ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌: 255 ಈಜುಪಟುಗಳ ಪೈಪೋಟಿ

Last Updated 8 ನವೆಂಬರ್ 2022, 14:53 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ಆಶ್ರಯದಲ್ಲಿ ನವೆಂಬರ್ 12 ಹಾಗೂ 13 ರಂದು ನಗರದಲ್ಲಿ ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್’ ಆಯೋಜಿಸಲಾಗಿದ್ದು, ಭಾರಿ ನಗದು ಬಹುಮಾನ ಮತ್ತು ಸ್ಪರ್ಧೆಯಲ್ಲಿ ಹೊಸ ಮಾದರಿಯ ಪರಿಚಯ ವಿಶೇಷ ಆಕರ್ಷಣೆ ಎನಿಸಿದೆ.

‘ಈಜುಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನಗರದಲ್ಲಿ 2012 ರಲ್ಲಿ ಎನ್‌ಎಸಿ ಆರಂಭಿಸಲಾಗಿದೆ. ಈಜು ಕೇಂದ್ರದ ದಶಮಾನೋತ್ಸವ ಆಚರಣೆ ಅಂಗವಾಗಿ ಈಗ ಕೂಟ ಆಯೋಜಿಸಲಾಗುತ್ತಿದೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್‌ ನಿಜಾವನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ಮಾತ್ರವಲ್ಲದೆ ಹರಿಯಾಣ, ಗುಜರಾತ್‌ ಮತ್ತು ಪಶ್ಚಿಮ ಬಂಗಾಳದಿಂದಲೂ ಈಜುಪಟುಗಳು ಭಾಗವಹಿಸಲಿದ್ದಾರೆ. ಕರ್ನಾಟಕದ 100ಕ್ಕೂ ಅಧಿಕ ಸ್ಪರ್ಧಿಗಳು ಸೇರಿದಂತೆ 255 ಈಜುಪಟುಗಳು ಈ ಆಹ್ವಾನಿತ ಕೂಟದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

'ಬಾಲಕ ಮತ್ತು ಬಾಲಕಿಯರಿಗೆ 12 ರಿಂದ 14 ವರ್ಷ (ಗುಂಪು 2), 15 ರಿಂದ 17 ವರ್ಷ (ಗುಂ‍‍ಪು 1) ಹಾಗೂ 18 ವರ್ಷಕ್ಕಿಂತ ಮೇಲಿನ (ಸೀನಿಯರ್‌) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಛಾಪು ಮೂಡಿಸಿರುವ ಶಿವ ಶ್ರೀಧರ್‌, ವೈಷ್ಣವ್‌ ಹೆಗ್ಡೆ, ಎಸ್‌.ಧನುಷ್‌ ಮತ್ತು ರಿಧಿಮಾ ವೀರೇಂದ್ರಕುಮಾರ್‌ ಅವರು ಪಾಲ್ಗೊಳ್ಳುವರು’ ಎಂದರು.

‘ಇಂತಹ ದೊಡ್ಡಮಟ್ಟಿನ ಕೂಟ ಆಯೋಜಿಸಿ, ಈಜು ಸ್ಪರ್ಧೆಗೆ ಹೊಸ ದಿಶೆಯನ್ನು ತೋರುವುದು ನಮ್ಮ ಉದ್ದೇಶ. ಸ್ಪರ್ಧಿಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಈ ಚಾಂಪಿಯನ್‌ಷಿಪ್‌ ₹ 10 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ಇದು ಭಾರತದಲ್ಲಿ ಖಾಸಗಿ ಈಜು ಸಂಸ್ಥೆಯೊಂದು ಆಯೋಜಿಸುವ ಅತಿದೊಡ್ಡ ಕೂಟ ಎನಿಸಿಕೊಳ್ಳಲಿದೆ’ ಎಂದು ಹೇಳಿದರು.

‘ಪ್ರತಿ ವರ್ಷವೂ ಈ ಚಾಂಪಿಯನ್‌ಷಿಪ್‌ ಆಯೋಜಿಸುವುದು ನಮ್ಮ ಗುರಿ. ಮುಂದಿನ ಬಾರಿ ಅಂತರರಾಷ್ಟ್ರೀಯಮಟ್ಟದ ಕೂಟ ಆಯೋಜಿಸುವ ಚಿಂತನೆಯೂ ಇದೆ’ ಎಂದರು.

‘ಸ್ಪರ್ಧಿಗಳು, ಕೋಚ್‌ ಮತ್ತು ಅಧಿಕಾರಿಗಳು ಒಳಗೊಂಡಂತೆ 400ಕ್ಕೂ ಅಧಿಕ ಮಂದಿಗೆ ಎನ್‌ಎಸಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ನುಡಿದರು.

ಸ್ಕಿನ್ಸ್‌ ಮಾದರಿ ಪರಿಚಯ: ಎನ್‌ಎಸಿ ಕಾರ್ಯಕ್ರಮ ಸಂಯೋಜಕ ಶರತ್‌ಚಂದ್ರ ಮಾತನಾಡಿ, ‘ಈ ಚಾಂಪಿಯನ್‌ಷಿಪ್‌ನಲ್ಲಿ ಸಾಂಪ್ರದಾಯಿಕ ಈಜು ಸ್ಪರ್ಧೆಗಳ ಜತೆಯಲ್ಲೇ ‘ಸ್ಕಿನ್ಸ್‌’ ಎಂಬ ಹೊಸ ಮಾದರಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು.

ಯೂರೋಪ್‌ ಮತ್ತು ಅಮೆರಿಕದಲ್ಲಿ ನಡೆಯುವ ಅಂತರರಾಷ್ಟ್ರೀಯ ಈಜು ಲೀಗ್‌ನಲ್ಲಿ ಸ್ಕಿನ್ಸ್‌ ಮಾದರಿಯಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು, ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಈ ಮಾದರಿಯಲ್ಲಿ ಫೈನಲ್ಸ್‌ನಲ್ಲಿ ಒಂದೇ ರೇಸ್‌ನಲ್ಲಿ ವಿಜೇತರ ನಿರ್ಧಾರ ಆಗುವುದಿಲ್ಲ. ಸ್ಪರ್ಧಿಗಳು ಫೈನಲ್ಸ್‌ನಲ್ಲಿ ಹಲವು ಸುತ್ತುಗಳ ರೇಸ್‌ಗಳಲ್ಲಿ ಭಾಗವಹಿಸಬೇಕಿದೆ. 50 ಮೀ. ವಿಭಾಗದ ಎಲ್ಲ ಸ್ಪರ್ಧೆಗಳು ಸ್ಕಿನ್ಸ್‌ ಮಾದರಿಯಲ್ಲಿ ನಡೆಯಲಿವೆ ಎಂದು ನುಡಿದರು.

ಸಜನ್‌ ಪ್ರಕಾಶ್‌ ಉದ್ಘಾಟನೆ: ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಮುನಿರೆಡ್ಡಿ ಬಡಾವಣೆ, ಪದ್ಮನಾಭನಗರದಲ್ಲಿರುವ ಈಜು ಕೇಂದ್ರದಲ್ಲಿ ನಡೆಯುವ ಕೂಟವನ್ನು ಒಲಿಂಪಿಯನ್‌ ಈಜುಪಟು ಸಜನ್‌ ಪ್ರಕಾಶ್‌ ಅವರು ನ.12 ರಂದು ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.

ಎನ್‌ಎಸಿ ಕಾರ್ಯಕ್ರಮ ಸಂಯೋಜಕ ಅಂಕುಶ್‌, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅಭಿಷೇಕ್, ಮೇಲ್ವಿಚಾರಕ ಲೋಕೇಶ್‌ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಗೆದ್ದವರಿಗೆ ₹10 ಸಾವಿರ ನಗದು
ವಿವಿಧ ವಿಭಾಗಗಳ ವಿಜೇತರಿಗೆ ಪದಕದ ಜತೆ ನಗದು ಬಹುಮಾನ ಲಭಿಸಲಿದೆ. ‍ಪ್ರತಿ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರು ಕ್ರಮವಾಗಿ ತಲಾ ₹ 10 ಸಾವಿರ, ₹ 7 ಸಾವಿರ ಹಾಗೂ ₹ 5 ಸಾವಿರ ನಗದು ಬಹುಮಾನ ಪಡೆಯಲಿದ್ದಾರೆ.

ಸ್ಕಿನ್ಸ್‌ ಮಾದರಿ ಸ್ಪರ್ಧೆಯಲ್ಲಿ ಮೊದಲ ಎಂಟು ಸ್ಥಾನ ಪಡೆಯುವವರಿಗೆ ₹ 6,000 ದಿಂದ ₹ 500ರ ವರೆಗಿನ ನಗದು ಬಹುಮಾನ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT