ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹುಬ್ಬಳ್ಳಿಯಲ್ಲೊಂದು ಕರಾಟೆ ಕುಟುಂಬ

ಮಿಸ್ಕಿನ್‌ ಕರಾಟೆ ಫ್ಯಾಮಿಲಿ
Last Updated 27 ಸೆಪ್ಟೆಂಬರ್ 2020, 1:57 IST
ಅಕ್ಷರ ಗಾತ್ರ

ಕರಾಟೆ ಆತ್ಮರಕ್ಷಣೆಯ ಕಲೆ (ಮಾರ್ಷಲ್‌ ಆರ್ಟ್‌). ಅದಕ್ಕಿಂತಲೂ ಮಿಗಿಲಾಗಿ ಆತ್ಮವಿಶ್ವಾಸ ಕಲೆ ಹಾಕುವ ಯುದ್ಧಕಲೆ. ಒಂದು ಕುಟುಂಬದಲ್ಲಿ ಒಬ್ಬರು ಕರಾಟೆಯನ್ನು ಕರಗತ ಮಾಡಿಕೊಂಡಿದ್ದರೆ ಅಲ್ಲಿ ಆತ್ಮವಿಶ್ವಾಸ, ಶಿಸ್ತು ಮನೆಮಾಡಿರುತ್ತದೆ. ಒಂದೇ ಮನೆಯಲ್ಲಿ ತಂದೆ–ಮಕ್ಕಳೆಲ್ಲರೂ ಕರಾಟೆ ಕಲಿಗಳಾಗಿದ್ದರೆ ಆ ಕುಟುಂಬವನ್ನು ಕರಾಟೆ ಕುಟುಂಬ ಎಂದು ಕರೆಯಲು ಅಡ್ಡಿಯಿಲ್ಲ. ಅಂಥ ಕರಾಟೆ ಕುಟುಂಬವೊಂದು ಹುಬ್ಬಳ್ಳಿಯಲ್ಲಿದೆ.ಅಪ್ಪ, ಮಕ್ಕಳೆಲ್ಲರೂ ಬ್ಲ್ಯಾಕ್‌ಬೆಲ್ಟ್‌ ಗ್ರೇಡಿಂಗ್‌ನೊಂದಿಗೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸೆಣೆಸಾಡಿ ಪ್ರಶಸ್ತಿ ಗೆದ್ದವರು. ಒಬ್ಬರಿಗಿಂತ ಮತ್ತೊಬ್ಬರು ಮಿಗಿಲು ಎಂಬಷ್ಟು ಸಾಧನೆ ತೋರುತ್ತಿದ್ದಾರೆ. ಅವರೇ ಹುಬ್ಬಳ್ಳಿಯ ಮಿಸ್ಕಿನ್‌ ಕರಾಟೆ ಕುಟುಂಬ.

ಇವರೆಲ್ಲರೂ ಪ್ಲೈಯಿಂಗ್‌ ಕಿಕ್‌ ಮಾಡುತ್ತಿದ್ದರೆ ನೋಡುಗರು ಬೆಕ್ಕಸಬೆರಗಾಗುವರು. ಕಾಲುಗಳನ್ನು ತಲೆಯಿಂದಾಚೆಗೆ ಚಾಚಿ ಕಿಯಾ ಎಂದು ಹೂಂಕರಿಸಿದರೆ ನೋಡುಗರ ಉಸಿರು ಒಂದು ಕ್ಷಣ ನಿಂತ ಅನುಭವ. ಸಾಹಸಮಯ ಸಿನಿಮಾಗಳಲ್ಲಿ ನಾಯಕನಾಗಲಿ, ನಾಯಕಿಗಾರಲಿ ಸ್ಟಂಟ್‌ ಬಳಸಿ ತೋರುವ ಆತ್ಮರಕ್ಷಣಾ ಕಲೆಯನ್ನು ಇವರು ನೇರಾನೇರ ಪ್ರದರ್ಶಿಸುತ್ತಿದ್ದರೆ ಮೂಕಮಿಸ್ಮಿತರಾಗದಿರಲಾಗದು.

ನಾಗರಾಜ ಮಿಸ್ಕಿನ್‌ ವೃತ್ತಿಪರ ಕರಾಟೆ ತರಬೇತುದಾರರು. ಅವರು ನಡೆಸುವ ಕರಾಟೆ ತರಗತಿಗಳಲ್ಲಿ ಮಕ್ಕಳೂ ಜೊತೆಯಾಗಿ ಕರಾಟೆ ತರಬೇತಿಗಳನ್ನು ನೀಡುವುದನ್ನು ನೋಡುವುದೇ ಚೆಂದ. ಮಕ್ಕಳಾದ ಪೂಜಾ ಮಿಸ್ಕಿನ್‌, ಪ್ರಿಯಾ ಮಿಸ್ಕಿನ್‌ ಹಾಗೂ ಓಂಕಾರ ಮಿಸ್ಕಿನ್‌ ಅಪ್ಪನ ಕರಾಟೆ ಕಲಿಕಾ ವೃತ್ತಿಗೆ ಕೈಜೋಡಿಸಿದ್ದಾರೆ. ಇವರು ಅಪ್ಪನ ಕರಾಟೆ ಪಟ್ಟುಗಳನ್ನು ನೋಡಿ, ಅದನ್ನೇ ಆಟವಾಗಿಸಿಕೊಂಡು ಬೆಳೆದವರು. ಹೆಣ್ಣುಮಕ್ಕಳಿಬ್ಬರು ಏಳನೇ ತರಗತಿಯಲ್ಲಿ, ಮಗ ಓಂ ಆರನೇ ತರಗತಿಯಿಂದ ಶಾಸ್ತ್ರೀಯವಾಗಿ ಕರಾಟೆಯನ್ನು ಕರಗತಗೊಳಿಸಿಕೊಂಡಿದ್ದಾರೆ. ಅಪ್ಪ–ಮಕ್ಕಳೆಲ್ಲರೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದು ವಿಶೇಷ.

ಆಸ್ಪೈರ್‌ ಸ್ಫೋರ್ಟ್ಸ್‌ ಕರಾಟೆ ಅಕಾಡೆಮಿ ಸ್ಥಾಪಿಸಿರುವ ನಾಗರಾಜ ಮಿಸ್ಕಿನ್‌ ಸದ್ಯ ಹುಬ್ಬಳ್ಳಿಯಲ್ಲಿ ನಾಲ್ಕು ಕಡೆಗಳಲ್ಲಿ ಗೋಜುರಿಯಾ ಕರಾಟೆ ತರಬೇತಿ ನೀಡುತ್ತಿದ್ದಾರೆ. ಹಿರಿ–ಕಿರಿಯ ಎಲ್ಲ ವಯಸ್ಸಿನವರೂ ಇವರ ತರಗತಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕರಾಟೆಯಲ್ಲಿ ಥರ್ಡ್ ಡಾನ್‌ ಬ್ಲ್ಯಾಕ್‌‌ ‌ಬೆಲ್ಟ್‌ ಗ್ರೇಡ್‌ ಪಡೆದಿರುವ ಸೆನ್‌ಸಾಯ್‌ ನಾಗರಾಜ ಮಿಸ್ಕಿನ್‌ 1997ರಿಂದ ಈಚೆಗೆ ಸಾಕಷ್ಟು ಕರಾಟೆ ಚಾಂಪಿಯನ್‌ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ, ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆಲ್‌ ಇಂಡಿಯಾ ಒಕಿನಾವಾ ಡೋ ಅಸೋಶಿಯೇಸನ್‌ ಸೌಥ್‌ ಇಂಡಿಯಾ ಇಂಟರ್ನ್ಯಾಷನ್‌ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರೆ,ಆಲ್‌ ಇಂಡಿಯಾ ಕರಾಟೆ ಡೋ ಫೆಡರೇಷನ್ ಗವರ್ನಮೆಂಟ್‌ ಆಫ್‌ ಇಂಡಿಯಾ ಆಯೋಜಿಸಿದ್ದ 16ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಫ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯಮಟ್ಟದ ಸಾಕಷ್ಟು ಚಾಂಪಿಯನ್‌ಶಿಫ್‌‌ಗಳಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆ.

ನಾರಾಜ ಮಿಸ್ಕಿನ್‌ ಅವರ ಮೊದಲ ಮಗಳು ಪೂಜಾ ಮಿಸ್ಕಿನ್‌ ಸೆಕೆಂಡ್‌ ಡಾನ್‌ ಬ್ಲ್ಯಾಕ್‌ಬೆಲ್ಟ್‌ ಗ್ರೇಡ್‌ ಪಡೆದಿದ್ದಾರೆ. ಎರಡನೇ ಮಗಳು ಪ್ರಿಯಾ ಮಿಸ್ಕಿನ್‌. ಇಬ್ಬರೂ ಕೂಡ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಫ್‌ಗಳಲ್ಲಿ ಪ್ರಶಸ್ತಿ ಗೆದ್ದ ಕರಾಟೆ ಪಟುಗಳು.

ಪ್ರಿಯಾ ಮಿಸ್ಕಿನ್‌ ಕೂಡ ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಧಾರವಾಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, ಜೈನ್‌ ಯುನಿವರ್ಸಿಟಿ ಆಯೋಜಿಸಿದ 18ನೇ ಮತ್ತು 20ನೇ ಆಲ್‌ ಇಂಡಿಯಾ ಸ್ಫೋರ್ಟ್ಸ್‌ ಎಕ್ಸ್ಟ್ರಾವಾಂಜಾ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಆಯೊಜಿಸಿದ್ದ ಗೋಲ್ಡನ್‌ ಗರ್ಲ್‌ ಕರ್ನಾಟಕ 2019ರಲ್ಲಿ ಭಾಗಿಯಾಗಿದ್ದರು. ಅಲ್ಲದೆ ಹಲವಾರು ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಕಟಾ ಹಾಗೂ ಕುಮಿಟೆಯಲ್ಲಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ವರ್ಷವಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿರುವ ಓಂಕಾರ ಮಿಸ್ಕಿನ್‌ ಕೂಡ ಅಪ್ಪ, ಅಕ್ಕಂದಿರ ಹಾದಿಯಲ್ಲೇ ಸಾಗಿ ಕರಾಟೆಯ ಕಠಿಣ ಪಟ್ಟುಗಳನ್ನು ಮೈಗೂಡಿಸಿಕೊಂಡಿದ್ದಾನೆ. ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಡಿಸುವ ಕರಾಟೆ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾನೆ. ಪಣಜಿಯಲ್ಲಿ ನಡೆದ ಗೋವಾ ಓಪನ್‌ ಆಲ್‌ ಇಂಡಿಯಾ ಕರಾಟೆ ಚಾಂಪಿಯನ್‌ಶಿಫ್‌ನ ಕುಮಿಟೆಯಲ್ಲಿ ಮೊದಲ ಸ್ಥಾನ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾನೆ.

ಮಿಸ್ಕಿನ್‌ ಕರಾಟೆ ಕುಟುಂಬದ ಗರಡಿ ಆಸ್ಪೈರ್ ಸ್ಫೋರ್ಟ್ಸ್‌‌ ಕರಾಟೆ ಅಕಾಡೆಮಿಯಲ್ಲಿ ಹುಬ್ಬಳ್ಳಿಯ ಸಾಕಷ್ಟು ಹಿರಿ–ಕಿರಿಯರು ಪಳಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT