ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ವಿಶ್ವಕಪ್‌ ಹಾಕಿ: ಭಾರತಕ್ಕೆ ಫ್ರಾನ್ಸ್ ಮೊದಲ ಎದುರಾಳಿ

ಒಡಿಶಾದ ಭುವನೇಶ್ವರದಲ್ಲಿ ನವೆಂಬರ್‌ 24ರಿಂದ ಜೂನಿಯರ್ ವಿಶ್ವಕಪ್‌ ಹಾಕಿ
Last Updated 20 ಅಕ್ಟೋಬರ್ 2021, 14:09 IST
ಅಕ್ಷರ ಗಾತ್ರ

ಲಾಸನ್‌: ಹಾಲಿ ಚಾಂಪಿಯನ್ ಭಾರತ ತಂಡವು ಎಫ್‌ಐಎಚ್‌ ಜೂನಿಯರ್ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಫ್ರಾನ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್‌ 24ರಂದು ಈ ಪಂದ್ಯ ನಿಗದಿಯಾಗಿದೆ.

ಭಾರತ ತಂಡವು ಕೆನಡಾ, ಫ್ರಾನ್ಸ್ ಹಾಗೂ ಪೋಲೆಂಡ್ ಇರುವ ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ‘ಎ’ ಗುಂಪಿನಲ್ಲಿ ಬೆಲ್ಜಿಯಂ, ಚಿಲಿ, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಕೊರಿಯಾ, ನೆದರ್ಲೆಂಡ್ಸ್, ಸ್ಪೇನ್‌ ಮತ್ತು ಅಮೆರಿಕ ತಂಡಗಳು ‘ಸಿ‘ ಗುಂಪಿನಲ್ಲಿದ್ದರೆ, ಅರ್ಜೆಂಟೀನಾ, ಈಜಿಪ್ಟ್‌, ಜರ್ಮನಿ ಮತ್ತು ಪಾಕಿಸ್ತಾನ ತಂಡಗಳು ‘ಡಿ’ ಗುಂಪಿನಲ್ಲಿವೆ.

ಭಾರತ–ಫ್ರಾನ್ಸ್ ಹಣಾಹಣಿ ಹೊರತುಪಡಿಸಿ, ಟೂರ್ನಿಯ ಮೊದಲ ದಿನ ಬೆಲ್ಜಿಯಂ –ದಕ್ಷಿಣ ಆಫ್ರಿಕಾ, ಮಲೇಷ್ಯಾ–ಚಿಲಿ, ಜರ್ಮನಿ–ಪಾಕಿಸ್ತಾನ ಮತ್ತು ಕೆನಡಾ–ಪೋಲೆಂಡ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.

ಫ್ರಾನ್ಸ್‌ ಎದುರಿನ ಪಂದ್ಯದ ನಂತರ ಭಾರತವು ನವೆಂಬರ್‌ 25ರಂದು ಕೆನಡಾಕ್ಕೆ, ಬಳಿಕ 27ರಂದು ಪೋಲೆಂಡ್ ತಂಡಕ್ಕೆ ಎದುರಾಗಲಿದೆ. ಸೆಮಿಫೈನಲ್ಸ್ ಮತ್ತು ಫೈನಲ್ ಕ್ರಮವಾಗಿ ಡಿಸೆಂಬರ್ 3 ಹಾಗೂ 5ರಂದು ನಿಗದಿಯಾಗಿವೆ.

ಡಿಸೆಂಬರ್ 5ರಿಂದ 16ರವರೆಗೆ ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿರುವ ಮಹಿಳಾ ಜೂನಿಯರ್‌ ವಿಶ್ವಕಪ್ ಹಾಕಿ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ‘ಸಿ’ ಗುಂಪಿನಲ್ಲಿರುವ ಭಾರತ ತಂಡವು ಮೊದಲ ಪಂದ್ಯದಲ್ಲಿ ಡಿಸೆಂಬರ್‌ 6ರಂದು ರಷ್ಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT