ಬ್ಯಾಸ್ಕೆಟ್‌ಬಾಲ್: ನಿಟ್ಟೆ ಪುರುಷ, ಮಹಿಳಾ ತಂಡಗಳಿಗೆ ಪ್ರಶಸ್ತಿ

ಮಂಗಳೂರು: ನಿಟ್ಟೆ ಪುರುಷರ ಮತ್ತು ಮಹಿಳೆಯರ ತಂಡಗಳು ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಮತ್ತು ನಿಟ್ಟೆ ವಿಶ್ವವಿದ್ಯಾಲಯಗಳ ಆಶ್ರಯದಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತಮ್ಮದಾಗಿಸಿಕೊಂಡವು. ಎರಡೂ ವಿಭಾಗಗಳಲ್ಲಿ ಸೇಂಟ್ ಅಲೋಷಿಯಸ್ ಕಾಲೇಜು ತಂಡಗಳು ರನ್ನರ್ ಅಪ್ ಆದವು.
ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ವಿಭಾಗಗಳ ಬಾಲಕರ ಹಾಗೂ ಬಾಲಕಿಯರ ವಿಭಾಗದ ಪ್ರಶಸ್ತಿಗಳು ಮೌಂಟ್ ಕಾರ್ಮೆಲ್ ಪಾಲಾದವು. ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸೇಂಟ್ ಅಲೋಷಿಯಷ್ ಗೊನ್ಜಾಗ ತಂಡಗಳು ರನ್ನರ್ ಅಪ್ ಆದರೆ, ಶಾಲಾ ಬಾಲಕಿಯರ ವಿಭಾಗದಲ್ಲಿ ನಿಟ್ಟೆ ತಂಡಗಳು ರನ್ನರ್ ಅಪ್ ಆದವು.
ಪುರುಷರ ವಿಭಾಗದ ಫೈನಲ್‌ನಲ್ಲಿ ನಿಟ್ಟೆ ತಂಡ 74–41ರಲ್ಲಿ ಸೇಂಟ್ ಅಲೋಷಿಯಸ್ ವಿರುದ್ಧ ಜಯ ಗಳಿಸಿತು. ಆಯುಷ್ ಶೆಟ್ಟಿ 18 ಮತ್ತು ಮೋಹಿತ್ 17 ಪಾಯಿಂಟ್ ಗಳಿಸಿ ನಿಟ್ಟೆ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲೋಷಿಯಸ್ ಪರ ವಿನೀತ್ 18 ಪಾಯಿಂಟ್ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ 59–13ರಲ್ಲಿ ನಿಟ್ಟೆ ಗೆಲುವು ಸಾಧಿಸಿತು. ಆಶಿಕಾ (15 ಪಾಯಿಂಟ್) ಮತ್ತು ನಿಸರ್ಗ (10) ವಿಜಯಿ ತಂಡದ ಪರ ಮಿಂಚಿದರು.
ವೈಯಕ್ತಿಕ ಪ್ರಶಸ್ತಿಗಳು: ಪುರುಷರ ವಿಭಾಗದಲ್ಲಿ ನಿಟ್ಟೆ ಕ್ಯಾಂಪಸ್‌ನ ಆಯುಷ್ ಶೆಟ್ಟಿ, ಮಹಿಳೆಯರ ವಿಭಾಗದಲ್ಲಿ ಸೇಂಟ್ ಅಲೋಷಿಯಸ್‌ನ ಕ್ಯಾರಿಲ್, ಹೈಸ್ಕೂಲ್ ಬಾಲಕರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್‌ನ ರಘುರಾಮ್, ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್‌ನ ಸಾನ್ವಿ, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್‌ನ ಸ್ಯಾಮ್ಯುಯೆಲ್ ಡಿಸೋಜಾ, ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಶಾಲೆಯ ಪ್ರೀಶಾ ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.