ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಅನಿಶ್ಚಿತತೆ: ಜಪಾನ್‌ ತಲುಪಿದ ಕ್ರೀಡಾಜ್ಯೋತಿ

Last Updated 20 ಮಾರ್ಚ್ 2020, 19:51 IST
ಅಕ್ಷರ ಗಾತ್ರ

ಹಿಗಾಶಿಮಾಟ್ಸುಶಿಮಾ (ಜಪಾನ್‌): ಕೊರೊನಾ ವೈರಸ್‌ ಸೋಂಕು ವಿಶ್ವದೆಲ್ಲೆಡೆ ತಳಮಳ ಮೂಡಿಸಿ ಒಲಿಂಪಿಕ್ಸ್‌ ಮೇಲೆ ಕರಿನೆರಳು ಬೀರಿರುವ ಸಂದರ್ಭದಲ್ಲೇ, ಟೋಕಿಯೊ ಕ್ರೀಡೆಗಳ ಒಲಿಂಪಿಕ್‌ ಜ್ಯೋತಿ ಶುಕ್ರವಾರ ಟೋಕಿಯೊ ತಲುಪಿತು. ಸರಳ ರೀತಿಯಲ್ಲಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.

ವಿಶೇಷ ಕಂದೀಲಿನಲ್ಲಿದ್ದ ಒಲಿಂಪಿಕ್‌ ಜ್ಯೋತಿಚಾರ್ಟರ್‌ ವಿಮಾನದಲ್ಲಿ ಇಲ್ಲಿಗೆ ತಲುಪಿತು.

ಇದರ ಮಧ್ಯೆಯೇ, ಜಪಾನ್‌ನ ಒಲಿಂಪಿಕ್‌ ಸಮಿತಿ ಸದಸ್ಯರೊಬ್ಬರು ಕ್ರೀಡೆಗಳನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮುಖ್ಯಸ್ಥ ಥಾಮಸ್‌ ಬ್ಯಾಚ್‌, ‘ಬೇರೆ ಬೇರೆ ಸಾಧ್ಯತೆಗಳಿವೆ. ಅವುಗಳನ್ನು ಪರಿಶೀಲನೆ ನಡೆಸುತ್ತೇವೆ’ ಎಂದು ಹೇಳಿದ್ದಾರೆ.

‘ಬೇರೆ ಬೇರೆ ಸಾಧ್ಯತೆಯತ್ತ ಪರಿಶೀಲನೆ ನಡೆಸುತ್ತೇವೆ. ಆದರೆ ಬೇರೆ ಕ್ರೀಡಾಕೂಟಗಳು, ವೃತ್ತಿಪರ ಲೀಗ್‌ಗೆ ಹೋಲಿಸಿದರೆ ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೂ ನಾಲ್ಕೂವರೆ ತಿಂಗಳು ದೂರ ಇದೆ’ ಎಂದು ಬ್ಯಾಚ್‌ ‘ನ್ಯೂಯಾರ್ಕ್ ಟೈಮ್ಸ್‌’ಗೆ ತಿಳಿಸಿದ್ದಾರೆ. ಜುಲೈ 24ರಂದು ಕ್ರೀಡೆಗಳು ಆರಂಭವಾಗಬೇಕಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಸಂಘಟಕರು ಜ್ಯೋತಿ ಆಗಮನ ಸಮಾರಂಭವನ್ನು ಸರಳವಾಗಿ ನಡೆಸಿದರು. ಜಪಾನ್‌ನ ಉತ್ತರದ ಮಾಟ್ಸುಶಿಮಾ ಏರ್‌ಬೇಸ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ 200 ಶಾಲಾ ಮಕ್ಕಳನ್ನು ಆಹ್ವಾನಿಸುವ ಯೋಜನೆಯಿತ್ತು. ‘ಮಕ್ಕಳ ಸುರಕ್ಷತೆ ಕಾರಣ ಈ ಯೋಜನೆ ಕೈಬಿಡಲಾಯಿತು’ ಎಂದು ಟೋಕಿಯೊ 2020 ಮುಖ್ಯಸ್ಥ ಯೊಶಿರೊ ಮೊರಿ ತಿಳಿಸಿದರು.

ಕೆಲವು ಡಜನ್‌ ಅಧಿಕಾರಿಗಳು ಮತ್ತು ಅತಿಥಿಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ರೀತಿಯ ಬೋಗುಣಿಯಲ್ಲಿ ಜ್ಯೋತಿ ಹಚ್ಚಿದರು.

ಫುಕುಶಿಮಾದ ಜೆ–ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಿಂದ ಮಾರ್ಚ್‌ 26ರಂದು ದೇಶದಾದ್ಯಂತ ಜ್ಯೋತಿಯಾತ್ರೆ ಆರಂಭವಾಗಲಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಜ್ಯೋತಿಯಾತ್ರೆ ವೇಳೆ ಗುಂಪುಗೂಡದಂತೆ ಸಂಘಟಕರು ಮನವಿ ಮಾಡಿದ್ದಾರೆ.

ಸ್ಪಾರ್ಟಾ ನಗರದಲ್ಲಿ ಜ್ಯೋತಿ ಹಚ್ಚುವ ವೇಳೆ ಹಾಲಿವುಡ್‌ ನಟ ಜೆರಾರ್ಡ್‌ ಬಟ್ಲರ್‌ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನ ಸುತ್ತುವರಿದಿದ್ದರು. ಹೀಗಾಗಿಗ್ರೀಸ್‌ನಲ್ಲಿ ಒಲಿಂಪಿಕ್‌ ಜ್ಯೋತಿ ಯಾತ್ರೆಯನ್ನು ಮೊಟಕುಗೊಳಿಸಲಾಗಿತ್ತು.

ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಯುರೋಪ್‌ನಲ್ಲಿ ಗಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ಜ್ಯೋತಿ ಸ್ವೀಕಾರ ಸಮಾರಂಭಕ್ಕೆ ಜಪಾನ್‌ ನಿಯೋಗ ತೆರಳಿರಲಿಲ್ಲ.

ಮುಂದೂಡಿಕೆ ಆಗಲಿ:ಇದೇ ವೇಳೆ, ‘ಕ್ರೀಡೆಗಳನ್ನು ಮುಂದೂಡುವಂತೆ ಒತ್ತಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಜಪಾನ್‌ ಒಲಿಂಪಿಕ್ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯ ಕವೊರಿ ಯಮಾಗುಚಿ ಅವರು ಈ ಪಟ್ಟಿಗೆ ಸೇರಿದ್ದಾರೆ. ಒಲಿಂಪಿಕ್‌ ಜೂಡೊಪಟು ಕೂಡ ಆಗಿರುವ ಅವರು, ‘ಅಥ್ಲೀಟುಗಳ ಅನುಭವಿಸುತ್ತಿರುವ ತೊಂದರೆ ಪರಿಗಣಿಸಿ ಈ ಕ್ರಮಕ್ಕೆ ಮುಂದಾಗಬೇಕು’ ಎಂದಿದ್ದಾರೆ.

‘ಅಥ್ಲೀಟುಗಳಿಗೆ ಸಿದ್ಧತೆ ನಡೆಸಲು ಸಾಧ್ಯವಾಗದ ಈ ಸನ್ನಿವೇಶದಲ್ಲಿ ಒಲಿಂಪಿಕ್ಸ್‌ ಮುಂದೂಡುವುದು ಒಳ್ಳೆಯದು’ ಎಂದು ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ‘ಈ ಪರಿಸ್ಥಿತಿಯಲ್ಲಿ ಸಿದ್ಧತೆ ನಡೆಸಿ ಎಂದು ಹೇಳುವ ಮೂಲಕ ಐಒಸಿ, ಸ್ವತಃ ಟೀಕೆಗಳನ್ನು ಆಹ್ವಾನಿಸಿದಂತಾಗುತ್ತದೆ’ ಎಂದಿದ್ದಾರೆ.

ಐಒಸಿಯು ತನ್ನದೇ ಕಾರ್ಯಪಡೆಯ ನೀಡುವ ಸಲಹೆಯಂತೆ ಮುಂದಿನ ಹೆಜ್ಜೆ ಇಡಲಿದೆ. ಕ್ರೀಡೆಗಳನ್ನು ಸಕಾಲಕ್ಕೆ ನಡೆಸುವ ಬಗ್ಗೆ ಆಶಾವಾದ ಹೊಂದಿದ್ದೇವೆ. ರದ್ದು ಮಾಡುವ ಪ್ರಶ್ನೆಯಂತೂಇಲ್ಲ’ ಎಂದು ಬಾಚ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT