ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ಮೋಟೊ ಜಿಪಿ

Last Updated 11 ಜೂನ್ 2020, 15:08 IST
ಅಕ್ಷರ ಗಾತ್ರ

ಪ್ಯಾರಿಸ್: ಮೋಟೊ ಜಿಪಿ ರೇಸ್‌ನ 2020ನೇ ಸಾಲಿನ ಸ್ಪರ್ಧೆಗಳಿಗೆ ಕೊನೆಗೂ ಕಾಲಕೂಡಿ ಬಂದಿದೆ. ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ರೇಸ್ ನಡೆಯಲಿದೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ. ಕೊರೊನಾ ವೈರಾಣು ಹಾವಳಿಯಿಂದಾಗಿ ಮುಂದೂಡಿದ ಸ್ಪರ್ಧೆಗಳು ಒಂದರ ಹಿಂದೆ ಒಂದು ಸತತವಾಗಿ ನಡೆಯಲಿವೆ ಎಂದು ಕೂಡ ವಿವರಿಸಲಾಗಿದೆ.

ಈ ಋತುವಿನಲ್ಲಿ ಕನಿಷ್ಠ 13 ರೇಸ್‌ಗಳು ನಡೆಯಲಿದ್ದು ಎಲ್ಲ ಸ್ಪರ್ಧೆಗಳಿಗೂ ಯುರೋಪ್ ಆತಿಥ್ಯ ವಹಿಸಲಿದೆ. ಜುಲೈ ಮತ್ತು ನವೆಂಬರ್ ನಡುವೆ ಇವು ನಡೆಯಲಿವೆ. ಪ್ರೇಕ್ಷಕರಿಗೆ ಪ್ರವೇಶ ನೀಡುವುದರ ಬಗ್ಗೆ ಸದ್ಯ ನಿರ್ಧಾರ ಕೈಗೊಂಡಿಲ್ಲ. ಆದರೆ ಪ್ರತಿ ರೇಸ್‌ಗಳು ಕೊರೊನಾ ನಿಯಂತ್ರಣಕ್ಕಾಗಿ ಆಯಾ ದೇಶಗಳು ಜಾರಿಗೊಳಿಸಿರುವ ಮಾರ್ಗನಿರ್ದೇಶನಗಳ ಪ್ರಕಾರ ನಡೆಯಲಿವೆ.

‘ಸ್ಪರ್ಧೆಗಳ ದಿನಾಂಕ, ಎಷ್ಟು ಮಂದಿ ಪ್ರೇಕ್ಷಕರನ್ನು ಒಳಗೆ ಬಿಡಬೇಕು ಎಂಬಿತ್ಯಾದಿಗಳನ್ನು ಅಲ್ಲಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರ ಹಾಗೂ ಸರ್ಕಾರಗಳ ಅನುಮತಿ ಪಡೆದು ನಿರ್ಧರಿಸಲಾಗುವುದು’ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

ಕೊರೊನಾ ಹಾವಳಿಯಿಂದಾಗಿ ಇಟಲಿಯನ್ ಗ್ರಾಂಡ್‌ಪ್ರಿಕ್ಸ್‌ ಸ್ಪರ್ಧೆಯನ್ನು ಬುಧವಾರ ರದ್ದುಮಾಡಲಾಗಿತ್ತು. ಹೀಗಾಗಿ ಈ ಬಾರಿ ಎಂಟು ರೇಸ್‌ಗಳನ್ನು ರದ್ದುಗೊಳಿಸಿದಂತಾಯಿತು. ಈ ಋತುವಿನ ಸ್ಪರ್ಧೆಗಳು ಮಾರ್ಚ್ ಎಂಟರಂದು ಕತಾರ್‌ನಲ್ಲಿ ಆರಂಭವಾಗಬೇಕಾಗಿತ್ತು. ಆದರೆ ಮೋಟೊ2 ಮತ್ತು ಮೋಟೊ3 ಸ್ಪರ್ಧೆಗಳು ಮಾತ್ರ ಅಲ್ಲಿ ನಡೆದಿದ್ದವು.

ಸಿಲ್ವರ್‌ಸ್ಟೋನ್‌ನಲ್ಲಿ ನಡೆಯಬೇಕಾಗಿದ್ದ ಬ್ರಿಟಿಷ್ ರೇಸ್‌, ಸಚ್‌ಸೆನ್‌ರಿಂಗ್‌ನಲ್ಲಿ ನಡೆಯಬೇಕಾಗಿದ್ದ ಜರ್ಮನ್ ಗ್ರ್ಯಾಂಡ್‌ಪ್ರಿಕ್ಸ್‌, ಜಪಾನ್‌, ಆಸ್ಟ್ರೇಲಿಯಾ, ಫಿನ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ರೇಸ್‌ಗಳೂ ನಡೆದಿರಲಿಲ್ಲ. ಮೋಟೊ ಜಿಪಿಗೆ ಸಿದ್ಧತೆಗಳನ್ನು ನಡೆಸಲಾಗಿದೆಯಾದರೂ ಆಯೋಜಕರಾದ ಡೊರ್ನಾದವರು ಸ್ಪೇನ್ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.

ಸ್ಪೇನ್‌ನಲ್ಲಿ ಏಳು ರೇಸ್‌ಗಳು
ಸೆಪ್ಟೆಂಬರ್‌ 27ರಂದು ಬಾರ್ಸಿಲೋನಾದಲ್ಲಿ ನಡೆಯಲಿರುವ ಕಟಲುನ್ಯಾ ಗ್ರ್ಯಾಂಡ್‌ಪ್ರಿಕ್ಸ್‌ ಒಳಗೊಂಡಂತೆ ಸ್ಪೇನ್‌ನಲ್ಲಿ ಒಟ್ಟು ಏಳು ರೇಸ್‌ಗಳು ನಡೆಯಲಿವೆ. ಅರಗಾನ್ ಮತ್ತು ವೆಲೆನ್ಸಿಯಾದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ಬಲ್ಲಿ ‘ಡಬಲ್ ಹೆಡರ್‌’ಗಳು ನಡೆಯಲಿವೆ.

ಆಗಸ್ಟ್ ಒಂಬತ್ತರಂದು ಜೆಕ್ ಗ್ರ್ಯಾಂಡ್‌ಪ್ರಿಕ್ಸ್‌ ನಡೆಯಲಿದ್ದು ಆಸ್ಟ್ರಿಯಾದ ರೆಡ್‌ ಬುಲ್ ರಿಂಗ್‌ ಆಗೂ ಇಟಲಿಯ ಸ್ಯಾನ್ ಮರಿನೊದಲ್ಲಿ ತಲಾ ಎರಡು ರೇಸ್‌ಗಳು ಇರುತ್ತವೆ. ಅಕ್ಟೋಬರ್ 11ರಂದು ಫ್ರೆಂಚ್ ಗ್ರ್ಯಾಂಡ್‌ಪ್ರಿಕ್ಸ್‌ ಸ್ಪರ್ಧೆ ಲೀ ಮ್ಯಾನ್ಸ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT