆಳಿಗ್ಗೆ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಶ್ರೇಯಾಂಕದ ಇಂಡೊನೇಷ್ಯಾ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸೇತ್ಯವನ್ ಎದುರು 19-21, 17-21ರಲ್ಲಿ ಸೋತಿತು. ಸಂಜೆ ನಡೆದ ಮಿಶ್ರ ವಿಭಾಗದ ಪಂದ್ಯದಲ್ಲಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ 12-21, 17-21ರಲ್ಲಿ ಹಾಂಕಾಂಗ್‌ನ ಚಾಂಗ್ ತಾಕ್ ಚಿಂಗ್ ಮತ್ತು ನಂಗ್ ವಿಂಗ್ ಯಂಗ್‌ಗೆ ಮಣಿದರು.

ಆರಂಭದಲ್ಲಿ ಪ್ರಬಲ ಹೋರಾಟ
ಬುಸನನ್ ಎದುರು ಸೈನಾ ಆರಂಭದಲ್ಲಿ ಅಮೋಘ ಆಟವಾಡಿದರು. ಸುದೀರ್ಘ ರ‍್ಯಾಲಿಗಳ ಮೂಲಕ ಗಮನ ಸೆಳೆದ ಇಬ್ಬರು ಕೆಲವು ಅಮೋಘ ಡ್ರಾಪ್‌ಗಳು ಮತ್ತು ಬಲಶಾಲಿ ಶಾಟ್‌ಗಳ ಮೂಲಕ ಮಿಂಚಿದರು. 3–0 ಮುನ್ನಡೆಯೊಂದಿಗೆ ಬುಸನನ್ ಉತ್ತಮ ಆರಂಭ ಕಂಡರು. ನಿಧಾನವಾಗಿ ಆಟಕ್ಕೆ ಕುದುರಿಕೊಂಡ ಸೈನಾ 6–5ರ ಮುನ್ನಡೆ ಸಾಧಿಸಿದರು. ಆದರೆ ಬುಸನನ್ ತಕ್ಷಣ ತಿರುಗೇಟು ನೀಡಿದರು. ಕ್ರಾಸ್ ಕೋರ್ಟ್ ಶಾಟ್‌ನೊಂದಿಗೆ 11–9ರಲ್ಲಿ ಮುನ್ನಡೆದರು. 15–13ರ ವರೆಗೂ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸುತ್ತಾ ಸಾಗಿದರು. ಅನಂತರ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಒಂದು ಹಂತದಲ್ಲಿ ಗೇಮ್‌ 17–17ರಲ್ಲಿ ಸಮ ಆಯಿತು. ನೆಟ್‌ ಬಳಿ ಡ್ರಾಪ್‌ಗಳನ್ನು ಹಾಕಿದ ಸೈನಾ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ನಂತರ ಗೇಮ್‌ನಲ್ಲಿ ಜಯ ಗಳಿಸುವತ್ತ ಮುನ್ನಡೆದ ಅವರು ಕೆಲವು ಗೇಮ್‌ಪಾಯಿಂಟ್‌ಗಳನ್ನು ಕಳೆದುಕೊಂಡರು. ಕೊನೆಗೆ ಗೇಮ್‌ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಎರಡನೇ ಗೇಮ್‌ನಲ್ಲಿ ಬುಸನನ್ ಆರಂಭದಲ್ಲೇ 5–3ರ ಮುನ್ನಡೆ ಗಳಿಸಿದರು. ತಪ್ಪುಗಳನ್ನು ಎಸಗಿದ ಸೈನಾ ಸತತವಾಗಿ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಥಾಯ್ಲೆಂಡ್ ಆಟಗಾರ್ತಿ 10–6ರ ಮುನ್ನಡೆ ಗಳಿಸಿದರು. ನಂತರ ಮುನ್ನಡೆ 15–9ಕ್ಕೆ ಏರಿತು. ಸತತ ಐದು ಪಾಯಿಂಟ್‌ಗಳನ್ನು ಗಳಿಸಿ ಗೇಮ್‌ ಪಾಯಿಂಟ್‌ನತ್ತ ಸಾಗಿದರು.

ನಿರ್ಣಾಯಕ ಮೂರನೇ ಗೇಮ್‌ನಲ್ಲೂ ಬುಸನನ್ 5–1ರಲ್ಲಿ ಮುನ್ನಡೆದರು. ಆದರೆ ಪಟ್ಟುಬಿಡದ ಸೈನಾ ಹಿನ್ನಡೆಯನ್ನು 4–6ಕ್ಕೆ ಕುಗ್ಗಿಸಿದರು. ಆದರೂ ಬುಸನನ್ ಎದೆಗುಂದದೆ 11–7, 18–11ರ ಮುನ್ನಡೆ ಗಳಿಸಿದರು. ಕೆಲವು ಪಾಯಿಂಟ್‌ಗಳನ್ನು ಗಳಿಸಿದರೂ ಸೋಲು ತಪ್ಪಿಸಿಕೊಳ್ಳಲು ಸೈನಾಗೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT