ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ: ಜಾನಪದ ಮೇಳ; ಕಂಬದ ಮೇಲೆ ಕಸರತ್ತು

ವಿಶ್ವವಿದ್ಯಾಲಯ ಕ್ರೀಡಾ ಪ್ರತಿಭೆಗಳ ‘ಉತ್ಸವ’ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
Last Updated 25 ಏಪ್ರಿಲ್ 2022, 5:38 IST
ಅಕ್ಷರ ಗಾತ್ರ

ಬೆಂಗಳೂರು: ವಾದ್ಯಗಳ ಮೇಳ ಮತ್ತು ನೃತ್ಯದ ಸೊಬಗಿನೊಂದಿಗೆ ದೇಶದ ವಿಭಿನ್ನ ಸಂಸ್ಕೃತಿಯ ಸೊಬಗಿನ ಅನಾವಣರಣ; ಕಂಬದ ಮೇಲೆ ಕಸರತ್ತು ಮಾಡಿದ ಕ್ರೀಡಾಪಟುಗಳ ರೋಮಾಂಚಕಾರಿ ಪ್ರದರ್ಶನ...

ಖೇಲೊ ಇಂಡಿಯಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮೆರುಗು ನೀಡಿದ ಕಲಾ–ಸಾಂಸ್ಕೃತಿಕ ಕಾರ್ಯಕ್ರಮಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಭಾವಲೋಕವನ್ನು ಸೃಷ್ಟಿಸಿತು.

ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಕ್ರೀಡಾಕೂಟ ಉದ್ಘಾಟನೆಯಾಗಿರುವುದನ್ನು ಘೋಷಿಸಿದ ನಂತರ ಚಂದನ್ ಶೆಟ್ಟಿ ಮತ್ತು ತಂಡದಿಂದ ಖೇಲೊ ಇಂಡಿಯಾ ಹಾಡು ಹಾಗೂ ನೃತ್ಯದೊಂದಿಗೆ ಕಲಾ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ನಂತರ ಚೆಂಡೆ, ವಾದ್ಯ, ವಿವಿಧ ಜಾನಪದ ತಂಡಗಳ ನೃತ್ಯ ಮುದ ನೀಡಿತು. ಮೊದಲು ಕೊಂಬು ಊದುತ್ತ ಕ್ರಿಡಾಂಗಣದ ಮೂಲೆಯೊಂದರಿಂದ ತಂಡ ಬರುತ್ತಿದ್ದಂತೆ ಮತ್ತೊಂದು ಮೂಲೆಯಿಂದ ಡೊಳ್ಳು ಬಾರಿಸುತ ಇನ್ನೊಂದು ತಂಡ ಬಂತು. ನಂತರ ಚೆಂಡೆ ಮೇಳದ ತಂಡದವರು ಪ್ರವೇಶ ಮಾಡಿದರು.

ನವಿಲು ಕುಣಿತ, ಗೊರವರ ಕುಣಿತ, ಬೊಂಬೆ ಕುಣಿತ, ಪೂಜಾ ಕುಣಿತ, ವೀರಭದ್ರ ವೇಷದ ತಂಡಗಳು ಒಂದೊಂದಾಗಿ ಬಂದವು. ಕಥಕ್ಕಳಿ ಸೇರಿದಂತೆ ವಿವಿಧ ರಾಜ್ಯಗಳ ಕಲಾತಂಡಗಳು ಕೂಡ ಕಾರ್ಯಕ್ರಮಕ್ಕೆ ಮೆರುಗು ತುಂಬಿದವು. ಹುಲಿ ಕುಣಿತ ಮತ್ತು ಯಕ್ಷಗಾನದ ಧೀಂಗಿಣದೊಂದಿಗೆ ಅಂಗಣದ ಸೊಬಗು ಇನ್ನಷ್ಟು ಹೆಚ್ಚಿತು.

ಮಲ್ಲಕಂಬದ ರೋಮಾಂಚನ
ಮೂಡುಬಿದಿರೆಯ ಆಳ್ವಾಸ್ ಮಲ್ಲಕಂಬ ತಂಡದವರ ಪ್ರದರ್ಶನ ಪ್ರೇಕ್ಷಕರ ಎದೆ ಝಲ್ಲೆನಿಸಿತು. ಐದನೇ ತರಗತಿಯಿಂದ ಪದವಿ ವರೆಗಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ನಟರಾಜಾಸನ, ಚಕೋರಾಸನ, ಹ್ಯಾಂಡ್ ಸ್ಟ್ಯಾಂಡ್‌, ಮೌಂಟ್‌, ಸ್ಟಡಲ್, ಫ್ಲ್ಯಾಗ್‌ ಮತ್ತು ಪಿರಮಿಡ್‌ ಆಕೃತಿಗಳು ಮಲ್ಲಕಂಬ ಕ್ರೀಡೆಯ ವೈವಿಧ್ಯತೆಯನ್ನು ಅನಾವರಣಗೊಳಿಸಿದವು. ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ವಂದೇಮಾತರಂ ಗೀತ–ನೃತ್ಯವೂ ಮುದ ನೀಡಿತು.

ಅಂಕ, ಉದ್ಯೋಗ ನೀಡಿ: ವೆಂಕಯ್ಯ ನಾಯ್ಡು
ಶಾಲೆ ಮತ್ತು ಕಾಲೇಜುಗಳಲ್ಲಿ ಕ್ರೀಡಾಪಟುಗಳು ಬೆಳೆಯಬೇಕಾದರೆ ಅವರಿಗೆ ಹೆಚ್ಚು ಅಂಕಗಳನ್ನು ನೀಡಬೇಕು. ಉದ್ಯೋಗದಲ್ಲಿ ಮೀಸಲಾತಿಯನ್ನೂ ಹೆಚ್ಚಿಸಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದರು. ಕ್ರೀಡೆಯನ್ನು ಜೀವನದ ಭಾಗವಾಗಿ ಮಾಡುವಂತೆ ಅವರು ಅಥ್ಲೀಟ್‌ಗಳಿಗೆ ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಮಾತನಾಡಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಕ್ರೀಡಾ ಇಲಾಖೆ ರಾಜ್ಯ ಸಚಿವ ನಿಶಿತ್‌ ಪ್ರಮಾಣಿಕ್‌, ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್‌ ಇದ್ದರು. ಈಜುಪಟು ಶ್ರೀಹರಿ ನಟರಾಜ್‌ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕ್ರೀಡಾಂಗಣಕ್ಕೆ ಅನುರಾಗ್ ದಿಢೀರ್ ಭೇಟಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಜಂಟಿ ಆಯೋಜಕರಾದ ಜೈನ್ ವಿವಿಯ ಆವರಣಕ್ಕೆ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಇಲ್ಲಿನ ಕ್ರೀಡಾಂಗಣಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳನ್ನು ವೀಕ್ಷಿಸಿದ ಅವರು ಕ್ರೀಡಾಪಟುಗಳ ಜೊತೆ ಸಂವಾದವನ್ನೂ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT