ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ–ಸಿಂಧು ಫೈನಲ್‌ ‘ಫೈಟ್‌’

ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಕಶ್ಯಪ್‌ಗೆ ನಿರಾಸೆ
Last Updated 15 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಗುವಾಹಟಿ : ಭಾರತದ ಪ್ರಮುಖ ಆಟಗಾರ್ತಿಯರಾದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಅಸ್ಸಾಂ ಬ್ಯಾಡ್ಮಿಂಟನ್‌ ಅಕಾಡೆಮಿಯ ಅಂಗಳದಲ್ಲಿ ಶನಿವಾರ ನಡೆಯುವ ಈ ಹೋರಾಟ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಹೋದ ವರ್ಷ ನಡೆದಿದ್ದ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲೂ ಉಭಯ ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಆಗ ಸೈನಾ ಗೆದ್ದಿದ್ದರು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಸಿಂಧುಗೆ ಈಗ ಉತ್ತಮ ಅವಕಾಶ ಲಭಿಸಿದೆ.

ಅಂಗಳಗಳ ಗುಣಮಟ್ಟ ಸರಿ ಇಲ್ಲ ಎಂದು ಆರೋಪಿಸಿದ್ದ ಸೈನಾ ಗುರುವಾರ ನಿಗದಿಯಾಗಿದ್ದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಆಯೋಜಕರು ಮನವೊಲಿಸಿದ ನಂತರ ರಾತ್ರಿ ಅಂಗಳಕ್ಕಿಳಿದಿದ್ದ ಅವರು 21–11, 21–10 ನೇರ ಗೇಮ್‌ಗಳಿಂದ ಶ್ರುತಿ ಮುಂಡಾದ ಅವರನ್ನು ಮಣಿಸಿದ್ದರು.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ 21–10, 21–10 ನೇರ ಗೇಮ್‌ಗಳಿಂದ ಮುಂಬೈಯ ನೇಹಾ ಪಂಡಿತ್‌ ಅವರನ್ನು ಪರಾಭವಗೊಳಿಸಿದರು.

ಸಂಜೆ ನಡೆದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ಸೈನಾ 21–15, 21–14 ನೇರ ಗೇಮ್‌ಗಳಿಂದ ವೈಷ್ಣವಿ ಭಾಲೆ ಅವರನ್ನು ಮಣಿಸಿದರು.

36 ನಿಮಿಷಗಳ ಈ ಹೋರಾಟದಲ್ಲಿ ಸೈನಾ ಅಬ್ಬರದ ಆಟ ಆಡಿ ಅಭಿಮಾನಿಗಳನ್ನು ರಂಜಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸಿಂಧು 21–10, 22–20ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಅಸ್ಮಿತಾ ಚಾಲಿಹಾ ಅವರನ್ನು ಪರಾಭವಗೊಳಿಸಿದರು.

ಅಗ್ರ ಶ್ರೇಯಾಂಕದ ಆಟಗಾರ್ತಿ ಸಿಂಧು, 38 ನಿಮಿಷಗಳಲ್ಲಿ ಎದುರಾಳಿಯ ಸವಾಲು ಮೀರಿದರು.

ಸೈನಾ 2006, 2007 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಸಿಂಧು 2011 ಮತ್ತು 2013ರಲ್ಲಿ ಚಾಂಪಿಯನ್‌ ಆಗಿದ್ದಾರೆ.

ಕಶ್ಯಪ್‌ಗೆ ಆಘಾತ ನೀಡಿದ ಲಕ್ಷ್ಯ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ ಸೇನ್‌ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಲಕ್ಷ್ಯ 21–15, 21–16ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಪರುಪಳ್ಳಿ ಕಶ್ಯಪ್‌ಗೆ ಆಘಾತ ನೀಡಿದರು.

17 ವರ್ಷ ವಯಸ್ಸಿನ ಲಕ್ಷ್ಯ ಎರಡನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು. ಉತ್ತರಾಖಂಡದ ಆಟಗಾರ 2017ರ ಚಾಂಪಿಯನ್‌ಷಿಪ್‌ನಲ್ಲಿ ಸೌರಭ್‌ ವರ್ಮಾ ಎದುರು ಸೋತಿದ್ದರು.

ಶನಿವಾರ ನಡೆಯುವ ಫೈನಲ್‌ನಲ್ಲಿ ಅವರು ಮತ್ತೊಮ್ಮೆ ಸೌರಭ್‌ ಸವಾಲು ಎದುರಿಸಲಿದ್ದಾರೆ.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ಸೌರಭ್‌ 21–14, 21–17ರಲ್ಲಿ ಮುಂಬೈಯ ಕೌಶಲ್‌ ಧರಮ್‌ಮರ್‌ ಅವರನ್ನು ಮಣಿಸಿದರು. ಈ ಹೋರಾಟ 44 ನಿಮಿಷ ನಡೆಯಿತು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಸೌರಭ್‌ 21–11, 21–23, 21–18ರಲ್ಲಿ ಬಿ.ಸಾಯಿ ಪ್ರಣೀತ್‌ ಎದುರು ಗೆದ್ದಿದ್ದರು.

ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ರೋಹನ್‌ ಕಪೂರ್‌ ಮತ್ತು ಕುಹೂ ಗಾರ್ಗ್‌ 21–15, 21–16ರಲ್ಲಿ ವಿಘ್ನೇಶ್‌ ದೇವಳ್ಕರ್‌ ಮತ್ತು ವಿ.ಹರಿಕಾ ಅವರನ್ನು ಸೋಲಿಸಿದರು. ಈ ಹೋರಾಟ 32 ನಿಮಿಷ ನಡೆಯಿತು.

ಇನ್ನೊಂದು ಪಂದ್ಯದಲ್ಲಿ ಮನು ಅತ್ರಿ ಮತ್ತು ಕೆ.ಮನೀಷಾ 21–18, 21–17ರಲ್ಲಿ ಶ್ಲೋಕ್‌ ರಾಮಚಂದ್ರನ್‌ ಮತ್ತು ಯು.ಕೆ.ಮಿಥುಲಾ ಅವರನ್ನು ಮಣಿಸಿದರು.

ಮಹಿಳಾ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಹೋರಾಟದಲ್ಲಿ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್‌.ರಾಮ್‌ 21–13, 21–16ರಲ್ಲಿ ಕುಹೂ ಗಾರ್ಗ್‌ ಮತ್ತು ಅನೌಷ್ಕಾ ಪಾರಿಖ್‌ ಎದುರು ಗೆದ್ದರು.

ಮತ್ತೊಂದು ಹಣಾಹಣಿಯಲ್ಲಿ ಶಿಖಾ ಗೌತಮ್‌ ಮತ್ತು ಕೆ.ಅಶ್ವಿನಿ ಭಟ್‌ 21–19, 24–22ರಲ್ಲಿ ಅಪರ್ಣ ಬಾಲನ್‌ ಮತ್ತು ಕೆ.ಪಿ.ಶ್ರುತಿ ಅವರನ್ನು ಪರಾಭವಗೊಳಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಚಿರಾಗ್‌ ಶೆಟ್ಟಿ 21–17, 21–18ರಲ್ಲಿ ಸನ್ಯಮ್‌ ಶುಕ್ಲಾ ಮತ್ತು ಅರುಣ್‌ ಜಾರ್ಜ್‌ ಎದುರು ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT