ಶನಿವಾರ, ಜೂನ್ 6, 2020
27 °C

ಆನ್‌ಲೈನ್‌ ಆಡಿ; ಅಭ್ಯಾಸ ಮಾಡಿ...

ನಾಗೇಶ್ ಶೆಣೈ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎಂಬ ಹೆಗ್ಗಳಿಕೆಯ ಆಟಗಾರ ಎಂ.ಎಸ್‌.ತೇಜಕುಮಾರ್‌. ಕಳೆದ ದಶಕದ ಆರಂಭದಲ್ಲಿ ಚೆಸ್‌ನಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿದ್ದಾಗ ಆನ್‌ಲೈನ್‌ ಚೆಸ್‌ ಇಷ್ಟೊಂದು ಬೆಳವಣಿಗೆ ಕಂಡಿರಲಿಲ್ಲ. ಮೈಸೂರಿನ ಈ ಆಟಗಾರ ತಮ್ಮ ಇತಿಮಿತಿಯಲ್ಲಿ ಚೆಸ್‌ ಪುಸ್ತಕಗಳನ್ನು ಓದಿ ಟೂರ್ನಿಗಳಿಗೆ ಸಿದ್ಧತೆ ನಡೆಸುತ್ತಿದ್ದರು.

ಅವರಿಗೆ ತರಬೇತುದಾರರೂ ಇರಲಿಲ್ಲ. ಸ್ವಪ್ರಯತ್ನದಿಂದಲೇ ಯಶಸ್ಸಿನ ಮೆಟ್ಟಿಲು ಏರಿದವರು. ಜಿಎಂ ಪಟ್ಟದ ಹೊಸ್ತಿಲಲ್ಲಿದ್ದಾಗ ಹಲವು ಬಾರಿ ಹಿನ್ನಡೆ ಎದುರಿಸಿದರೂ, ಮೃದುಮಾತಿನ ಈ ಆಟಗಾರ ಹೊಸ ಹುರುಪಿನೊಡನೆ ಮರಳಿ ಕಣಕ್ಕಿಳಿಯುತ್ತಿದ್ದರು. 36ನೇ ವಯಸ್ಸಿನಲ್ಲಿ (2018ರಲ್ಲಿ) ದೇಶದ 50ನೆಯವರಾಗಿ ಗ್ರ್ಯಾಂಡ್‌ಮಾಸ್ಟರ್‌ ಟೈಟಲ್‌ ಪಡೆದಿದ್ದರು.

ಈಗ ಆನ್‌ಲೈನ್‌ ಚೆಸ್‌ ತುಂಬಾ ಬೆಳವಣಿಗೆ ಕಂಡಿದೆ. ಆನ್‌ಲೈನ್‌ ಮೂಲಕ ಅಭ್ಯಾಸ ನಡೆಸುವುದರ ಜೊತೆಗೆ ಅವರು ಸಿದ್ಧತೆಗಾಗಿ ಈಗಲೂ ಚೆಸ್‌ ಪುಸ್ತಕಗಳ ಅಧ್ಯಯನ ನಡೆಸುತ್ತಾರೆ.

’ಈಗಿನ ಲಾಕ್‌ಡೌನ್‌ ಸಮಯದಲ್ಲಿ ಚೆಸ್‌ ಪುಸ್ತಕಗಳನ್ನು ಓದುತ್ತೇನೆ. ಆನ್‌ಲೈನ್‌ ಚೆಸ್‌ ಕೂಡ ಆಡುತ್ತೇನೆ. ಆದರೆ ಆನ್‌ಲೈನ್‌ ಟೂರ್ನಿಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿಲ್ಲ’ ಎನ್ನುತ್ತಾರೆ ಅವರು.

‘ಈಗ ಆನ್‌ಲೈನ್‌ ಟೂರ್ನಿಗಳು ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಆದರೆ ನಾನು ಹೆಚ್ಚು ಆಡುತ್ತಿಲ್ಲ. 2–3 ಟೂರ್ನಿಗಳನ್ನು ಆಡಿದ್ದೇನೆ‘ ಎನ್ನುತ್ತಾರೆ ನೈರುತ್ಯ ರೈಲ್ವೆಯ ಈ ಆಟಗಾರ.

ಚೆಸ್‌ ಆಟಗಾರರಿಗೂ ಫಿಟ್ನೆಸ್‌ ಅಗತ್ಯವಿದೆ. ಮನಸ್ಸು ಪ್ರಫುಲ್ಲವಾಗಿದ್ದರೆ ಆಡಲು ಹಿತಕರ. ‘ನಾನು ಇದಕ್ಕಾಗಿ ಯೋಗ ಮತ್ತು ಧ್ಯಾನ ಮಾಡುತ್ತೇನೆ. ಇದರಿಂದ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ’ ಎನ್ನುತ್ತಾರೆ ಅವರು. 

‘ಲಾಕ್‌ಡೌನ್‌ಗೆ ಮೊದಲು ನಾನು ಕೊನೆಯ ಟೂರ್ನಿಯನ್ನು ಅಹಮದಾಬಾದಿನಲ್ಲಿ ಆಡಿದ್ದೆ. ಫೆಬ್ರುವರಿ ಮಧ್ಯದಲ್ಲಿ ನಡೆದ 40ನೇ ರಾಷ್ಟ್ರೀಯ ಟೀಮ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ರೈಲ್ವೆ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌ ‘ಬಿ’ ತಂಡ ಮೂರನೇ ಸ್ಥಾನ ಗಳಿಸಿತ್ತು. ನಂತರ ಕೊರೊನಾ ಸೋಂಕು ಭೀತಿಯಿಂದ ಯಾವುದೇ ಟೂರ್ನಿಗಳು ನಡೆಯಲಿಲ್ಲ’ ಎಂದು ಅವರು ಹೇಳುತ್ತಾರೆ.

ಅಬುಧಾಬಿಯಲ್ಲಿ ಪ್ರತಿ ವರ್ಷ ನಡೆಯುವ ಚೆಸ್ ಟೂರ್ನಿಯಲ್ಲಿ ತೇಜಕುಮಾರ್‌ ಆಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಈ ಟೂರ್ನಿ ರದ್ದಾಗಿದೆ.

ಮೈಸೂರಿನ ಹತ್ತು ಮಂದಿ ಕಿರಿಯ ಆಟಗಾರರಿಗೆ ಚೆಸ್‌ ಪಾಠಗಳನ್ನು ಅವರು ಹೇಳಿಕೊಡುತ್ತಿದ್ದಾರೆ. ‘ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಲಾಕ್‌ಡೌನ್‌ ಕಾರಣ ಅದು ನಿಂತು ಹೋಗಿದೆ’ ಎನ್ನುತ್ತಾರೆ.

‘ಕೊರೊನಾ ಸೋಂಕು ಭಯದಿಂದ ಈಗ ಬಹಳಷ್ಟು ದೇಶಗಳಲ್ಲಿ ಪ್ರಯಾಣ ನಿರ್ಬಂಧ ವಿಧಿಸಲಾಗಿದೆ. ಟೂರ್ನಿಗಳೂ ನಡೆಯುತ್ತಿಲ್ಲ.  ಆನ್‌ಲೈನ್‌ ಟೂರ್ನಿಗಳು ಮೊದಲಿಗಿಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಎಲ್ಲ ವಯಸ್ಸಿನವರಿಗೆ ಆಡಲು ಅವಕಾಶವಿದೆ. ಇಂಥಾ ಟೂರ್ನಿಗಳಲ್ಲಿ ಕೆಲವು ಉತ್ತಮ ಆಟಗಾರರೂ ಆಡುತ್ತಾರೆ. ಉದಯೋನ್ಮುಖ ಆಟಗಾರರು ಇಂಥಾ ಟೂರ್ನಿಗಳಲ್ಲಿ ಆಡಿದರೆ ಒಳ್ಳೆಯದು. ಅವರಿಗೂ ಉತ್ತಮ ಆಟಗಾರರ ಜೊತೆ ಆಡಲು ಅವಕಾಶ ಸಿಗುತ್ತದೆ. ಅಭ್ಯಾಸವೂ ಆಗುತ್ತದೆ’ ಎಂದು ತೇಜಕುಮಾರ್‌ ಸಲಹೆ ನೀಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು