ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಪುನಾರಚನೆ

Last Updated 7 ಮೇ 2021, 14:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ನೀಡುವ ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಏಕಲವ್ಯ ಪ್ರಶಸ್ತಿಗಳ ಅರ್ಜಿ ಪರಿಶೀಲನೆ ಹಾಗೂ ಆಯ್ಕೆ ಸಮಿತಿಗಳನ್ನು ಶುಕ್ರವಾರ ಪುನಾರಚಿಸಲಾಗಿದೆ.

ಏಕಲವ್ಯ ಪ್ರಶಸ್ತಿಯ ಅರ್ಜಿ ಪರಿಶೀಲನೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಉಪಾಧ್ಯಕ್ಷರಾಗಿರುತ್ತಾರೆ. ಭಾರತ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿ, ಇಬ್ಬರು ಅಂತರರಾಷ್ಟ್ರೀಯ ಕ್ರೀಡಾಪಟುಗಳು, ರಾಜ್ಯ ಕ್ರೀಡಾ ಸಂಸ್ಥೆಗಳ ಇಬ್ಬರು ಪದಾಧಿಕಾರಿಗಳು ಸದಸ್ಯರಾಗಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಪ್ರಶಸ್ತಿ ಆಯ್ಕೆ ಸಮಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರು ಅಧ್ಯಕ್ಷರಾಗಿದ್ದು ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಎ.ಬಿ ಸುಬ್ಬಯ್ಯ, ಉಷಾ ಸುಂದರ್‌ ರಾಜ್, ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರು ಸದಸ್ಯರಾಗಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಅಥವಾ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುವರು.

ಕ್ರೀಡಾರತ್ನ ಪ್ರಶಸ್ತಿ ಪರಿಶೀಲನೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾರಾಯಣ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಅರ್ಜುನ ಪ್ರಶಸ್ತಿ ಪುರಸ್ಕೃತ ಸಿ.ಹೊನ್ನಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ, ಭಾರತ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿ, ರಾಜ್ಯ ಅಟ್ಯ ಪಾಟ್ಯ ಸಂಸ್ಥೆಯ ಪ್ರತಿನಿಧಿ, ಕುಸ್ತಿ ಸಂಘದ ಪ್ರತಿನಿಧಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಸದಸ್ಯರಾಗಿರುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುವರು.

ಕ್ರೀಡಾರತ್ನ ಪ್ರಶಸ್ತಿ ಆಯ್ಕೆ ಸಮಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರು ಅಧ್ಯಕ್ಷರಾಗಿರುವರು. ಉಪಾಧ್ಯಕ್ಷರಾಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸದಸ್ಯರಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ಕೆ.ಪಿ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾರಾಯಣ್, ಸಿ.ಹೊನ್ನಪ್ಪ, ಅಟ್ಯ ಪಾಟ್ಯ ಸಂಸ್ಥೆಯ ಪ್ರತಿನಿಧಿ, ಕುಸ್ತಿ ಸಂಘದ ಪ್ರತಿನಿಧಿ,ಸದಸ್ಯ ಕಾರ್ಯದರ್ಶಿಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ನೇಮಕವಾಗಿದ್ದಾರೆ.

ಕ್ರೀಡಾ ಪೋಷಕ ಪ್ರಶಸ್ತಿ ಪರಿಶೀಲನಾ ಸಮಿತಿಗೆ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅಧ್ಯಕ್ಷರಾಗಿದ್ದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ಕೆ.ಪಿ ಉಪಾಧ್ಯಕ್ಷರಾಗಿರುವರು. ಪ್ಯಾರಾಲಿಂಪಿಯನ್ ವೆಂಕಟೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪಕಾರ್ಯದರ್ಶಿ ಹಾಗೂ ಆಯುಕ್ತರು ಸದಸ್ಯರಾಗಿರುವರು. ಇಲಾಖೆಯ ಜಂಟಿ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿರುವರು.‌

ಕ್ರೀಡಾ ಪೋಷಕ ಪ್ರಶಸ್ತಿ ಆಯ್ಕೆ ಸಮಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರು ಅಧ್ಯಕ್ಷರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ಕೆ.ಪಿ ಉಪಾಧ್ಯಕ್ಷರು. ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಭಾರತ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿ, ಪ್ಯಾರಾಲಿಂಪಿಯನ್ ವೆಂಕಟೇಶ್, ಜೈನ್ ವಿಶ್ವವಿದ್ಯಾಲಯದ ಪ್ರತಿನಿಧಿ ಸದಸ್ಯರಾಗಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT