ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಳೂರಿಗೆ ಪುಣೆ ಸವಾಲು

Last Updated 20 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಚೆನ್ನೈ: ಹಿಂದಿನ ಎರಡು ಸೋಲುಗಳಿಂದ ಕಂಗೆಟ್ಟಿರುವ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯಲ್ಲಿ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಹೋರಾಟದಲ್ಲಿ ರೋಹಿತ್‌ ಕುಮಾರ್‌ ಮುಂದಾಳತ್ವದ ಬುಲ್ಸ್‌ ತಂಡ ಪುಣೇರಿ ಪಲ್ಟನ್‌ ಎದುರು ಸೆಣಸಲಿದೆ.

ಬೆಂಗಳೂರಿನ ತಂಡ ಆಡಿರುವ ಎಂಟು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು 27 ಪಾಯಿಂಟ್ಸ್‌ ಸಂಗ್ರಹಿಸಿದೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಎಂಟು ಪಂದ್ಯಗಳಿಂದ ಕೇವಲ 14 ಪಾಯಿಂಟ್ಸ್‌ ಹೆಕ್ಕಿರುವ ಪುಣೇರಿ, ಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿದೆ. ಈ ತಂಡ ಕೂಡ ಹಿಂದಿನ ಎರಡು ಪಂದ್ಯಗಳಲ್ಲಿ ನಿರಾಸೆ ಕಂಡಿದೆ.

ಯುವ ರೈಡರ್‌ ಪವನ್‌ ಶೆರಾವತ್‌, ಬೆಂಗಳೂರು ತಂಡದ ‘ಟ್ರಂಪ್‌ ಕಾರ್ಡ್‌’ ಆಗಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು (107) ಪಾಯಿಂಟ್ಸ್‌ ಗಳಿಸಿದ ಹಿರಿಮೆ ಹೊಂದಿದ್ದಾರೆ. ಅವರ ಮೇಲೆ ಬುಲ್ಸ್‌ ಹೆಚ್ಚು ಅವಲಂಬಿತವಾಗಿದೆ.

ನಾಯಕ ರೋಹಿತ್‌ ಮತ್ತು ಸುಮಿತ್‌ ಸಿಂಗ್‌ ಅವರಿಂದ ಪವನ್‌ಗೆ ಉತ್ತಮ ಬೆಂಬಲ ಸಿಗಬೇಕಿದೆ. ರಕ್ಷಣಾ ವಿಭಾಗದಲ್ಲೂ ತಂಡ ಪರಿಣಾಮಕಾರಿ ಆಟ ಆಡಿದರೆ ಪುಣೇರಿ ತಂಡವನ್ನು ಸುಲಭವಾಗಿ ಕಟ್ಟಿಹಾಕಬಹುದು.

ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಆತಿಥೇಯ ತಮಿಳ್‌ ತಲೈವಾಸ್‌ ಎದುರಾಗಲಿವೆ.

ಜೈಪುರ ತಂಡವು ಅಜಯ್‌ ಠಾಕೂರ್‌ ಮುಂದಾಳತ್ವದ ತಲೈವಾಸ್‌ ತಂಡವನ್ನು ಮಣಿಸಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ನಾಯಕ ದೀಪಕ್‌ ನಿವಾಸ್‌ ಹೂಡಾ ಜೈಪುರ ತಂಡದ ಬೆನ್ನೆಲುಬಾಗಿದ್ದಾರೆ. ಅವರು ಆಲ್‌ರೌಂಡ್‌ ಆಟದ ಮೂಲಕ ಈ ಬಾರಿಯ ಲೀಗ್‌ನಲ್ಲಿ ಮಿಂಚುತ್ತಿದ್ದಾರೆ. ಡಿಫೆಂಡರ್‌ ಸಂದೀಪ್‌ ಕುಮಾರ್‌ ಧುಲ್‌ ಮೇಲೂ ವಿಶ್ವಾಸ ಇಡಬಹುದಾಗಿದೆ. ಅವರು ಈ ಸಲ ಅತಿ ಹೆಚ್ಚು (31) ಟ್ಯಾಕಲ್‌ ಪಾಯಿಂಟ್ಸ್‌ ಗಳಿಸಿದ್ದಾರೆ.

ಇಂದಿನ ಪಂದ್ಯಗಳು

ಬೆಂಗಳೂರು ಬುಲ್ಸ್‌–ಪುಣೇರಿ ಪಲ್ಟನ್‌

ಆರಂಭ: ರಾತ್ರಿ 7.30

ಜೈಪುರ ಪಿಂಕ್‌ಪ್ಯಾಂಥರ್ಸ್‌–ತಮಿಳ್‌ ತಲೈವಾಸ್‌

ಆರಂಭ: ರಾತ್ರಿ 8.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT