ಭಾನುವಾರ, ಜೂನ್ 20, 2021
28 °C

PV Web Exclusive | ಒಲಿಂಪಿಕ್ಸ್‌: ಭಾರತಕ್ಕೆ ‘ನೀರಾಟ’ದಲ್ಲಿ ಭರವಸೆ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಇತ್ತ ಬಯೊಬಬಲ್ ಒಡೆದು ವೈರಸ್ ಒಳನುಗ್ಗಿದ ಕಾರಣದಿಂದಾಗಿ ‘ಮಿಲಿಯನ್ ಡಾಲರ್ ಬೇಬಿ’ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದ ನಂತರ ಆಟಗಾರರೆಲ್ಲ ಮನೆ ಸೇರುವ ತವಕದಲ್ಲಿದ್ದರು. ಅತ್ತ ಜಪಾನ್‌ನ ಟೋಕಿಯೊದಲ್ಲಿ ನಡೆದ ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್‌ ಸಿಂಗ್ ಗೆಲುವಿನ ನಗೆ ಬೀರಿದ್ದರು. ಏಷ್ಯಾ ಒಷಿನಿಯಾ ಅರ್ಹತಾ ಟೂರ್ನಿಯ ಲೈಟ್‌ವೇಟ್ ಡಬಲ್‌ ಸ್ಕಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದರು.

ಹಾಗೆ ನೋಡಿದರೆ ‘ನೀರಾಟ’ದಲ್ಲಿ ಭಾರತ ಈ ಬಾರಿ ಅಪ್ರತಿಮ ಸಾಧನೆ ಮಾಡಿದೆ. ಏಪ್ರಿಲ್ ಎರಡನೇ ವಾರ ಭಾರತದ ಸೇಲಿಂಗ್ ಪಟುಗಳು ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿ ಗಮನ ಸೆಳೆದಿದ್ದರು. ನೇತ್ರ ಕುಮನನ್, ಗಣಪತಿ ಚೆಂಗಪ್ಪ, ವರುಣ್ ಠಕ್ಕರ್ ಮತ್ತು ವಿಷ್ಣು ಸರವಣನ್ ಅವರು ಟೋಕಿಯೊ ಕ್ರೀಡೆಗಳಿಗೆ ಟಿಕೆಟ್ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಒಮಾನ್‌ನಲ್ಲಿ ನಡೆದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಇವರೆಲ್ಲರೂ ‘ಪಾಸ್‌’ ಆಗಿದ್ದರು.

ಭಾರತದ ನಾಲ್ವರು ಸೇಲಿಂಗ್ ಪಟುಗಳು ಜೊತೆಯಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದು ಇದೇ ಮೊದಲು. ಮೂರು ವಿಭಿನ್ನ ವಿಭಾಗಗಳಲ್ಲಿ (49 ಕ್ಲಾಸ್‌, ಲೇಜರ್ ಕ್ಲಾಸ್ ಮತ್ತು ಲೇಜರ್ ರೇಡಿಯಲ್) ಆಯ್ಕೆಯಾಗಿರುವುದೂ ಇದೇ ಮೊದಲು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಮೊದಲ ಮಹಿಳಾ ಸೇಲಿಂಗ್ ಪಟು ಎಂಬ ಹೆಗ್ಗಳಿಕೆ ನೇತ್ರ ಕುಮನನ್ ಅವರದಾಗಿದೆ.

ರೋಯಿಂಗ್‌ಗಿಂತ ಸೇಲಿಂಗ್ ತುಂಬಾ ಸವಾಲಿನದ್ದು. ರೋಯಿಂಗ್ ವ್ಯವಸ್ಥಿತವಾಗಿ ಸಿದ್ಧಗೊಳಿಸಿರುವ ಕೆರೆ ಅಥವಾ ಸರೋವರದಲ್ಲಿ ನಡೆಯುತ್ತದೆ. ಆದರೆ ಸೇಲಿಂಗ್ ನಡೆಯುವುದು ಸಾಗರದಲ್ಲಿ. ಬೃಹತ್ ತೆರೆಗಳಿಗೆ ಎದೆಯೊಡ್ಡಿ ಚಳಿ, ಗಾಳಿ, ಹಸಿವನ್ನು ತಡೆದು, ಜಲಚರಗಳ ದಾಳಿಯನ್ನು ತಪ್ಪಿಸಿಕೊಂಡು ಸಾಗಬೇಕಾದ ಕಠಿಣ ಕ್ರೀಡೆ ಅದು.

ಈ ಬಾರಿ ಒಮಾನ್‌ ಸ್ಪರ್ಧೆಗೂ ಮುನ್ನ ಅಬುಧಾಬಿಯಲ್ಲಿ ನಡೆದ ಅಭ್ಯಾಸದ ವೇಳೆ ಮೂರು ಡಾಲ್ಫಿನ್‌ಗಳು ಎರಡು ಅಡಿಗಳಷ್ಟು ಹತ್ತಿರಕ್ಕೆ ಬಂದಿದ್ದವು ಎಂದು ಗಣಪತಿ ಚೆಂಗಪ್ಪ ಅವರು ಹೇಳಿಕೊಂಡಿದ್ದರು. 2019ರಲ್ಲಿ ನ್ಯೂಜಿಲೆಂಡ್‌ನಲ್ಲಿ ಅಭ್ಯಾಸದ ನಡುವೆ ವಿಶ್ರಾಂತಿ ಪಡೆಯುತ್ತಿದ್ದಾಗ ತಮ್ಮ ದೋಣಿಯಷ್ಟೇ ದೊಡ್ಡ ಗಾತ್ರದ ಶಾರ್ಕ್‌ ಒಂದು ಕೆಲವೇ ಅಡಿಗಳ ಅಂತರದಲ್ಲಿ ಇದ್ದದ್ದನ್ನು ವರುಣ್ ಠಕ್ಕರ್ ಕೂಡ ನೆನಪಿಸಿಕೊಂಡಿದ್ದರು.

2000ನೇ ಇಸವಿಯ ವರೆಗೆ ಯಾಟಿಂಗ್‌ ಎಂದು ಕೂಡ ಕರೆಯಲಾಗುತ್ತಿದ್ದ ಸೇಲಿಂಗ್‌ ಸ್ಪರ್ಧೆಯನ್ನು ಒಲಿಂಪಿಕ್ಸ್‌ನ ಮೊದಲ ಆವೃತ್ತಿಯಲ್ಲೇ ಸೇರಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕೈಬಿಡಲಾಗಿತ್ತು. ಮೂರನೇ ಆವೃತ್ತಿಯಿಂದ ಸತತವಾಗಿ ನಡೆಯುತ್ತಿದೆ. ಇದನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದು 2008ರಲ್ಲಿ. ಭಾರತ 1972ರಿಂದ ಒಲಿಂಪಿಕ್ಸ್‌ನ ಸೇಲಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

‘ಗ್ಲಾಮರ್’ ಸ್ಪರ್ಶ ಇಲ್ಲದ ಕಾರಣ ಈ ಕ್ರೀಡೆ ಹೆಚ್ಚಾಗಿ ಯಾರ ಗಮನಕ್ಕೂ ಬರುವುದಿಲ್ಲ. ಈ ಕಾರಣದಿಂದ ಭಾರತ ಯಾಟಿಂಗ್ ಸಂಸ್ಥೆಯೂ ಕಷ್ಟಪಟ್ಟು ಸೇಲಿಂಗ್‌ ಪಟುಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ.

ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಶ್ರೇಯಸ್ಸು ಸೋಲಿ ಕಾಂಟ್ರಾಕ್ಟರ್ ಮತ್ತು ಎ.ಎ.ಬಸಿತ್‌ ಅವರದು. 1976 ಮತ್ತು 1980ರಲ್ಲಿ ಭಾರತದಿಂದ ಯಾರಿಗೂ ಅರ್ಹತೆ ಗಿಟ್ಟಿಸಲು ಆಗಲಿಲ್ಲ. ಮುಂದಿನ ಬಾರಿ ಫಾರೂಕ್ ತಾರಾಪುರ್ ಮತ್ತು ಧ್ರುವ ಭಂಡಾರಿ ಪಾಲ್ಗೊಂಡರು. ತಾರಾಪುರ್ ಮುಂದಿನ ಎರಡು ಬಾರಿಯೂ ಅರ್ಹತೆ ಗಳಿಸಿ ದಾಖಲೆ ನಿರ್ಮಿಸಿದರು. ಆ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ ಕೆಲಿ ರಾವ್ ಮತ್ತು ಸೈರಸ್ ಕಾಮಾ ಅವರು ತಾರಾಪುರ್ ಜೊತೆ ಇದ್ದರು.

ನಂತರದ ಎರಡು ಆವೃತ್ತಿಗಳಲ್ಲಿ ಮತ್ತೆ ಭಾರತಕ್ಕೆ ನಿರಾಸೆ ಕಾದಿತ್ತು. ಯಾರೊಬ್ಬರೂ ಅರ್ಹತೆ ಗಳಿಸಿರಲಿಲ್ಲ. ಮಾಳವ ಶ್ರಾಫ್‌, ಸುಮಿತ್ ಪಟೇಲ್‌ ಮುಂದಿನ ಕೂಟದಲ್ಲಿ, ನಚತಾರ್ ಸಿಂಗ್ ಅನಂತರದ ಕೂಟದಲ್ಲಿ ಪಾಲ್ಗೊಂಡು ಮತ್ತೆ ಭರವಸೆ ಮೂಡಿಸಿದರು. ಕಳೆದ ಎರಡು ಆವೃತ್ತಿಗಳಲ್ಲಿ ಭಾರತ ಸ್ಪರ್ಧಿಸಿರಲಿಲ್ಲ. ಈಗ ಮತ್ತೆ ಹೊಸ ಬೆಳಕು ಮೂಡಿದೆ.

ರೋಯಿಂಗ್‌ನಲ್ಲಿ ಚಿನ್ನದ ಸಾಧನೆ

ಸೇಲಿಂಗ್‌ ಜೊತೆ ತುಲನೆ ಮಾಡಿದರೆ ರೋಯಿಂಗ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಏಷ್ಯನ್ ಗೇಮ್ಸ್‌, ಏಷ್ಯನ್ ರೋಯಿಂಗ್ ಚಾಂಪಿಯನ್‌ಷಿಪ್‌ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ‘ಚಿನ್ನ’ದ ಬೇಟೆಯಾಡಿದೆ. ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಎಂಟು ಚಿನ್ನ ಸೇರಿದಂತೆ 15 ಪದಕ ಗೆದ್ದಿರುವ ರೋಯಿಂಗ್ ಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನ ಸೇರಿದಂತೆ 23 ಪದಕ ಗಳಿಸಿದ್ದಾರೆ. ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ 26 ಚಿನ್ನ ಒಳಗೊಂಡಂತೆ ಗಳಿಸಿದ ಒಟ್ಟು ಪದಕಗಳ ಸಂಖ್ಯೆ ಶತಕ ದಾಟಿದೆ.

ಒಲಿಂಪಿಕ್ಸ್‌ನಲ್ಲಿ ಒಟ್ಟು 10 ಮಂದಿ ಭಾರತೀಯರು ಈ ವರೆಗೆ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಪಾಲ್ಗೊಂಡಿದ್ದ ದತ್ತು ಭೋಕನಾಲ್ 13ನೇ ಸ್ಥಾನ ಗಳಿಸಿ ಈ ವರೆಗಿನ ಭಾರತದ ಗರಿಷ್ಠ ಸಾಧನೆ ಮಾಡಿದ ಶ್ರೇಯಸ್ಸು ತಮ್ಮದಾಗಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು