ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು

Last Updated 17 ಜುಲೈ 2022, 14:57 IST
ಅಕ್ಷರ ಗಾತ್ರ

ಸಿಂಗಪುರ: ಚಾಕಚಕ್ಯತೆಯ ಆಟವಾಡಿದ ಭಾರತದ ಪಿ.ವಿ. ಸಿಂಧು, ಭಾನುವಾರ ಇಲ್ಲಿ ಕೊನೆಗೊಂಡ ಸಿಂಗಪುರ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಹೈದರಾಬಾದ್‌ನ ಅನುಭವಿ ಆಟಗಾರ್ತಿ 21-9, 11-21, 21-15 ರಲ್ಲಿ ಚೀನಾದ ವಾಂಗ್‌ ಜಿ ಯಿ ಅವರನ್ನು ಮಣಿಸಿದರು. ಫೈನಲ್‌ ಹಣಾಹಣಿ 58 ನಿಮಿಷ ನಡೆಯಿತು.

ಸಿಂಧು ಅವರು ಹಾಲಿ ಏಷ್ಯನ್‌ ಚಾಂಪಿಯನ್‌ ಆಗಿರುವ 22 ವರ್ಷದ ವಾಂಗ್ ವಿರುದ್ಧದ ಗೆಲುವಿನ ದಾಖಲೆಯನ್ನು 2–0 ಗೆ ಹೆಚ್ಚಿಸಿಕೊಂಡರು. ಕಳೆದ ವರ್ಷ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಇವರು ಎದುರಾಗಿದ್ದಾಗ ಸಿಂಧುಗೆ ಗೆಲುವು ಒಲಿದಿತ್ತು.

ಫೈನಲ್‌ನಲ್ಲಿ ಇಬ್ಬರು ಆಟಗಾರ್ತಿಯರು ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಆದರೆ ನಿರ್ಣಾಯಕ ಘಟ್ಟಗಳಲ್ಲಿ ಸಿಂಧು ಮೇಲುಗೈ ಸಾಧಿಸಿ ಗೆದ್ದರು. ಸಿಂಧುಗೆ ಈ ವರ್ಷ ದೊರೆತ ಮೂರನೇ ಪ್ರಶಸ್ತಿ ಇದು. ಈ ಹಿಂದೆ ಸೈಯದ್‌ ಮೋದಿ ಮತ್ತು ಸ್ವಿಸ್‌ ಓಪನ್‌ ಟೂರ್ನಿ ಜಯಿಸಿದ್ದರು.

ಮೊದಲ ಗೇಮ್‌ನಲ್ಲಿ ಆರಂಭದ ಎರಡು ಪಾಯಿಂಟ್‌ ಕಳೆದುಕೊಂಡ ಸಿಂಧು, ಆ ಬಳಿಕ ಅತ್ಯುತ್ತಮ ಆಟವಾಡಿ ಸತತ 11 ಪಾಯಿಂಟ್‌ ಕಲೆಹಾಕಿದರು. ವಿರಾಮದ ವೇಳೆ 11–2 ರಲ್ಲಿ ಮುನ್ನಡೆ ಪಡೆದರು. ಆ ಬಳಿಕವೂ ಅದೇ ಲಯ ಕಾಪಾಡಿಕೊಂಡು ಗೇಮ್‌ ಗೆದ್ದರು.

ಆದರೆ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ವಾಂಗ್ 11–3 ರಲ್ಲಿ ಮೇಲುಗೈ ಪಡೆದರು. ಭಾರಿ ಹಿನ್ನಡೆ ಅನುಭವಿಸಿದ ಭಾರತದ ಆಟಗಾರ್ತಿ, ಮರುಹೋರಾಟ ನಡೆಸುವ ಪ್ರಯತ್ನ ಕೈಬಿಟ್ಟರು. ಗೇಮ್‌ ಗೆದ್ದ ವಾಂಗ್‌ 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಸೆಟ್‌ನ ಆರಂಭದಲ್ಲಿ ತುರುಸಿನ ಪೈಪೋಟಿ ನಡೆದು 5–5 ರಲ್ಲಿ ಸಮಬಲ ಕಂಡುಬಂತು. ಈ ಹಂತದಲ್ಲಿ ಕೆಲವೊಂದು ಭರ್ಜರಿ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯ ಕಂಗೆಡಿಸಿದ ಸಿಂಧು 11–6 ಮುನ್ನಡೆ ಪಡೆದರು.

ಸುಲಭದಲ್ಲಿ ಮಣಿಯಲು ಸಿದ್ಧರಿಲ್ಲದ ವಾಂಗ್‌ ಹಿನ್ನಡೆಯನ್ನು 11–12 ಕ್ಕೆ ತಗ್ಗಿಸಿದರು. ಆದರೆ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತ ಸಿಂಧು, 18–14 ರಲ್ಲಿ ಮುನ್ನಡೆ ಸಾಧಿಸಿದರು. ಆಕರ್ಷಕ ಸ್ನ್ಯಾಷ್‌ಗಳ ಮೂಲಕ ಮತ್ತೆರಡು ಪಾಯಿಂಟ್‌ ಕಲೆಹಾಕಿ ಐದು ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿದರು.

ಮೊದಲ ‌ಮ್ಯಾಚ್‌ ಪಾಯಿಂಟ್‌ ಅವಕಾಶದಲ್ಲೇ ಪಾಯಿಂಟ್‌ ಗಿಟ್ಟಿಸಿ ಗೆಲುವಿನ ಸಂಭ್ರಮ ಆಚರಿಸಿಕೊಂಡರು.

ಕಾಮನ್‌ವೆಲ್ತ್‌ ಕೂಟಕ್ಕೆ ಕೆಲವೇ ದಿನಗಳಿರುವಾಗ ಲಭಿಸಿದ ಈ ಪ್ರಶಸ್ತಿಯು ಸಿಂಧು ಅವರ ಆತ್ಮವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿದೆ. ಕಾಮನ್‌ವೆಲ್ತ್‌ ಕೂಟ ಜುಲೈ 28 ರಿಂದ ನಡೆಯಲಿದ್ದು, ಸಿಂಧು ಭಾರತದ ಪದಕದ ಭರವಸೆ ಎನಿಸಿಕೊಂಡಿದ್ದಾರೆ.

ಗಿಂಟಿಂಗ್‌ಗೆ ಪ್ರಶಸ್ತಿ: ಇಂಡೊನೇಷ್ಯದ ಆಂಥೊಣಿ ಸಿನಿಸುಕ ಗಿಂತಿಂಗ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ 23–21, 21–17 ರಲ್ಲಿ ಜಪಾನ್‌ನ ನರವೊಕ ಕೊದೈ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT