ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕ್ವಾರ್ಟರ್‌ಗೆ ಕರ್ನಾಟಕ ಮಹಿಳಾ ತಂಡ

Last Updated 26 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಮಹಿಳಾ ತಂಡದವರು ಪಂಜಾಬ್‌ನ ಲುಧಿಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುನಾನಕ್‌ ದೇವ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 54–47 ಪಾಯಿಂಟ್ಸ್‌ನಿಂದ ರಾಜಸ್ಥಾನವನ್ನು ಮಣಿಸಿತು.

ಎಂಟರ ಘಟ್ಟದ ಪೈಪೋಟಿಯಲ್ಲಿ ಕರ್ನಾಟಕ ತಂಡವು ಬಲಿಷ್ಠ ರೈಲ್ವೇಸ್‌ ಎದುರು ಆಡಲಿದೆ.

ರಾಜಸ್ಥಾನ ವಿರುದ್ಧ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಪಾರಮ್ಯ ಮೆರೆದ ರಾಜ್ಯ ತಂಡವು 32–19ರಿಂದ ಮುನ್ನಡೆ ಗಳಿಸಿತ್ತು. ನಂತರದ ಎರಡು ಕ್ವಾರ್ಟರ್‌ಗಳಲ್ಲಿ ರಾಜಸ್ಥಾನ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಹೀಗಿದ್ದರೂ ಕರ್ನಾಟಕ ತಂಡದ ಸವಾಲು ಮೀರಿನಿಲ್ಲಲು ಆಗಲಿಲ್ಲ.

ಕರ್ನಾಟಕದ ಪರ ಲೋಪಮುದ್ರ (22), ವರ್ಷಾ (12) ಮತ್ತು ಜಿ.ಚಂದನಾ (10) ಅವರು ಮಿಂಚಿದರು.

ಎಂಟರ ಘಟ್ಟದಲ್ಲಿ ಎಡವಿದ ಪುರುಷರು: ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಎಂಟರ ಘಟ್ಟದಲ್ಲಿ ಎಡವಿತು.

ರೈಲ್ವೇಸ್‌ 93–78 ಪಾಯಿಂಟ್ಸ್‌ನಿಂದ ಕರ್ನಾಟಕವನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿತು.

ಮೊದಲ ಕ್ವಾರ್ಟರ್‌ನ ಆಟ ಮುಗಿದಾಗ 27–9ರಿಂದ ಮುಂದಿದ್ದ ಕರ್ನಾಟಕ ತಂಡವು ನಂತರದ ಎರಡು ಕ್ವಾರ್ಟರ್‌ಗಳಲ್ಲಿ ಮಂಕಾಯಿತು. ಮೂರನೇ ಕ್ವಾರ್ಟರ್‌ನಲ್ಲಿ 20–17ರಿಂದ ಮುನ್ನಡೆ ಪಡೆದರೂ ರಾಜ್ಯ ತಂಡಕ್ಕೆ ಗೆಲುವು ಕೈಗೆಟುಕದಾಯಿತು.

ಕರ್ನಾಟಕ ತಂಡದ ಎಂ.ಹರೀಶ್‌ 26 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ಅನಿಲ್‌ಕುಮಾರ್‌ (19) ಮತ್ತು ಅರವಿಂದ್‌ ಆರ್ಮುಗಂ (11) ಅವರೂ ಮಿಂಚಿದರು.

ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಧ್ಯಪ್ರದೇಶ 64–59ರಲ್ಲಿ ದೆಹಲಿ ಎದುರೂ, ಪಂಜಾಬ್‌ 72–65ರಲ್ಲಿ ತೆಲಂಗಾಣ ವಿರುದ್ಧವೂ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT