ಗುರುವಾರ , ಜನವರಿ 23, 2020
28 °C

ಬಾಕ್ಸಿಂಗ್ | ಮೇರಿಗೆ ಬೆನ್ನು ನೋವು: ಸವಾಲು ಹಾಕಿದ್ದ ನಿಖತ್ ಎದುರು ಹಣಾಹಣಿ ಇಲ್ಲ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆನ್ನು ನೋವಿನ ಸಮಸ್ಯೆ ಇಂದ ಬಳಲುತ್ತಿರುವ ಸತತ 6 ಬಾರಿಯ ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಮೇರಿ ಕೋಮ್‌, ಬಿಗ್‌ ಬೌಟ್‌ ಲೀಗ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ‌ವಿರುದ್ಧ ನಡೆಯಬೇಕಿದ್ದ ಹಣಾಹಣಿಯಿಂದ ಹಿಂದೆ ಸರಿದಿದ್ದಾರೆ.

ಲೀಗ್‌ನಲ್ಲಿ ಮೇರಿ ಪ್ರತಿನಿಧಿಸುವ ಎನ್‌ಸಿಆರ್‌ ಪಂಜಾಬ್‌ ರಾಯಲ್ಸ್ ತಂಡದ ಮಾಲೀಕ ದಿನೇಶ್‌ ಪಾಂಡೆ ಈ ವಿಷಯ ಖಚಿತ ಪಡಿಸಿದ್ದಾರೆ. ಲೀಗ್‌ನಲ್ಲಿ ನಾರ್ಥ್‌ ಈಸ್ಟ್‌ ರೈನೋಸ್‌ ತಂಡವನ್ನು ನಿಖತ್‌ ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಕ್ಸಿಂಗ್‌ ಬಗ್ಗೆ ಬಿಂದ್ರಾಗೆ ಏನು ಗೊತ್ತು?: ಮೇರಿ ಕೋಮ್‌

‘ಮೇರಿ ಕೋಮ್‌ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ನೋವು ಇನ್ನೂ ಕೆಲದಿನ ಮುಂದುವರಿಯಲಿದೆ. ಹಾಗಾಗಿ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಮೇರಿ ದಿಗ್ಗಜ ಆಟಗಾರ್ತಿ ಮತ್ತು ನಮ್ಮ ತಂಡದ ಪ್ರಬಲ ಸ್ಪರ್ಧಿ. ಹಾಗಾಗಿ ನಾವು ಬೇರೆ ದಾರಿ ಯೋಚಿಸಲು ಹೋಗುವುದಿಲ್ಲ. ನೋವಿನ ಕಾರಣದಿಂದಾಗಿಯೇ ಕಳೆದ ಎರಡು ಪಂದ್ಯಗಳಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಒಂದು ವೇಳೆ ನಮ್ಮ ಪ್ರಾಂಚೈಸ್‌ ಸೆಮಿಫೈನಲ್‌ ಅಥವಾ ಫೈನಲ್‌ ತಲುಪಿದರೆ, ಅಷ್ಟರಲ್ಲಿ ಮೇರಿ ಗುಣಮುಖರಾಗಿ ವಾಪಸ್‌ ಆಗಲಿ ಎಂದು ಬಯಸುತ್ತೇವೆ. ನಿಖತ್‌ ವಿರುದ್ಧ ಮೇರಿ ಸೆಣಸಾಟವನ್ನು ನೋಡಲು ಎಲ್ಲರೂ ಕಾದಿದ್ದರು. ಆದರೆ, ಮೇರಿ ಅವರ ಚೇತರಿಕೆಯೇ ನಮ್ಮ ಮೊದಲ ಆಧ್ಯತೆ’ ಎಂದು ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಾಕ್ಸರ್‌ಗಳನ್ನು ಆಯ್ಕೆ ಮಾಡುವ ಮುನ್ನ ಎಂ.ಸಿ. ಮೇರಿ ಕೋಮ್ ಅವರಿಗೆ ಟ್ರಯಲ್ಸ್ ನಡೆಸಬೇಕು ಎಂದು ನಿಖತ್ ಜರೀನ್ ಅಕ್ಟೋಬರ್‌ನಲ್ಲಿ ಆಗ್ರಹಿಸಿದ್ದರು. ಹೀಗಾಗಿ ಮೇರಿ–ನಿಖತ್‌ ಹಣಾಹಣಿ ಬಾಕ್ಸಿಂಗ್‌ ಲೋಕದ ಗಮನ ಸೆಳೆದಿತ್ತು.

ಇದನ್ನೂ ಓದಿ: ಮೇರಿಗೆ ನಿಖತ್‌ ಸವಾಲು

ಕೇಂದ್ರದ ಕ್ರೀಡಾ ಸಚಿವ ಕಿರಣ್ ರಿಜುಜು ಅವರಿಗೆ ಪತ್ರ ಬರೆದಿದ್ದ ನಿಖತ್, ‘ವಿವಾದವಿಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಕ್ರೀಡೆಯ ಮೂಲ ತತ್ವ. ಆದ್ದರಿಂದ ಪ್ರತಿಯೊಂದು ಕ್ರೀಡಾಕೂಟಕ್ಕೂ ಆಯಾ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರು ಕೂಡ ಮತ್ತೊಂದು ಬಾರಿ ಭಾಗವಹಿಸುವ ಮುನ್ನ ಅರ್ಹತೆಯನ್ನು ಸಾಬೀತು ಮಾಡಬೇಕಾಗುತ್ತದೆ. ಇದೇ ನಿಯಮವನ್ನು ಇಲ್ಲೂ ಪಾಲಿಸಬೇಕು’ ಎಂದು ಕೋರಿದ್ದರು.

ಮುಂದುವರಿದು, ‘ಸಣ್ಣ ವಯಸ್ಸಿನಲ್ಲೇ ಮೇರಿ ಕೋಮ್ ಅವರನ್ನು ನೋಡುತ್ತ ಬೆಳೆದಿದ್ದೆ. ಅವರಿಂದ ಗಳಿಸಿದ ಸ್ಫೂರ್ತಿಯೇ ನನ್ನ ಸಾಧನೆಗೆ ಕಾರಣ. ಮೇರಿ ಕೋಮ್‌ ಅವರಂಥ ದಿಗ್ಗಜರು ಅರ್ಹತೆಯನ್ನು ಸಾಬೀತು ಮಾಡಲು ಹಿಂಜರಿಯುವುದು ಸರಿಯಲ್ಲ. 23 ಚಿನ್ನ ಗಳಿಸಿರುವ ಮೈಕೆಲ್ ಫೆಲ್ಪ್ಸ್‌ ಅವರಂಥ ಈಜುಪಟು ಕೂಡ ಪ್ರತಿ ಬಾರಿ ಒಲಿಂಪಿಕ್ಸ್‌ಗೆ ಮುನ್ನ ಅರ್ಹತಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಒಲಿಂಪಿಕ್ಸ್‌ಗೆ ಟ್ರಯಲ್ಸ್ ಮೂಲಕ ಬಾಕ್ಸರ್‌ಗಳನ್ನು ಆಯ್ಕೆ ಮಾಡಿದರೆ, ನಾವೆಲ್ಲ ತೃಪ್ತಿಯಿಂದ ನಿದ್ದೆ ಮಾಡಬಹುದು’ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಡಿ.2ರಿಂದ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು