ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಹೈದರಾಬಾದ್ ಹುಡುಗಿ ಪಿ.ವಿ. ಸಿಂಧು ಜಯದ ಆರಂಭ

Last Updated 25 ಜುಲೈ 2021, 19:19 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಗೆಲುವಿನೊಂದಿಗೆ ಕೂಟದಲ್ಲಿ ಪದಕದ ಪಯಣ ಆರಂಭಿಸಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್‌ ಸಿಂಧು, ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಇಸ್ರೇಲ್‌ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ ಸುಲಭ ಜಯ ಸಾಧಿಸಿದರು.

ಭಾರತದ ಆಟಗಾರ್ತಿ ಈ ಪಂದ್ಯದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದು ಗಮನ ಸೆಳೆಯಿತು. ಮೃಧು ಸ್ವಭಾವದ ಹಾಗೂ ಮಿತಭಾಷಿಯಾಗಿರುವ ಸಿಂಧು ಅವರ ಆಟದಲ್ಲಿ ಈ ಹಿಂದೆ ಆಕ್ರಮಣತೆಯ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಮನಗಂಡ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌, ಶಿಷ್ಯೆಯ ತಪ್ಪುಗಳನ್ನು ತಿದ್ದಿ ತೀಡಿದ್ದರು. ಆಕ್ರಮಣಶೀಲತೆ ಮೈಗೂಡಿಸಿಕೊಳ್ಳಲು ನೆರವಾಗಿದ್ದರು. ಹೀಗಾಗಿ ಹೈದರಾಬಾದ್‌ನ ಆಟಗಾರ್ತಿ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲಲು ಸಾಧ್ಯವಾಗಿತ್ತು.

ಸಿಂಧು, ಮಾನಸಿಕ ಹಾಗೂ ದೈಹಿಕವಾಗಿ ಈಗ ಮತ್ತಷ್ಟು ಸದೃಢರಾಗಿರುವುದು ಭಾನುವಾರದ ಅವರ ಆಟದಲ್ಲೇ ಎದ್ದು ಕಂಡಿತು. ಅನುಭವದಿಂದಲೂ ಪಾಠ ಕಲಿತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಟೋಕಿಯೊ ಕೂಟಕ್ಕಾಗಿಯೇ ವಿಶೇಷ ತಯಾರಿ ಮಾಡಿಕೊಂಡಿದ್ದ 26 ವರ್ಷ ವಯಸ್ಸಿನ ಸಿಂಧು, ಮೊದಲ ಪಂದ್ಯದಲ್ಲಿ ಯಾವ ಹಂತದಲ್ಲೂ ತಪ್ಪುಗಳಾಗದಂತೆ ಎಚ್ಚರವಹಿಸಿದರು. ಮೊದಲ ಗೇಮ್‌ನ ಆರಂಭದಲ್ಲೇ 3–4 ಹಿನ್ನಡೆ ಕಂಡಿದ್ದ ಅವರು ಬಳಿಕ ಆಕ್ರಮಣಕಾರಿಯಾಗಿ ಆಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

11–5 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಸಿಂಧು, ದ್ವಿತೀಯಾರ್ಧದಲ್ಲಿ ರ‍್ಯಾಲಿಗಳಿಗೆ ಹೆಚ್ಚು ಒತ್ತು ಕೊಟ್ಟರು. ನೇರ ಹಾಗೂ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಜೊತೆಗೆ ಚುರುಕಿನ ಡ್ರಾಪ್‌ಗಳ ಮೂಲಕವೂ ಸತತವಾಗಿ ಪಾಯಿಂಟ್ಸ್‌ ಕಲೆಹಾಕಿ ಗೇಮ್‌ ಜಯಿಸಿದರು.

ದ್ವಿತೀಯ ಗೇಮ್‌ನಲ್ಲಿ ಸಿಂಧು ಆಟ ಮತ್ತಷ್ಟು ಕಳೆಗಟ್ಟಿತು. 9–3ರಿಂದ ಮುಂದಿದ್ದ ಭಾರತದ ಆಟಗಾರ್ತಿ ನಂತರ ಮತ್ತಷ್ಟು ಚುರುಕಾಗಿ ಆಡಿ 7 ಪಾಯಿಂಟ್ಸ್‌ಗಳ ಮುನ್ನಡೆಯೊಂದಿಗೆ ಮೊದಲಾರ್ಧದ ಆಟ ಮುಗಿಸಿದರು. ಎರಡನೇ ಅವಧಿಯಲ್ಲಿ ಇಸ್ರೇಲ್‌ನ ಆಟಗಾರ್ತಿ ಅನೇಕ ತಪ್ಪುಗಳನ್ನು ಮಾಡಿದರು. ಹೀಗಾಗಿ ಸಿಂಧು ಖಾತೆಗೆ ಸುಲಭವಾಗಿ ಪಾಯಿಂಟ್ಸ್‌ಗಳು ಜಾರಿದವು. ಸೆನಿಯಾ ಬಾರಿಸಿದ ಷಟಲ್‌ ಅಂಗಳದ ಆಚೆ ಬೀಳುತ್ತಿದ್ದಂತೆ ಭಾರತದ ಆಟಗಾರ್ತಿ ಸಂಭ್ರಮಿಸಿದರು.

‘ಇದು ಹೊಸ ಆರಂಭ. ಹೀಗಾಗಿ ಆಯಾ ದಿನ ನಡೆಯುವ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಿದ್ಧರಾಗಿರಬೇಕು. ಒಲಿಂಪಿಕ್ಸ್‌ನಂತಹ ಮಹಾ ಕೂಟದಲ್ಲಿ ಎಲ್ಲರೂ ಪದಕದ ಗುರಿಯೊಂದಿಗೆ ಕಣಕ್ಕಿಳಿಯುತ್ತಾರೆ. ಯಾರೂ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ’ ಎಂದು ಸಿಂಧು ಪ್ರತಿಕ್ರಿಯಿಸಿದರು.

ಇಂದು ಡಬಲ್ಸ್‌ ಹೋರಾಟ

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಅವರು ಪುರುಷರ ಡಬಲ್ಸ್‌ ವಿಭಾಗದಲ್ಲಿ ಸೋಮವಾರ ಅಂಗಳಕ್ಕಿಳಿಯಲಿದ್ದಾರೆ.ಎರಡನೇ ಸುತ್ತಿನ ಹಣಾಹಣಿಯಲ್ಲಿ ಭಾರತದ ಆಟಗಾರರಿಗೆ ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಗಿಡೊನ್‌ ಹಾಗೂ ಕೆವಿನ್‌ ಸಂಜಯ ಸುಖಮುಲ್ಜೊ ಅವರ ಸವಾಲು ಎದುರಾಗಲಿದೆ.ಈ ಹಣಾಹಣಿ ಮುಸಾಶಿನೊ ಫಾರೆಸ್ಟ್‌ ಪ್ಲಾಜಾದ ಎರಡನೇ ಅಂಕಣದಲ್ಲಿ ನಿಗದಿಯಾಗಿದೆ. ಮೊದಲ ಸುತ್ತಿನ ಪೈಪೋಟಿಯಲ್ಲಿ ಮಿಂಚಿರುವ ಭಾರತದ ಜೋಡಿ ಈ ಪಂದ್ಯದಲ್ಲೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

***

ಮೊದಲ ಹೋರಾಟ ಸುಲಭದ್ದಾಗಿತ್ತು. ಹಾಗಂತ ಲಘುವಾಗಿ ಪರಿಗಣಿಸಲಿಲ್ಲ. ಪಂದ್ಯ ಯಾವುದೇ ಆಗಿರಲಿ, ಎದುರಾಳಿ ಯಾರೇ ಇರಲಿ, ಪಾಯಿಂಟ್ಸ್‌ ಗಳಿಸುವುದಷ್ಟೇ ನಮ್ಮ ಗುರಿಯಾಗಿರಬೇಕು

–ಪಿ.ವಿ.ಸಿಂಧು, ಭಾರತದ ಆಟಗಾರ್ತಿ

***

ಪಂದ್ಯದ ವಿವರ

ಸಿಂಧು ಸೆನಿಯಾ

21 ಮೊದಲ ಗೇಮ್‌ 7

21 ಎರಡನೇ ಗೇಮ್‌ 10

7 ರ‍್ಯಾಂಕಿಂಗ್‌ 58

ಪಂದ್ಯದ ಅವಧಿ: 28 ನಿಮಿಷ

ಗುಂಪು: ಜೆ

ಸಿಂಧು ಮುಂದಿನ ಎದುರಾಳಿ: ಚೆವುಂಗ್‌ ನಗನ್‌ ಯಿ.

ಅಂಕಿ ಅಂಶ

13ಮೊದಲ ಗೇಮ್‌ನಲ್ಲಿ ಸಿಂಧು ಸತತವಾಗಿ ಕಲೆಹಾಕಿದ ಪಾಯಿಂಟ್ಸ್‌

16ಮೊದಲ ಗೇಮ್‌ನಲ್ಲಿ ಸಿಂಧು ಸರ್ವ್‌ಗಳ ಮೂಲಕವೇ ಗಳಿಸಿದ ಪಾಯಿಂಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT