ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics| ಪದಕ ಗೆದ್ದ ಭಾರತ ಹಾಕಿ ತಂಡ: ಆಗಸ್ಟ್ 5 ಸ್ಮರಣೀಯ ದಿನ ಎಂದ ಮೋದಿ

Last Updated 6 ಆಗಸ್ಟ್ 2021, 2:34 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡವು 41 ವರ್ಷಗಳಿಂದ ಅನುಭವಿಸುತ್ತಿದ್ದ ಒಲಿಂಪಿಕ್ಸ್‌ ಪದಕದ ಬರ ಆಗಸ್ಟ್‌ 5 ರಂದು ಕೊನೆಗೊಂಡಿದೆ. ಹೀಗಾಗಿ ಈ ದಿನವು ಪ್ರತಿಯೊಬ್ಬ ಹಾಕಿ ಪ್ರೇಮಿ, ಕ್ರೀಡಾಭಿಮಾನಿಯ ಪಾಲಿಗೆ ಅತ್ಯಂತ ಸ್ಮರಣೀಯವಾಗಿ ಉಳಿಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ, ತಂಡದ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʼಪ್ರತಿಯೊಬ್ಬ ಭಾರತೀಯನ ಮನಸ್ಸು ಮತ್ತು ಹೃದಯದಲ್ಲಿ ಹಾಕಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಪ್ರತಿಯೊಬ್ಬ ಹಾಕಿ ಪ್ರೇಮಿ ಮತ್ತು ಕ್ರೀಡಾಭಿಮಾನಿ ಪಾಲಿಗೆ ಆಗಸ್ಟ್‌ 5, 2021 ಅತ್ಯಂತ ಸ್ಮರಣೀಯ ದಿನವಾಗಿ ಉಳಿಯಲಿದೆʼ ಎಂದು ಟ್ವೀಟ್‌ ಮಾಡಿದ್ದಾರೆ.

ಪಂದ್ಯದಲ್ಲಿ ಗೋಲ್‌ಕೀಪರ್‌ ಆಗಿದ್ದ ಪಿ.ಆರ್‌. ಶ್ರೀಜೇಶ್‌ ʼಅದ್ಭುತ ಪ್ರದರ್ಶನʼ ತೋರಿದರು ಎಂದು ಶ್ಲಾಘಿಸಿರುವ ಮೋದಿ, ಮನ್‌ಪ್ರೀತ್‌ ಸಿಂಗ್‌ ಅವರ ನಾಯಕತ್ವ ಕೌಶಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು ಸೋಲುಕಂಡಿದ್ದ ಟೀಂ ಇಂಡಿಯಾ, ಮೂರನೇ ಸ್ಥಾನಕ್ಕಾಗಿ ಜರ್ಮನಿ ವಿರುದ್ಧ ಸೆಣಸಾಟ ನಡೆಸಿತು. ಈ ಪಂದ್ಯವನ್ನು 5-4 ಅಂತರದಿಂದ ಗೆಲ್ಲುವುದರೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

ಪಂದ್ಯದಲ್ಲಿ ಸಿಮ್ರನ್‌ಜಿತ್‌ ಸಿಂಗ್‌ (17 ಮತ್ತು 34ನೇ ನಿಮಿಷದಲ್ಲಿ) ಎರಡು ಗೋಲು ಗಳಿಸಿದರೆ, ಹಾರ್ದಿಕ್‌ ಸಿಂಗ್‌ (27ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (29ನೇ ನಿಮಿಷ) ಹಾಗೂ ರೂಪಿಂದರ್‌ ಪಾಲ್‌ ಸಿಂಗ್‌ (31ನೇ ನಿಮಿಷ) ತಲಾ ಒಂದೊಂದು ಗೋಲು ಗಳಿಸಿದರು.

ಟ್ವಿಟರ್‌ ಮೂಲಕ ಸಂಭ್ರಮ ಹಂಚಿಕೊಳ್ಳುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ಆಟಗಾರರು ಮತ್ತು ಕೋಚ್‌ ಗ್ರಹಾಂ ರಿಯಾದ್‌ ಅವರಿಗೆ ಕರೆ ಮಾಡಿ ಅಭಿನಂದನೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT