ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಚಹಾ ಕೂಟದಲ್ಲಿ ಪ್ಯಾರಾ ಅಥ್ಲೀಟ್ಸ್‌ ಸಂಭ್ರಮ

ಸಹಿ ಒಳಗೊಂಡ ಶಾಲು ಕಾಣಿಕೆ ನೀಡಿದ ಕ್ರೀಡಾಪಟಗಳು; ಸಂವಾದ ನಡೆಸಿದ ಪ್ರಧಾನಿ
Last Updated 9 ಸೆಪ್ಟೆಂಬರ್ 2021, 14:13 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಪ್ಯಾರಾ ಅಥ್ಲೀಟ್‌ಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಏರ್ಪಡಿಸಿದ್ದ ಚಹಾ ಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕ್ರೀಡಾಪಟುಗಳನ್ನು ಅಭಿನಂದಿಸಿದ ಪ್ರಧಾನಿ ನಂತರ ಕೋಚ್‌ಗಳೂ ಒಳಗೊಂಡ ತಂಡದೊಂದಿಗೆ ಸಂವಾದ ನಡೆಸಿದರು.

‍ತಮ್ಮ ಸಹಿ ಒಳಗೊಂಡ ಶಾಲನ್ನು ಕ್ರೀಡಾಪಟಗಳು ಮೋದಿ ಅವರಿಗೆ ಕಾಣಿಕೆಯಾಗಿ ನೀಡಿದರು. ಕೆಲವರು ತಾವು ಸ್ಪರ್ಧಿಸಿದ ಕ್ರೀಡೆಗೆ ಸಂಬಂಧಿಸಿದ ಸಾಮಗ್ರಿಯ ಮೇಲೆ ಸಹಿ ಮಾಡಿ ಪ್ರಧಾನಿಗೆ ಕೊಟ್ಟರು. ಈ ಸಾಮಗ್ರಿಗಳನ್ನು ಹರಾಜು ಹಾಕಲಾಗುವುದು ಎಂದು ಮೋದಿ ತಿಳಿಸಿದರು.

ಕಳೆದ ವಾರ ಕೊನೆಗೊಂಡ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸರ್ವಶ್ರೇಷ್ಠ 19 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಐದು ಚಿನ್ನ ಮತ್ತು ಎಂಟು ಬೆಳ್ಳಿ ಪದಕಗಳು ಸೇರಿಕೊಂಡಿವೆ. ಪದಕ ಪಟ್ಟಿಯಲ್ಲಿ ಭಾರತ 24ನೇ ಸ್ಥಾನ ಗಳಿಸಿತ್ತು.

‘ಪ್ಯಾರಾಲಿಂಪಿಯನ್ನರು ಮಾಡಿರುವ ಸಾಧನೆ ದೇಶದ ಕ್ರೀಡಾ ಕ್ಷೇತ್ರಕ್ಕೆ ಬಲ ತುಂಬಲಿದೆ. ಯುವ ಕ್ರೀಡಾಪಟುಗಳು ಇನ್ನಷ್ಟು ಉತ್ಸಾಹದಿಂದ ಅಭ್ಯಾಸದಲ್ಲಿ ತೊಡಗಲು ಮತ್ತು ಸಾಧನೆ ಮಾಡಲು ಇದು ನೆರವಾಗಲಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು.

ಪದಕಗಳನ್ನು ಗೆದ್ದಾಗ ಕ್ರೀಡಾಪಟುಗಳಿಗೆ ಕರೆ ಮಾಡಿ ಮಾತನಾಡಿದ ಮೋದಿ ಅವರು ಪ್ರತಿಯೊಬ್ಬರನ್ನೂ ಅಭಿನಂದಿಸಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಉತ್ತರಪ್ರದೇಶದ ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸ್ ಯತಿರಾಜ್‌, ಚಿನ್ನ ಗೆದ್ದ ಕೃಷ್ಣ ನಗಾರ್‌, ಯುವ ಬ್ಯಾಡ್ಮಿಂಟನ್ ಪಟು ಪಲಕ್ ಕೊಹ್ಲಿ, ಶೂಟರ್‌ಗಳಾದ ಅವನಿ ಲೇಖರಾ, ಸಿಂಘರಾಜ್‌ ಅದಾನ, ಜಾವೆಲಿನ್ ಥ್ರೋ ಪಟು ದೇವೇಂದ್ರ ಜಜಾರಿಯ ಮತ್ತು ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಜೊತೆ ಗುರುವಾರ ಅವರು ವೈಯಕ್ತಿಕವಾಗಿ ಮಾತನಾಡಿದರು.

ಭಾರತದ ಕ್ರೀಡಾಪಟುಗಳ ಛಲ ಮತ್ತು ಬಲವನ್ನು ಕೊಂಡಾಡಿದ ಮೋದಿ ಪ್ಯಾರಾ ಅಥ್ಲೀಟ್ಸ್‌ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿರುವುದು ಅಭಿನಂದನೀಯ ಎಂದರು. ಪದಕಗಳನ್ನು ಗೆಲ್ಲಲಾಗದವರನ್ನು ಉದ್ದೇಶಿಸಿ ಮಾತನಾಡಿದ ಅವರು ನಿಜವಾದ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಕಾಣುತ್ತಾರೆ. ಸ್ಪರ್ಧೆಯೇ ಅವರಿಗೆ ಮುಖ್ಯ ಎಂದರು.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಮಾಜಿ ಕ್ರೀಡಾ ಸಚಿವ, ಈಗಿನ ಕಾನೂನು ಸಚಿವ ಕಿರಣ್ ರಿಜಿಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT