ಮಂಗಳವಾರ, ಆಗಸ್ಟ್ 3, 2021
21 °C

ಖಾಲಿ ಕ್ರೀಡಾಂಗಣದಲ್ಲಿ ನೆನಪಾದ ಸಂಭ್ರಮಗಳು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಇಂಗ್ಲೆಂಡ್ –ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯ ಆರಂಭವಾದಾಗ ಬಹಳಷ್ಟು ಮಂದಿಗೆ ಒಂದು ಕುತೂಹಲವಿತ್ತು. ಬೌಲರ್‌ಗಳು ವಿಕೆಟ್ ಪಡೆದಾಗ ಸಹ ಆಟಗಾರರು ಬಂದು ಅವರನ್ನು ಹೇಗೆ ಅಭಿನಂದಿಸುತ್ತಾರೆಂಬ ಕುತೂಹಲ ಅದಾಗಿತ್ತು.

ಏಕೆಂದರೆ ಕೊರೊನೋತ್ತರ ಕಾಲದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿತ್ತು. ‘ನವ ವಾಸ್ತವ’ ನಿಯಮಗಳೊಂದಿಗೆ ನಡೆದ ಈ ಪಂದ್ಯದಲ್ಲಿ ಆಟಗಾರರು ವಿಕೆಟ್‌ ಪಡೆದಾಗಲೊಮ್ಮೆ ಅಂತರ ಕಾಪಾಡಿಕೊಳ್ಳುವ ಸವಾಲು ಎದುರಿಸಿದರು. ಸಹ ಆಟಗಾರರಿಗೆ ದೂರದಿಂದಲೇ ತಮ್ಮ ಮೊಣಕೈಗಳನ್ನು ಪರಸ್ಪರ ತಾಗಿಸಿ ಸಂಭ್ರಮಿಸಿದರು. 

ಮೊದಲೇ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಹುಮ್ಮಸ್ಸು ಕಾಪಾಡಿಕೊಂಡು  ಆಡಬೇಕಾದ ಪರಿಸ್ಥಿತಿ. ಜೊತೆಗೆ ಈ ನಿರ್ಬಂಧಗಳು ಬೇಸರ ಮೂಡಿಸಿದ್ದು ಸಹಜ.  ಈ ಪಂದ್ಯ ನೋಡುತ್ತಲೇ ಕೊರೊನಾ ವಕ್ಕರಿಸುವುದಕ್ಕಿಂತ ಮುಂಚಿನ ಕ್ರಿಕೆಟ್‌ ಪಂದ್ಯಗಳ ದೃಶ್ಯಾವಳಿಗಳು ನೆನಪಾದವು. ಎಂತೆಂಥ ಸಂಭ್ರಮಾಚರಣೆಗಳು ಇದ್ದವಲ್ಲ  ಎಂದು ಅನಿಸಿತ್ತು. 

ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಹುರಿದುಂಬಿಸುವಿಕೆಯಿಂದ ಉತ್ತೇಜಿತರಾಗಿ ಹಲವು ಕ್ರಿಕೆಟಿಗರು ತಮ್ಮ ವಿನೂತನ ಸಂಭ್ರಮಾಚರಣೆಗಳಿಂದಲೇ ಜಗದ್ವಿಖ್ಯಾತರಾದರು. ಅದರಲ್ಲೂ ಈ ಶತಮಾನದ ಕಳೆದ 20 ವರ್ಷಗಳಲ್ಲಿ ಹಲವಾರು ರೀತಿಯ ಶೈಲಿಗಳು ಕ್ರಿಕೆಟ್ ಪ್ರೇಮಿಗಳನ್ನು ಮನರಂಜಿಸಿವೆ.  ಅವುಗಳಲ್ಲಿ ಆಯ್ದ  ಪ್ರಸಂಗಗಳು ಇಲ್ಲಿವೆ:

––

* 2002ರಲ್ಲಿ  ಲಾರ್ಡ್ಸ್‌ ಮೈದಾನದಲ್ಲಿ ನಡೆದಿದ್ದ ನ್ಯಾಟ್‌ ವೆಸ್ಟ್‌ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ಮ‌ರೆಯಲು ಸಾಧ್ಯವೇ?  ಆವತ್ತು ಕ್ರೀಡಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿ (ಈಗ ಬಿಸಿಸಿಐ ಅಧ್ಯಕ್ಷ) ತಮ್ಮ ಜೆರ್ಸಿ ತೆಗೆದು ಗಾಳಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಬಹುಶಃ  ಅಷ್ಟು ಬೋಲ್ಡ್‌ ಆಗಿ ವರ್ತಿಸಿದ ಮೊದಲ ಭಾರತೀಯ ಕ್ರಿಕೆಟಿಗ ಗಂಗೂಲಿ. ಅದಕ್ಕಾಗಿಯೇ ಆ ಕುರಿತು ಆಗ ಬಹಳಷ್ಟು ಚರ್ಚೆಗಳು ನಡೆದಿದ್ದವು.

ಆ ಪಂದ್ಯದಲ್ಲಿ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಅವರ ಜೊತೆಯಾಟ ಕೂಡ ನೆನಪಿನಲ್ಲಿ ಉಳಿಯುವಂತದ್ದು. ಆ ಗೆಲುವಿಗೆ ಸೋಮವಾರಕ್ಕೆ 18 ವರ್ಷ ತುಂಬಿತು. ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿರುವ ಬಂಗಾಳ ಕ್ರಿಕೆಟ್ ಸಂಸ್ಥೆಯ ಕಚೇರಿಯ ಗೋಡೆಯ ಮೇಲೆ ಗಾಜಿನ ಪೆಟ್ಟಿಗೆಯಲ್ಲಿ ಆ ಜೆರ್ಸಿಯನ್ನು ಹಾಕಿಡಲಾಗಿದೆ.

––

* 2016ರ ಟ್ವೆಂಟಿ–20 ವಿಶ್ವಕಪ್ ಫೈನಲ್ ಕೋಲ್ಕತದ ಈಡನ್ ಗಾರ್ಡನ್ಸ್‌  ಕ್ರೀಡಾಂಗಣದಲ್ಲಿ ನಡೆದಿತ್ತು. ಆವತ್ತು ಪ್ರಶಸ್ತಿ ಗೆದ್ದಿದ್ದ ವಿಂಡೀಸ್ ತಂಡದ ಆಟಗಾರರು ಮೈದಾನದಲ್ಲಿ ನೃತ್ಯ ಆರಂಭಿಸಿದ್ದರು. ಅದನ್ನು ಹೋಟೆಲ್‌ಗೆ ಹೋಗುವ ಹಾದಿಯಲ್ಲಿ, ಬಸ್‌ನಲ್ಲಿಯೂ ಮುಂದುವರಿಸಿದ್ದರು. ತಮ್ಮ ತಮ್ಮ ಕೋಣೆಗಳಲ್ಲಿ ಬೆಳಿಗ್ಗೆಯ ವರೆಗೂ ಕುಣಿದಿದ್ದರು. ಇಡೀ ಹೋಟೆಲ್‌ ಸಿಬ್ಬಂದಿಯನ್ನೂ ಕುಣಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅದರಲ್ಲೂ ಡ್ವೆನ್ ಬ್ರಾವೊ, ಡರೆನ್ ಸಾಮಿಯವರ ನೃತ್ಯದ ಝಲಕ್‌ಗಳನ್ನು ಮರೆಯುವಂತೆಯೇ ಇಲ್ಲ.  2012ರಲ್ಲಿಯೂ ವಿಂಡೀಸ್ ಬಳಗವು ಗಂಗ್ನಮ್ ಸ್ಟೈಲ್ ನೃತ್ಯದೊಂದಿಗೆ ಸಂಭ್ರಮಿಸಿತ್ತು.

––

* ಭಾರತದ ಆಟಗಾರರ ಇನ್ನೊಂ ದು ನೆನಪಿನಲ್ಲಿ ಉಳಿಯುವಂತಹ ಸಂಭ್ರಮಾಚರಣೆಯೆಂದರೆ ವಿರಾಟ್ ಕೊಹ್ಲಿ ಬಳಗದ್ದು. 2019ರಲ್ಲಿ ಸಿಡ್ನಿಯಲ್ಲಿ  ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದಿದ್ದ ಭಾರತ ತಂಡವು ಅವತ್ತು ಮಾಡಿದ್ದ ನೃತ್ಯ ಗಮನ ಸೆಳೆದಿತ್ತು. ಆ ಸರಣಿಯಲ್ಲಿ ಉತ್ತಮವಾಗಿ ಅಡಿದ್ದ ಚೇತೇಶ್ವರ್ ಪೂಜಾರ ನೃತ್ಯ ಮಾಡುತ್ತ ನಾಚಿ ನೀರಾಗಿದ್ದರು. ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದವು.

––

* 2016ರಲ್ಲಿ ಲಾರ್ಡ್ಸ್‌ನಲ್ಲಿ ನಡೆ ದಿದ್ದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ಜಯ ದಾಖಲಿಸಿದ್ದ ಪಾಕಿಸ್ತಾನ ತಂಡದ ಆಟಗಾರರು ಮೈದಾನದಲ್ಲಿಯೇ ಪುಷ್ ಅಪ್ಸ್‌ ಮಾಡಿ ಸಂಭ್ರಮಿಸಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು