ಶನಿವಾರ, ನವೆಂಬರ್ 28, 2020
26 °C
ಡಿಸ್ಕವರಿಯಲ್ಲಿ ವಿಶ್ವ ಗುರುತಿಸಿದ ಬೆಂಗಳೂರಿನ ಹುಡುಗರು

ಆನ್‌ಲೈನ್‌ ವ್ಯಾಯಾಮ ನೆರವಿನ ಆಯಾಮ

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಕಾಲದ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದ ಮಕ್ಕಳ ಚೈತನ್ಯ ಮತ್ತೆ ಪುಟಿಯುವಂತೆ ಮಾಡಲು ಈ ಹುಡುಗರು ಮಾಡಿದ ಪ್ರಯತ್ನ ಈಗ ಜಾಗತಿಕವಾಗಿ ಗಮನ ಸೆಳೆದಿದೆ. 

ಇವರು ರೋಹನ್‌ ರಾಯ್‌ ಮತ್ತು ಆಕಾಶ್‌ ರಾಘವನ್‌. 

ಕೋವಿಡ್‌ ಕಾಲದಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿರುವುದನ್ನು ಈ ಹುಡುಗರು ಗಮನಿಸಿದರು. ಆಗಲೇ ಶುರುವಾಯ್ತು ನೋಡಿ, ಆನ್‌ಲೈನ್‌ ಮೂಲಕ ದೈಹಿಕ ವ್ಯಾಯಾಮದ ಕಸರತ್ತು, ಮೋಜಿನ ಆಟಗಳ ತರಬೇತಿ. 20 ವಿದ್ಯಾರ್ಥಿಗಳಿಂದ ಶುರುವಾದ ಈ ಆನ್‌ಲೈನ್‌ ವ್ಯಾಯಾಮ ತರಗತಿಗೆ ನೋಂದಣಿಯಾದವರ ಸಂಖ್ಯೆ ಈಗ ಸುಮಾರು 300ಕ್ಕೆ ತಲುಪಿದೆ. ಝೂಮ್‌ ಅಪ್ಲಿಕೇಷನ್‌ ಮೂಲಕ ಈ ಆನ್‌ಲೈನ್‌ ತರಬೇತಿಯನ್ನು ನೀಡುತ್ತಿದ್ದಾರೆ. 

ಒಂದು ಅವಧಿಯ ಕೋರ್ಸ್‌ಗೆ (20 ದಿನ) ಸುಮಾರು ₹ 3,500 ಶುಲ್ಕ ಪಡೆದರು. ಹಾಗೆಂದು ಆ ಶುಲ್ಕವನ್ನು ತಾವೇ ಇಟ್ಟುಕೊಳ್ಳಲಿಲ್ಲ. ಈ ಮೂಲಕ ಸಂಗ್ರಹಿಸಿದ ಸುಮಾರು ₹ 3 ಲಕ್ಷ ಹಣವನ್ನು ಮಿಟ್ಟಿ ಕೆಫೆ ಎಂಬ ಎನ್‌ಜಿಒ ಮೂಲಕ ಲಾಕ್‌ಡೌನ್‌ ಸಂದರ್ಭ ಆಹಾರ, ಅಗತ್ಯ ಸಾಮಗ್ರಿ ಒದಗಿಸಲು ಬಳಸಿದರು. ಈ ಸಂಸ್ಥೆ ದೈಹಿಕ ಮತ್ತು ಮಾನಸಿಕ ವಿಕಲತೆ ಹೊಂದಿರುವವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ. 

ವಿಶ್ವಸಂಸ್ಥೆ ಮತ್ತು ಭಾರತದ ನೀತಿ ಆಯೋಗವು ಡಿಸ್ಕವರಿ ಚಾನೆಲ್‌ನ ಸಹಯೋಗದಲ್ಲಿ ಹಮ್ಮಿಕೊಂಡ ‘ಭಾರತ್‌ ಕೆ ಮಹಾವೀರ್‌’ ಕಾರ್ಯಕ್ರಮದಲ್ಲಿ ಈ ಹುಡುಗರನ್ನು ಗುರುತಿಸಿ ಶ್ಲಾಘಿಸಿದೆ. ‘ಲಾಕ್‌ಡೌನ್‌ ಕಾಲದಲ್ಲಿ ಮೊಬೈಲ್‌, ಅಥವಾ ಆನ್‌ಲೈನ್‌ ವೇದಿಕೆಯ ಮನೋರಂಜನೆ ಕಾರ್ಯಕ್ರಮಗಳ ಗೀಳಿಗೆ ಬಿದ್ದು ದೈಹಿಕ ಚಟುವಟಿಕೆಯನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಈ ಪರಿಕಲ್ಪನೆ ಆರಂಭಿಸಿದೆವು’ ಎನ್ನುತ್ತಾರೆ ರೋಹನ್‌.

‘ನನಗೆ ಹಣದ ಅವಶ್ಯಕತೆ ಇಲ್ಲ. ಆದರೆ, ತೊಂದರೆಯಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಅನಿಸಿತು. ಹಾಗಾಗಿ ಈ ತರಗತಿಗಳ ಮೂಲಕ ಗಳಿಸಿದ ಹಣವನ್ನು ಬಡವರಿಗೆ ಸಹಾಯ ಮಾಡುವವರಿಗೆ ನೀಡಿದೆವು’ ಎಂದು ವಿವರಿಸುತ್ತಾರೆ ಅವರು. ಇಬ್ಬರೂ ಸರ್ಜಾಪುರದ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಓದುತ್ತಿದ್ದಾರೆ. ರೋಹನ್‌ ಈಜುಪಟು ಮತ್ತು ಸ್ಕ್ವಾಷ್‌ ಆಟಗಾರ. ಆಕಾಶ್‌ ಶಾಲೆಯ ಕ್ರಿಕೆಟ್‌ ತಂಡದ ನಾಯಕ.

ಇನ್ನೂ ಕೆಲಕಾಲ ಈ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಹೇಳುತ್ತಾರೆ ರೋಹನ್‌ ಮತ್ತು ಆಕಾಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು