ಸೋಮವಾರ, ಆಗಸ್ಟ್ 8, 2022
21 °C
ಸಮಾರೋಪ ಸಮಾರಂಭದಲ್ಲಿ ಬಜರಂಗ್ ಪೂನಿಯಾಗೆ ಅವಕಾಶ

ಒಲಿಂಪಿಕ್ಸ್: ಮೇರಿ, ಮನ್‌ಪ್ರೀತ್ ಭಾರತದ ಧ್ವಜಧಾರಿಗಳು

ಪಿಟಿಐ/ಎಪಿ Updated:

ಅಕ್ಷರ ಗಾತ್ರ : | |

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್‌ ಮೇರಿ ಕೋಮ್‌ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಗಳ ಗೌರವ ಲಭಿಸಿದೆ. ಇವರಿಬ್ಬರು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿಯಲಿದ್ದರೆ, ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸಮಾರೋಪ ಸಮಾರಂಭಕ್ಕೆ ಧ್ವಜಧಾರಿಯಾಗಲಿದ್ದಾರೆ.

ಧ್ವಜಧಾರಿಗಳ ಆಯ್ಕೆ ಕುರಿತು ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಗೆ ಮಾಹಿತಿ ನೀಡಿದೆ.

ಲಿಂಗ ಸಮಾನತೆಯನ್ನು ಸಾರುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ತಲಾ ಒಬ್ಬ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗೆ  ಭಾರತದ ಧ್ವಜಧಾರಿ ಗೌರವ ನೀಡಲಾಗಿದೆ. ಇತ್ತೀಚೆಗೆ ಈ ಕುರಿತು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಸುಳಿವು ನೀಡಿದ್ದರು.

ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಭಾರತದ ಏಕೈಕ ಅಥ್ಲೀಟ್‌ ಅಭಿನವ್‌ ಬಿಂದ್ರಾ ಅವರು 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದ್ದರು.

2008ರ ಬೀಜಿಂಗ್ ಒಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಅವರು ಅಗ್ರಸ್ಥಾನ ಗಳಿಸಿದ್ದರು.

ಟೋಕಿಯೊ ಕ್ರೀಡಾಕೂಟವು ಇದೇ 23ರಿಂದ ನಿಗದಿಯಾಗಿದ್ದು, ಆಗಸ್ಟ್‌ 8ರಂದು ಕೊನೆಗೊಳ್ಳಲಿದೆ. ಭಾರತದ 100ಕ್ಕೂ ಹೆಚ್ಚು ಅಥ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಅದೃಷ್ಟಪರೀಕ್ಷೆಗೆ ಸಜ್ಜಾಗಲಿದ್ದಾರೆ.

ಜಪಾನ್‌ಗೆ ಹಚಿಮುರಾ, ಯೂ ಸುಸಾಕಿ: ಬ್ಯಾಸ್ಕೆಟ್‌ಬಾಲ್ ಆಟಗಾರ ರೂಯ್‌ ಹಚಿಮುರಾ ಹಾಗೂ ಮಹಿಳಾ ಕುಸ್ತಿಪಟು ಯೂ ಸುಸಾಕಿ ಅವರು ಟೀಕಯೊ ಕೂಟದಲ್ಲಿ ಜಪಾನ್‌ನ ಧ್ವಜಧಾರಿಗಳಾಗಲಿದ್ದಾರೆ. ಜಪಾನ್‌ನ ಒಲಿಂಪಿಕ್ಸ್ ಸಮಿತಿಯು ಮಂಗಳವಾರ ಈ ವಿಷಯ ತಿಳಿಸಿದೆ. ಹಚಿಮುರಾ ಎನ್‌ಬಿಎ ಲೀಗ್‌ನಲ್ಲಿ ವಾಷಿಂಗ್ಟನ್ ವಿಜಾರ್ಡ್ಸ್ ಪರ ಆಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು