ಸೋಮವಾರ, ಡಿಸೆಂಬರ್ 6, 2021
27 °C

ಭಾರತದ ‘ಶ್ರೇಷ್ಠ ಚೆಸ್ ‍ಪಟು‘ ನಿಹಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್–19ರ ಸಂದರ್ಭದಲ್ಲಿ ಕ್ರೀಡಾಲೋಕದಲ್ಲಿ ಹೆಚ್ಚು ಮಿಂಚಿದವರು ಭಾರತದ ಚೆಸ್ ಪಟುಗಳು. ಯುವ ಆಟಗಾರರಂತೂ ಈ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪಟ್ಟ ಶ್ರಮಕ್ಕೆ ಚಾಂಪಿಯನ್ ಪಟ್ಟ ಸೇರಿದಂತೆ ಉತ್ತಮ ‘ಉಡುಗೊರೆ’ಗಳು ಅವರಿಗೆ ಸಿಕ್ಕಿವೆ. ಈ ಪೈಕಿ ನಿಹಾಲ್‌ ಸರೀನ್ ಈಗ ಅಂತರರಾಷ್ಟ್ರೀಯ ಚೆಸ್ ವೆಬ್‌ಸೈಟ್ ಆಗಿರುವ ‘ಚೆಸ್ ಡಾಟ್‌ ಕಾಂ’ನ ಮನ್ನಣೆಗೆ ಪಾತ್ರರಾಗಿದ್ದಾರೆ. ಭಾರತದ ಕಳೆದ ವರ್ಷದ ಉತ್ತಮ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿರುವ ನಿಹಾಲ್ ಸರೀನ್ ಈ ಬಾರಿ ಆನ್‌ಲೈನ್ ಮೂಲಕ ನಡೆದ ಚೆಸ್ ಟೂರ್ನಿಗಳಲ್ಲಿ ತೋರಿದ ಸಾಧನೆಯೇ ಈ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣ. ವಿಶ್ವದ ಖ್ಯಾತ ಆಟಗಾರರಾದ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ವಿಶ್ವನಾಥನ್‌ ಆನಂದ್‌ ಅವರಿಂದ  ಮೆಚ್ಚುಗೆ ಗಳಿಸಿರುವ ಅವರು ಇತ್ತೀಚೆಗೆ ನಡೆದ 18 ವರ್ಷದೊಳಗಿನವರ ವಿಶ್ವ ಆನ್‌ಲೈನ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಕೋವಿಡ್–19ರ ಸಂದರ್ಭದಲ್ಲಿ ಜಗತ್ತಿನಾದ್ಯಂತ ಆನ್‌ಲೈನ್ ಚೆಸ್ ಟೂರ್ನಿಗಳು ನಡೆದಿದ್ದವು. ಚೆಸ್ ಒಲಿಂಪಿಯಾಡ್‌ನಲ್ಲಿ ರಷ್ಯಾ ಜೊತೆ ಜಂಟಿಯಾಗಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ಅವರಿದ್ದರು. ಚೆಸ್‌ ಡಾಟ್ ಕಾಂ ನಡೆಸಿದ್ದ ವಿಶ್ವ ಜೂನಿಯರ್‌ ಸ್ಪೀಡ್‌ ಚೆಸ್‌ನಲ್ಲೂ ಗೆಲುವು ಸಾಧಿಸಿದ್ದರು. ಕೇಪ್‌ಚೆಸ್‌ ಆನ್‌ಲೈನ್‌ ಟೂರ್ನಿಯಲ್ಲೂ ಚಾಂಪಿಯನ್‌ ಆಗಿದ್ದರು.

ಸಾಂಪ್ರದಾಯಿಕ ಶೈಲಿಯ ಆಟದಲ್ಲಿ 2,620ರ ರೇಟಿಂಗ್‌ ಹೊಂದಿರುವ ಈ ಆಟಗಾರ ಸಣ್ಣ ವಯಸ್ಸಿನಲ್ಲೇ  ಚೆಸ್‌ ಆಡಲು ಕಲಿತಿದ್ದರು. 2011ರಲ್ಲಿ ಏಳು ವರ್ಷದೊಳಗಿನವರಿಗಾಗಿ ಕೇರಳದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ನಂತರ ಕೇರಳ ರಾಜ್ಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ ಅಪ್‌ ಆದರು. ಆಮೇಲೆ ಅವರ ಸಾಧನೆ ನಾಗಾಲೋಟದಲ್ಲಿ ಸಾಗಿತು. 12 ವರ್ಷ ಎಂಟು ತಿಂಗಳಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಪಟ್ಟ ಪಡೆದ ಆಟಗಾರ ಅವರು.

ಡರ್ಬನ್‌ನಲ್ಲಿ ನಡೆದ ವಿಶ್ವ 10 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆದ ನಿಹಾಲ್ 14 ವರ್ಷದಲ್ಲೇ 2600 ಎಲೊ ರೇಟಿಂಗ್‌ ಸಾಧನೆ ಮಾಡಿದರು. ಅವರು ಮೊದಲ ಬಾರಿ ಸೂಪರ್‌ ಟೂರ್ನಿ ಆಡಿದ್ದು 2018ರಲ್ಲಿ, ಕೋಲ್ಕತ್ತದಲ್ಲಿ. ವಿಶ್ವನಾಥನ್‌ ಆನಂದ್‌, ಶಕ್ರಿಯಾರ್‌ ಮೆಮಡ್ಯರೊವ್‌, ಸೆರ್ಗಿ ಕರ್ಯಾಕಿನ್‌, ಪೆಂಟ್ಯಾಲ ಹರಿಕೃಷ್ಣ, ವಿದಿತ್‌ ಸಂತೋಷ್‌ ಗುಜರಾತಿ, ಸೂರ್ಯಶೇಖರ ಗಂಗೂಲಿ ಮುಂತಾದವರ ಎದುರಿನ ಹಣಾಹಣಿಯಲ್ಲಿ ಅವರು ಡ್ರಾ ಸಾಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು