ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯ ನಿರೀಕ್ಷೆಯಲ್ಲಿ ವಾಟರ್‌ ಪೋಲೊ

Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ವಾಟರ್‌ ಪೋಲೊ ಅಂದಾಕ್ಷಣ ಬಹುತೇಕರ ಮನದಲ್ಲಿ, ಅರೇ! ಇದ್ಯಾವ ಕ್ರೀಡೆ ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗೊಂದು ಕ್ರೀಡೆ ಇದೆ ಎಂಬುದು ಸಾಕಷ್ಟು ಮಂದಿಗೆ ಗೊತ್ತೇ ಇಲ್ಲ.

ಅಂದಹಾಗೆ ಇದು ಎರಡು ತಂಡಗಳ ನಡುವೆ ಈಜುಕೊಳದಲ್ಲಿ ನಡೆಯುವ ಆಟ. ಪೋಲೊ, ವೋಪೊ, ವಾಟರ್‌ ಫುಟ್‌ಬಾಲ್‌, ಪೂಲ್‌ಬಾಲ್‌ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುವ ಈ ಕ್ರೀಡೆ 19ನೇ ಶತಮಾನದ ಕೊನೆಯಲ್ಲಿ ಯುರೋಪ್‌ ರಾಷ್ಟ್ರಗಳಲ್ಲಿ ಜನಪ್ರಿಯವಾಗಿತ್ತು. ವಾಟರ್‌ ಪೋಲೊಗೆ ವೃತ್ತಿಪರತೆಯ ಸ್ಪರ್ಶ ನೀಡಿದ ಹೆಗ್ಗಳಿಕೆ ಈಜು ಶಿಕ್ಷಕ, ತರಬೇತುದಾರ ವಿಲಿಯಂ ವಿಲ್ಸನ್‌ ಅವರದ್ದು.

1900ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಆಯೋಜನೆಯಾಗಿದ್ದ ಒಲಿಂ‍‍ಪಿಕ್‌ ಕೂಟದಲ್ಲಿ ಮೊದಲ ಬಾರಿ ವಾಟರ್‌ ಪೋಲೊ ಸ್ಪರ್ಧೆಯನ್ನು ಸೇರ್ಪಡೆ ಮಾಡಲಾಗಿತ್ತು. ಬಳಿಕ ಈ ಕ್ರೀಡೆಯ ಕಂಪು ವಿಶ್ವದ ಇತರ ಭಾಗಗಳಿಗೂ ಪಸರಿಸಿತು. 20ನೇ ಶತಮಾನದ ಆರಂಭದಲ್ಲಿ ಭಾರತಕ್ಕೂ ಅಡಿ ಇಟ್ಟಿತ್ತು. 1948 (ಲಂಡನ್‌) ಮತ್ತು 1952ರ (ಹೆಲ್ಸಿಂಕಿ) ಒಲಿಂಪಿಕ್ಸ್‌ ಕೂಟಗಳಲ್ಲಿ ಭಾರತ ತಂಡ ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.

1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಈ ಕ್ರೀಡೆಯನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಅದೇ ವರ್ಷ ಭಾರತದ ಪುರುಷರ ತಂಡ ಚಿನ್ನದ ಸಾಧನೆ ಮಾಡಿತ್ತು. 1970ರ ಕೂಟದಲ್ಲಿ ತಂಡವು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿತ್ತು.

ಹಿನ್ನಡೆಗೆ ಏನು ಕಾರಣ..

ಇಷ್ಟೆಲ್ಲಾ ಹಿನ್ನೆಲೆಯ ಹೊರತಾಗಿಯೂ ಭಾರತದಲ್ಲಿ ಈ ಕ್ರೀಡೆ ಜನಮಾನಸಕ್ಕೆ ಹತ್ತಿರವಾಗಿಲ್ಲ. ಇದಕ್ಕೆ ಹಲವು ಕಾರಣಗಳೂ ಇವೆ.

‘ವಾಟರ್‌ ಪೋಲೊ ಅತಿ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆ. ಪಂದ್ಯದ ವೇಳೆ ಸ್ಪರ್ಧಿಗಳು ಒಟ್ಟು 32 ನಿಮಿಷಗಳ ಕಾಲ ನೀರಿನಲ್ಲಿ ವೇಗವಾಗಿ ಈಜುತ್ತಲೇ ಗೋಲು ಗಳಿಸಲು ಪ್ರಯತ್ನಿಸಬೇಕಿರುವುದರಿಂದ ಬೇಗನೆ ನಿತ್ರಾಣರಾಗಿಬಿಡುವ ಮತ್ತು ಗಂಭೀರವಾಗಿ ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವ ಹಾಗೂ ವೇಗವಾಗಿ ಈಜಬಲ್ಲವರು ಈ ಕ್ರೀಡೆಗೆ ಸೂಕ್ತ. ಅಂತಹ ಈಜುಪಟುಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಬಹುತೇಕರು ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರತಿಭಾನ್ವೇಷಣೆಯೂ ಕುಂಠಿತಗೊಳ್ಳುತ್ತಿದೆ’ ಎಂದು ಬಸವನಗುಡಿ ಈಜು ಕೇಂದ್ರದ ಕೋಚ್‌ ಜಯರಾಜ್‌ ಹೇಳುತ್ತಾರೆ.

‘ವಾಟರ್‌ ಪೋಲೊದಲ್ಲಿ ತೊಡಗಿಕೊಳ್ಳುವವರಿಗೆ ಉದ್ಯೋಗಾವಕಾಶಗಳೂ ಸಿಗುತ್ತಿಲ್ಲ. ಹೀಗಾಗಿ ಪೋಷಕರೂ ತಮ್ಮ ಮಕ್ಕಳನ್ನು ಈ ಕ್ರೀಡೆಯನ್ನು ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನುರಿತ ಕೋಚ್‌ಗಳ ಸಂಖ್ಯೆಯೂ ನಮ್ಮಲ್ಲಿ ಕಡಿಮೆ ಇದೆ’ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ..

ಕರ್ನಾಟಕದಲ್ಲೂ ಈ ಕ್ರೀಡೆಯ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ. ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ), ಬಸವನಗುಡಿ ಈಜು ಕೇಂದ್ರ (ಬಿಎಸಿ) ಸೇರಿದಂತೆ ಒಟ್ಟು ಮೂರು ಕ್ಲಬ್‌ಗಳಷ್ಟೇ ಈ ಕ್ರೀಡೆಯನ್ನು ಮಕ್ಕಳಿಗೆ ಕಲಿಸುವ ಕೆಲಸ ಮಾಡುತ್ತಿವೆ.

ಈ ಕ್ರೀಡೆಗೆ ನವಚೈತನ್ಯ ನೀಡಲು ಕರ್ನಾಟಕ ಈಜು ಸಂಸ್ಥೆ (ಕೆಎಸ್‌ಎ) ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

ವಾಟರ್‌ ಪೋಲೊ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಕೆಎಸ್‌ಎ, ಭಾರತ ಈಜು ಫೆಡರೇಷನ್‌ನ ಸಹಯೋಗದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಅಂತರ ಕ್ಲಬ್‌ ವಾಟರ್‌ ಪೋಲೊ ಚಾಂಪಿಯನ್‌ಷಿಪ್‌ ಆಯೋಜಿಸಿತ್ತು. ಜೊತೆಗೆ ಸೈಕಲ್‌ ಜಾಥಾವನ್ನೂ ಹಮ್ಮಿಕೊಂಡಿತ್ತು. ಭಾರತದ ಮಟ್ಟಿಗೆ ಇದೊಂದು ವಿಶಿಷ್ಠ ಪ್ರಯತ್ನ.

‘ವಾಟರ್‌ ಪೋಲೊದಲ್ಲಿ ಎತ್ತರದ ಸಾಧನೆ ಮಾಡಿರುವ 30 ಮಂದಿ ಕರ್ನಾಟದಲ್ಲಿದ್ದಾರೆ. ಆದರೆ ಅವರ ಪರಿಚಯ ಯಾರಿಗೂ ಇಲ್ಲ. ಇದು ವಿಪರ್ಯಾಸ. ವಾಟರ್‌ ಪೋಲೊದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾ ಕೋಟಾದಲ್ಲಿ ಕೆಲಸವೂ ಸಿಗುತ್ತಿಲ್ಲ. ಹೀಗಾಗಿ ಬಹುತೇಕರು ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಕೆಎಸ್‌ಎ ಜಂಟಿ ಕಾರ್ಯದರ್ಶಿ ರಮ್ಯಾ ಬಾಲಕೃಷ್ಣ ಹೇಳುತ್ತಾರೆ.

‘ವಾಟರ್‌ ಪೋಲೊಗೆ ಕಾಯಕಲ್ಪ ನೀಡಲು ನಾವು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಐಪಿಎಲ್‌ ಮಾದರಿಯಲ್ಲಿ ವಾಟರ್‌ ಪೋಲೊ ಲೀಗ್‌ ಆಯೋಜಿಸುವ ಆಲೋಚನೆಯೂ ಇದೆ. ಆರ್ಮಿ, ಏರ್‌ಫೋರ್ಸ್‌, ನೇವಿಯಂತಹ ಬಲಿಷ್ಠ ತಂಡಗಳನ್ನು ಆಹ್ವಾನಿಸಲು ನಿರ್ಧರಿಸಿದ್ದೇವೆ. ನಮ್ಮಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳು ನಡೆದಾಗ ಬೆರಳೆಣಿಕೆಯಷ್ಟು ಕ್ಲಬ್‌ಗಳು ಭಾಗವಹಿಸುತ್ತವೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕಾದ ಸವಾಲು ನಮ್ಮ ಎದುರಿಗಿದೆ. ಹೀಗಾಗಿ ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ವಾಟರ್‌ ಪೋಲೊ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT