ಮಂಗಳವಾರ, ಮಾರ್ಚ್ 2, 2021
21 °C
ಸಾವಿನ ಕದ ತಟ್ಟಿದರೂ ಸಿಗಲಿಲ್ಲ ಒಲಿಂಪಿಕ್ಸ್ ಸಾಧಕನಿಗೆ 30 ಲಕ್ಷ ಬಹುಮಾನ

PV Web Exclusive | ಪದಕ ವಿಜೇತನ ಅಣಕಿಸಿದ ಪ್ರಭುತ್ವ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

‘ಸರ್ಕಾರ ಈಗ ನಮಗೆ ನೀಡುವ ಹಣ ಕೇವಲ ಕಾಗದದ ಚೂರು ಇದ್ದಂತೆ. ಈ ಹಣವನ್ನು ಮುಂಚೆಯೇ ಕೊಟ್ಟಿದ್ದರೆ, ನನ್ನ ಮಗನನ್ನು ಉಳಿಸಿಕೊಳ್ಳುತ್ತಿದ್ದೆ...’

2015ರಲ್ಲಿ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ನಡೆದಿದ್ದ ವಿಶೇಷ ಒಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಎತ್ತಿ ಹಿಡಿದ್ದಿದ್ದ, ಸೈಕ್ಲಿಸ್ಟ್ ರಾಜ್‌ವೀರ್ ಸಿಂಗ್‌ ಅವರ ತಂದೆ ಬಲ್ಬೀರ್ ಸಿಂಗ್ ಅವರ ನೋವಿನ ನುಡಿಗಳಿವು. ಒಂದು ಕಿ.ಮೀ. ಮತ್ತು ಎರಡು ಕೀ.ಮೀ. ಸೈಕ್ಲಿಂಗ್‌ನಲ್ಲಿ ಹದಿನೈದನೇ ವಯಸ್ಸಿಗೆ ಈ ಸಾಧನೆ ಮಾಡಿದ ರಾಜ್‌ವೀರ್ ಜನವರಿ 13ರಂದು ಕೊನೆಯುಸಿರೆಳೆದರು.

ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಸಿಯಾರ್‌ ಗ್ರಾಮದ ರಾಜ್‌ವೀರ್, ಮೆದುಳಿನಲ್ಲಿ ಕಾಣಿಸಿಕೊಂಡಿದ್ದ ತೀವ್ರತರ ಸೋಂಕಿನಿಂದಾಗಿ ಡಿಸೆಂಬರ್ 18ರಂದು ಲೂಧಿಯಾನದ ದೀಪಕ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ, ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಸಿಎಂಸಿಎಚ್) ಸ್ಥಳಾಂತರಿಸಲಾಗಿತ್ತು.

ಒಂದು ತಿಂಗಳು ವೆಂಟಿಲೇಟರ್‌ನಲ್ಲಿದ್ದ ಅವರು, ಮೆದುಳಿನ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲು ಹಣವಿಲ್ಲದೆ 21ನೇ ವಯಸ್ಸಿನಲ್ಲಿ ತೀರಿಕೊಂಡರು. ರಾಜ್‌ವೀರ್ ಚಿನ್ನದ ಪದಕ ಗೆದ್ದಾಗ ₹30 ಲಕ್ಷ ನೀಡುವುದಾಗಿ, ಪಂಜಾಬ್‌ನ ಅಂದಿನ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಸರ್ಕಾರ ಪ್ರಕಟಿಸಿತ್ತು. ಐದು ವರ್ಷವಾದರೂ ಸಾಧಕನ ಕೈಗೆ ಆ ಹಣ ಸೇರಿರಲಿಲ್ಲ. ಇದೀಗ ರಾಜ್‌ವೀರ್ ನಿಧನವಾದ ಎರಡೇ ದಿನಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಅವರ ಕುಟುಂಬಕ್ಕೆ ₹5 ಲಕ್ಷ ಆರ್ಥಿಕ ನೆರವು ಘೋಷಿಸಿದೆ!

ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದ ಪುತ್ರನಿಗೆ ಸಿಗಬೇಕಿದ್ದ ಬಹುಮಾನದ ಹಣ ನೀಡಲು ಆಳುವ ವರ್ಗ ತೋರಿದ ದಿವ್ಯ ನಿರ್ಲಕ್ಷ್ಯ, ಆತನ ತಂದೆಗೆ ಈ ವ್ಯವಸ್ಥೆ ಮೇಲೆ ಹತಾಶೆ ಮೂಡಿಸಿದೆ. ‘ನನ್ನ ಮಗ ಒಲಿಂಪಿಕ್ಸ್‌ಗೆ ಹೋಗಿ ಪದಕಗಳನ್ನು ಗೆಲ್ಲದೇ ಇದ್ದಿದ್ದರೆ ಎಷ್ಟೋ ಚನ್ನಾಗಿತ್ತು. ಅದರಿಂದಾಗಿ ನಾವು ಅನುಭವಿಸಿದ ಕಷ್ಟ–ನೋವು ಒಂದೆರಡಲ್ಲ’ ಎನ್ನುವ ಬಲ್ಬೀರ್ ಸಿಂಗ್, ಮಗನ ನೆನಪಲ್ಲೇ ಹಾಸಿಗೆ ಹಿಡಿದಿದ್ದಾರೆ.

ಗಗನ ಕುಸುಮವಾದ ಬಹುಮಾನ

ವಿಶೇಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆಯ ಸಾಧನೆಯನ್ನು, ಕೊಂಡಾಡಿದ್ದ ಅಂದಿನ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್ ಬಾದಲ್, ತಲಾ ಒಂದು ಪದಕಕ್ಕೆ ₹15 ಲಕ್ಷದಂತೆ ಎರಡು ಪದಕಕ್ಕೆ ₹30 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ವಿರೋಧ ಪಕ್ಷ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದ್ದರು.

ರಾಜ್ಯ ಸರ್ಕಾರ ವಿಶೇಷ ಒಲಿಂಪಿಕ್ಸ್ ಸಾಧಕರಿಗೆ ಬಹುಮಾನ ನೀಡುವ ಸಲುವಾಗಿಯೇ ಹೊಸ ನೀತಿಗೆ ಒಪ್ಪಿಗೆ ನೀಡಿತ್ತು. ಆದರೆ, ಅಧಿಸೂಚನೆಯನ್ನು ಮಾತ್ರ ಹೊರಡಿಸಲಿಲ್ಲ. ನಂತರ ಅಧಿಕಾರಕ್ಕೆ ಬಂದ ಅಮರಿಂದರ್ ಕೂಡ, ಕೊಟ್ಟ ಮಾತು ಮರೆತರು. ಗುಡಿಸಲಿನಲ್ಲಿ ಅರಳಿದ ಈ ಪ್ರತಿಭೆಗೆ ಸಿಗಬೇಕಿದ್ದ ಬಹುಮಾನದ ಹಣ ಗಗನ ಕುಸುಮವಾಗಿಯೇ ಉಳಿಯಿತು.

‘ಪ್ರಕಾಶ್ ಸಿಂಗ್ ಬಾದಲ್ ಬಹುಮಾನ ಘೋಷಿಸಿದರು. ಈಗಿನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಣ ಬಿಡುಗಡೆ ಮಾಡಿಕೊಡುವ ಭರವಸೆ ನೀಡಿದ್ದರು. ರಾಜಕಾರಣಿಗಳು ತಮ್ಮ ಮಾತನ್ನು ಉಳಿಸಿಕೊಳ್ಳದೆ, ನನ್ನ ಮಗನ ಸಾಧನೆಗೆ ಅಗೌರವ ತೋರಿದರು’ ಎಂದು ಮಾಧ್ಯಮದ ಎದುರು ಬಲ್ಬೀರ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದಾರೆ.

‘ಮಗನ ಸೈಕ್ಲಿಂಗ್ ತರಬೇತಿ ಮತ್ತು ಆರೋಗ್ಯದ ಚಿಕಿತ್ಸೆಗಾಗಿ ಕೂಲಿ ಕೆಲಸ ಬಿಟ್ಟು, ಬಹುಮಾನದ ಹಣ ಪಡೆಯಲು ಲೂಧಿಯಾನದ ಜಿಲ್ಲಾಧಿಕಾರಿ ಕಚೇರಿಯಿಂದಿಡಿದು ಮುಖ್ಯಮಂತ್ರಿ ಕಚೇರಿವರೆಗೆ ಅಲೆದು ಸಾಕಾಯಿತು. ಹಣ ಮಾತ್ರ ಬಿಡುಗಡೆಯಾಗಲಿಲ್ಲ. ಹಣದ ನಿರೀಕ್ಷೆಯಲ್ಲೇ ಮಗ ಮೃತಪಟ್ಟ. ಸರ್ಕಾರದಿಂದ ನಾವು ಯಾವುದೇ ಭಿಕ್ಷೆ ಕೇಳಿರಲಿಲ್ಲ. ಮಗನಿಗೆ ಸಿಗಬೇಕಿದ್ದ ಹಕ್ಕನ್ನಷ್ಟೇ ಕೇಳಿದ್ದೆವು. ಮಗ ಆಸ್ಪತ್ರೆಯಲ್ಲಿದ್ದಾಗ ಯಾವ ಅಧಿಕಾರಿಯೂ ಅತ್ತ ಸುಳಿಯಲಿಲ್ಲ. ಸರ್ಕಾರೇತರ ಸಂಸ್ಥೆ ಮನುಕ್ತಾ ದಿ ಸೇವಾ ನಮ್ಮ ಕೈಹಿಡಿಯದಿದ್ದರೆ, ನನ್ನ ಮಗನನ್ನು ಆಸ್ಪತ್ರೆಗೂ ಸೇರಿಸಲಾಗುತ್ತಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್‌ನ ಕ್ರೀಡಾ ಇಲಾಖೆ ಅಧಿಕಾರಿಗಳು, ‘2015ರಲ್ಲಿ ಎಸ್‌ಡಿಎ–ಬಿಜೆಪಿ ಸರ್ಕಾರ ₹30 ಲಕ್ಷ ಬಹುಮಾನ ಘೋಷಿಸಿದ್ದು ನಿಜ. ಬಹುಮಾನ ನೀಡುವ ನೀತಿಗೆ ಸಂಬಂಧಿಸಿದಂತೆ, ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸದಿದ್ದರಿಂದ, ಹಣ ಬಿಡುಗಡೆಯಾಗಿಲ್ಲ’ ಎನ್ನುತ್ತಾರೆ.

ಕೂಲಿ ಕೆಲಸ ಮಾಡುತ್ತಿದ್ದ ಸಾಧಕ

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರೂ ಇತರ ಕ್ರೀಡಾಪಟುಗಳಿಗೆ ಸಿಗುವ ಸನ್ಮಾನ, ಪ್ರಶಸ್ತಿ–ಪುರಸ್ಕಾರ, ಗೌರವ ಹಾಗೂ ಸ್ಥಾನಮಾನಗಳು ರಾಜ್‌ವೀರ್‌ಗೆ ಸಿಗಲಿಲ್ಲ. ಇದಾದ ಎರಡೇ ವರ್ಷಕ್ಕೆ ಅವರು ತನ್ನ ತಂದೆಯೊಂದಿಗೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದದ್ದು ಸ್ಥಳೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಘೋಷಣೆಯಾಗಿದ್ದ ಬಹುಮಾನದ ಹಣ ಬಿಡುಗಡೆಯಾಗದಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿದ್ದವು. ರಾಜ್ಯ ಸರ್ಕಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಮತ್ತೆ ಭರವಸೆ ನೀಡಿತು. ಕೂಲಿ ಮಾಡುತ್ತಲೇ ತನ್ನ ಹಳೆಯ ಸೈಕಲ್‌ನಲ್ಲಿ, ಪ್ರಾಕ್ಟೀಸ್ ಮಾಡುತ್ತಿದ್ದ ಈ ಸಾಧಕನ ಬೆನ್ನಿಗೆ ನಿಂತಿದ್ದು ಮನುಕ್ತಾ ದಿ ಸೇವಾ ಎಂಬ ಸರ್ಕಾರೇತರ ಸಂಸ್ಥೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರ ಆರೈಕೆ ಕೇಂದ್ರವನ್ನು ನಡೆಸುವ ಈ ಸಂಸ್ಥೆಯು, ರಾಜ್‌ವೀರ್ ಅವರಿಗೆ ಆರೈಕೆ ಕೇಂದ್ರದಲ್ಲಿ ಮೇಲ್ವಿಚಾರಕ ಕೆಲಸವನ್ನು ನೀಡಿತ್ತು. ರಾಜ್‌ವೀರ್ ಮೃತಪಟ್ಟಾಗ ಆಸ್ಪತ್ರೆಯ ಬಿಲ್ ₹5 ಲಕ್ಷವನ್ನು ಪಾವತಿಸಿದ್ದು ಕೂಡ ಈ ಸಂಸ್ಥೆಯೇ.

ಕೆಸರೆರಚಾಟಕ್ಕೆ ಕಾರಣವಾದ ಸಾವು

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಹಣವಿಲ್ಲದೆ ನಿಧನರಾದ ರಾಜ್‌ವೀರ್ ಅವರ ಸಾವು, ಪಂಜಾಬ್‌ನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ರಾಜ್‌ವೀರ್‌ ಸಾವಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಅವರೇ ಕಾರಣ ಎಂದು ಎಎಪಿ ಆರೋಪಿಸಿದೆ.

ಸರ್ಕಾರದ ತಪ್ಪು ನೀತಿಗಳಿಂದಾಗಿ ಪ್ರತಿಭಾವಂತ ಸೈಕ್ಲಿಸ್ಟ್ ಅನ್ನು ದೇಶ ಕಳೆದುಕೊಂಡಿದೆ. ಬುದ್ಧಿಮಾಂದ್ಯನಾಗಿದ್ದರೂ ದೇಶಕ್ಕೆ ಕೀರ್ತಿ ತಂದುಕೊಟ್ಟ ರಾಜ್‌ವೀರ್‌ಗೆ ಸರ್ಕಾರ ಸುಳ್ಳು ಭರವಸೆ ನೀಡಿ ಬಲಿ ಪಡೆದಿದೆ ಎಂದು ದೂರಿರುವ ಎಎಪಿ, ಸೋಧಿ ರಾಜೀನಾಮೆಗೆ ಆಗ್ರಹಿಸಿದೆ. ಈಗಲಾದರೂ ಸರ್ಕಾರ ಚಿನ್ನದ ಪದಕ ಸಾಧನೆ ಮಾಡುವ ವಿಶೇಷ ಮಕ್ಕಳಿಗೆ ಬಹುಮಾನ ನೀಡುವ ನೀತಿಯನ್ನು ಜಾರಿಗೆ ತರಬೇಕು. ಉದ್ಯೋಗದಲ್ಲೂ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ವಿಶೇಷ ಒಲಿಂಪಿಕ್ಸ್‌ ಪಂಜಾಬ್‌ ಚಾಪ್ಟರ್‌ನ ಕಾರ್ಯನಿರ್ವಾಹಕ ಸದಸ್ಯ ಪರಮಜೀತ್ ಸಚ್‌ದೇವ, ‘ರಾಜ್‌ವೀರ್ ಸಿಂಗ್ ಸಾವು ಪಂಜಾಬ್‌ ಸರ್ಕಾರಕ್ಕೆ ಆದ ದೊಡ್ಡ ಅವಮಾನ. ವಿಶೇಷ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ಮಕ್ಕಳಿಗೆ ಬಹುಮಾನ ನೀಡುವ ನೀತಿಗೆ ಹಿಂದಿನ ಸರ್ಕಾರದ ಒಪ್ಪಿಗೆ ಇದ್ದರೂ, ಅಧಿಸೂಚನೆ ಹೊರಡಿಸದೆ ವಿಳಂಬ ಮಾಡಿದ್ದು ಸರಿಯಲ್ಲ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಹರಿಯಾಣ ಸರ್ಕಾರ ವಿಶೇಷ ಒಲಿಂಪಿಕ್ಸ್‌ ವಿಜೇತರಿಗೆ ತಲಾ ಒಂದು ಚಿನ್ನದ ಪದಕಕ್ಕೆ ₹20 ಲಕ್ಷ ಬಹುಮಾ ಕೊಟ್ಟಿದೆ.  ಪಂಜಾಬ್‌ನಲ್ಲಿ ಐದು ವರ್ಷವಾದರೂ ಅಧಿಸೂಚನೆ ಹೊರಡಿಸದೆ ವಿಳಂಬ ಮಾಡಲಾಗಿದೆ. ತಮಗೆ ಸಿಗಬೇಕಾದ ಹಕ್ಕಿನ ಬಗ್ಗೆ ದನಿ ಎತ್ತಲಾಗದ ಹಾಗೂ ರಾಜಕಾರಣಿಗಳ ಭರವಸೆಗಳ ಹಿಂದಿರುವ ಸುಳ್ಳನ್ನು ಅರಿಯದ ಈ ಮುಗ್ಧ ಸಾಧಕ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾರತಮ್ಯಕ್ಕೆ ಕನ್ನಡಿ ಹಿಡಿದ ಸಾವು

ಕ್ರೀಡಾ ಲೋಕದ ಸಾಧಕರನ್ನು ಆಳುವ ವರ್ಗ ಹೇಗೆ ತಾರತಮ್ಯದಿಂದ ನೋಡುತ್ತದೆ ಎಂಬುದಕ್ಕೆ ರಾಜ್‌ವೀರ್ ಸಾವಿನ ಪ್ರಕರಣ ಕನ್ನಡಿ ಹಿಡಿದಿದೆ. ಒಲಿಂಪಿಕ್ಸ್‌, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟ, ಪ್ಯಾರಲಿಂಪಿಕ್ಸ್‌ನಂತಹ ಕ್ರೀಡಾಕೂಟಗಳಲ್ಲಿ ವಿಜೇತರಾಗುವವರಿಗೆ ಸರ್ಕಾರಗಳು ವಿಶೇಷ ಗೌರವ ಹಾಗೂ ಸಮ್ಮಾನ ನೀಡುತ್ತವೆ. ಇನ್ನೂ ಹಣವೇ ಮೇಲುಗೈ ಆಗಿರುವ ಕ್ರಿಕೆಟ್‌ನಲ್ಲಿ ಆಟಗಾರರಿಗೆ ಸಿಗುವ ಗೌರವ, ಜನಪ್ರಿಯತೆ ಹಾಗೂ ಹಣ ಗಳಿಕೆ ಹುಬ್ಬೇರಿಸುತ್ತದೆ.

ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಮತ್ತು ಜನಪ್ರಿಯ ಸಾಮಾಜಿಕ ಮಾಧ್ಯಮಗಳ ಗಾಳಿ–ಗಂಧ ಗೊತ್ತಿಲ್ಲದ ಪ್ರತಿಭೆ ರಾಜ್‌ವೀರ್‌. ತಮ್ಮ ನೋವನ್ನು ಮಾಧ್ಯಮಗಳ ಎದುರು ತೋಡಿಕೊಂಡು ನ್ಯಾಯ ಪಡೆಯುವ ಮಾರ್ಗವೂ ಗೊತ್ತಿಲ್ಲದ ಇಂತಹ ವಿಶೇಷ ಕ್ರೀಡಾ ಪ್ರತಿಭೆಗಳು, ತಮ್ಮ ಸಾಧನೆಯಿಂದಾಗಿಯೇ ಒಂದಲ್ಲ ಒಂದು ರೀತಿಯಲ್ಲಿ ಅವಮಾನಕ್ಕೆ ಒಳಗಾಗುತ್ತಿದ್ದಾರೆ.

ದೇಶಕ್ಕೆ ಕೀರ್ತಿ ತಂದವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಪ್ರಭುತ್ವ ಹಾಗೂ ಅಧಿಕಾರಶಾಹಿಯ ಕಣ್ಣುಗಳು ಮಂಜಾದರೆ, ರಾಜ್‌ವೀರ್‌ ಅವರಂತಹ ಪ್ರತಿಭೆಗಳು ಅಲ್ಲಲ್ಲೇ ನಕ್ಷತ್ರಗಳಂತೆ ಮಿನುಗಿ ಮರೆಯಾಗುತ್ತವೆ. ಪ್ರಭುತ್ವ ಇನ್ನಾದರೂ ಇಂತಹವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು