ಶನಿವಾರ, ಜೂನ್ 6, 2020
27 °C
ಕೊರೊನಾ ಲಾಕ್‌ಡೌನ್‌ ಪರಿಣಾಮ

ಸಂಕಷ್ಟದಲ್ಲಿ ಅಥ್ಲೀಟ್ ಪ್ರಾಜಕ್ತಾ ಕುಟುಂಬ: ಒಪ್ಪೊತ್ತಿನ ಊಟಕ್ಕೆ ಪರದಾಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾರ್ಶ್ವವಾಯುಪೀಡಿತ ಅಪ್ಪ ಮತ್ತು ಕೊರೊನಾ ವೈರಸ್‌ ಸೋಂಕು ಕಾರಣಕ್ಕೆ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ಅಮ್ಮ. ಇದರಿಂದಾಗಿ ಆ ಕುಟುಂಬವು ಒಪ್ಪೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ....

ಹೌದು, ಇದು ನಾಗಪುರದ ಭರವಸೆಯ ಅಥ್ಲೀಟ್ ಪ್ರಾಜಕ್ತಾ ಗೋಡಬೋಲೆ ಮತ್ತು ಅವರ ಕುಟುಂಬದ ಸದ್ಯದ ದುಸ್ಥಿತಿ. ಹೋದ ವರ್ಷ ಇಟಲಿಯಲ್ಲಿ ನಡೆದಿದ್ದ ವಿಶ್ವ ವಾರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 5,000 ಮೀಟರ್ಸ್‌ ಓಟದಲ್ಲಿ ಪ್ರಾಜಕ್ತಾ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅರ್ಹತಾ ಸುತ್ತಿನಲ್ಲಿ 18ನಿಮಿಷ 23.92ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಆದರೆ ಫೈನಲ್ ತಲುಪಿರಲಿಲ್ಲ. ಟಾಟಾ ಸ್ಟೀಲ್ ಭುವನೇಶ್ವರ್ ಹಾಫ್‌ ಮ್ಯಾರಥಾನ್‌ನಲ್ಲಿ (1ಗಂ, 33ನಿ.05ಸೆ) ಎರಡನೇ ಸ್ಥಾನ ಪಡೆದಿದ್ದರು.

ಪ್ರಾಜಕ್ತಾ ಅವರ ತಂದೆ ವಿಲಾಸ್ ಗೋಡಬೋಲೆ ಅವರು ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅದರ ನಂತರ ಅವರನ್ನು ಈಗ ಪಾರ್ಶ್ವವಾಯು ಕಾಡುತ್ತಿದೆ. ತಾಯಿ ಅರುಣಾ ಅವರು ಮದುವೆ, ಸಮಾರಂಭಗಳಲ್ಲಿ ಅಡುಗೆ ಸಹಾಯಕಿಯ ಕೆಲಸ ಮಾಡಿ ಪ್ರತಿತಿಂಗಳು ಐದರಿಂದ ಆರು ಸಾವಿರ ರೂಪಾಯಿ ಗಳಿಸುತ್ತಿದ್ದರು. ಅವರ ದುಡಿಮೆಯಿಂದಲೇ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಮದುವೆ, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದೀಗ ಆ ಅಲ್ಪ ಆದಾಯವೂ ಅವರಿಗೆ ಸಿಗುತ್ತಿಲ್ಲ.

’ಕೆಲವು ಸಹೃದಯರು ಬಂದು ನೀಡಿದ ನೆರವಿನಿಂದ  ಅಲ್ಪಸ್ವಲ್ಪ ಆಹಾರ ಲಭಿಸುತ್ತಿದೆ. ಅಕ್ಕಿ, ಬೇಳೆ ಮತ್ತಿತರ ದಿನಸಿ ಪದಾರ್ಥಗಳನ್ನು ಕೊಟ್ಟಿದ್ದಾರೆ. ಅದು ಕೂಡ ಇನ್ನೊಂದೆರಡು ಮೂರು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಮುಂದೇನು ಮಾಡುವುದೆಂದು ತಿಳಿಯುತ್ತಿಲ್ಲ. ಈ ಲಾಕ್‌ಡೌನ್‌ ನಮಗೆ ಕ್ರೂರ ವಿಧಿಯಾಗಿ ಪರಿಣಮಿಸಿದೆ‘ ಎಂದು ಪ್ರಾಜಕ್ತಾ ತಮ್ಮ ಸಂಕಟ ಹೇಳಿಕೊಂಡಿದ್ದಾರೆ. 

’ಮೊದಲಿನಿಂದಲೂ ಬಡತನವನ್ನು ಅನುಭವಿಸುತ್ತಿದ್ದೇವೆ. ಆದರೆ ಸಿಗುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ತತ್ವಾರವಾಗಿದೆ. ಲಾಕ್‌ಡೌನ್ ಮುಗಿಯುವುದು ಯಾವಾಗ? ನನಗೆ ಮತ್ತೆ ಕೆಲಸ ಸಿಗುವುದು ಹೇಗೆ? ಎಂಬ ಚಿಂತೆ ಕಾಡುತ್ತಿದೆ‘ ಎಂದು ಪ್ರಾಜಕ್ತಾ ಅವರ ತಾಯಿ ಅರುಣಾ ದೈನ್ಯದಿಂದ  ಕೇಳುತ್ತಾರೆ.

ಸ್ಥಳೀಯ ಮತ್ತು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಗಳಿಂದಲೂ ಯಾವುದೇ ನೆರವು ದೊರೆತಿಲ್ಲ ಎಂದೂ ಅವರು ಹೇಳಿದ್ದಾರೆ. 

 
 
 
 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು