ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹತಾ ಟೂರ್ನಿಯಲ್ಲಿ ಸೆಮಿಗೆ ಲಗ್ಗೆ: ವಿಕಾಸ್‌, ಪೂಜಾಗೆ ಒಲಿಂಪಿಕ್ಸ್‌ ಟಿಕೆಟ್‌

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಅಮಾನ್‌, ಜೋರ್ಡಾನ್‌: ಭಾರತದ ವಿಕಾಸ್‌ ಕೃಷ್ಣನ್‌ ಮತ್ತು ಪೂಜಾ ರಾಣಿ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದಾರೆ.

ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾನುವಾರ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಪೂಜಾ ಅವರು ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ವಿಕಾಸ್‌, ಮೂರನೇ ಬಾರಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುರುಷರ 69 ಕೆ.ಜಿ.ವಿಭಾಗದಲ್ಲಿ ಕಣಕ್ಕಿಳಿದಿದ್ದ ವಿಕಾಸ್‌, ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಸೆವೊನ್‌ರೆಟ್ಸ್‌ ಒಖಾಜವಾ ವಿರುದ್ಧ ಜಯಿಸಿದರು.

ಹೋದ ವರ್ಷ ನಡೆದಿದ್ದ ಒಲಿಂಪಿಕ್ಸ್‌ ಟೆಸ್ಟ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಒಖಾಜವಾ ಅವರು ಇಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ 28 ವರ್ಷ ವಯಸ್ಸಿನ ವಿಕಾಸ್‌, ಎದುರಾಳಿಯ ಮುಖ ಮತ್ತು ದೇಹಕ್ಕೆ ನೇರ ಪಂಚ್‌ಗಳನ್ನು ಮಾಡುವ ತಂತ್ರ ಅನುಸರಿಸಿ ಯಶಸ್ವಿಯಾದರು.

ಮುಂದಿನ ಸುತ್ತಿನಲ್ಲಿ ವಿಕಾಸ್‌, ಕಜಕಸ್ತಾನದ ಎರಡನೇ ಶ್ರೇಯಾಂಕದ ಬಾಕ್ಸರ್‌ ಅಬ್ಲೈಖಾನ್‌ ಜುಸ್ಸುಪೊವ್‌ ವಿರುದ್ಧ ಹೋರಾಡಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿರುವ ಅಬ್ಲೈಖಾನ್‌ ಅವರು ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಥಾಯ್ಲೆಂಡ್‌ನ ವುಟ್ಟಿಚಯ್‌ ಮಸುಕ್‌ ಅವರನ್ನು ಸೋಲಿಸಿದ್ದರು.

ಪೂಜಾ ರಾಣಿ

ಪೂಜಾ ಮಿಂಚು: ಮಹಿಳೆಯರ 75 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಪೂಜಾ ಮಿಂಚಿದರು.

ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಪೂಜಾ 5–0 ಪಾಯಿಂಟ್ಸ್‌ನಿಂದ ಥಾಯ್ಲೆಂಡ್‌ನ ಪೋರ್ನಿಪಾ ಚುಟೀ ಅವರನ್ನು ಪರಾಭವಗೊಳಿಸಿದರು.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಜಯಿಸಿರುವ ಪೂಜಾ, ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಭಾರತದ ಬಾಕ್ಸರ್‌ಗೆ ಮುಂದಿನ ಸುತ್ತಿನಲ್ಲಿ ಚೀನಾದ ಲೀ ಕ್ವಿಯಾನ್‌ ಸವಾಲು ಎದುರಾಗಲಿದೆ. ವಿಶ್ವ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಹಿರಿಮೆ ಹೊಂದಿರುವ ಲೀ, ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ 5–0ಯಿಂದ ಮಂಗೋಲಿಯಾದ ಮ್ಯಾಗಮರ್ಜಾಗಲ್‌ ಮುಂಖಾಬತ್‌ ವಿರುದ್ಧ ಗೆದ್ದರು.

ಸಚಿನ್‌ಗೆ ನಿರಾಸೆ: ಪುರುಷರ 81 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಸಚಿನ್‌ ಕುಮಾರ್‌, ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾದ ಡಾಕ್ಸಿಂಗ್‌ ಚೆನ್‌ ಎದುರು ಮಣಿದರು.

ಹೀಗಿದ್ದರೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಸಚಿನ್‌ಗೆ ಅವಕಾಶವಿದೆ. ಇದಕ್ಕಾಗಿ ಅವರು ಎಂಟರ ಘಟ್ಟದಲ್ಲಿ ಸೋತವರ ನಡುವಣ ‘ಬಾಕ್ಸ್‌ ಆಫ್’ ಪೈಪೋಟಿಯಲ್ಲಿ ಎರಡು ಪಂದ್ಯಗಳನ್ನು ಗೆಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT