ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಗೆ ಹಶಿಮೊಟೊ ಅಧ್ಯಕ್ಷೆ

ಟೋಕಿಯೊ: ಮಾಜಿ ಒಲಿಂಪಿಯನ್ ಸೀಕೊ ಹಶಿಮೊಟೊ ಅವರು ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಅಧ್ಯಕ್ಷೆಯಾಗಿ ಗುರುವಾರ ನೇಮಕಗೊಂಡಿದ್ದಾರೆ. ಜಪಾನ್‌ನ ರಾಜಕೀಯ ಅಧಿಕಾರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವಿರಳವಾಗುತ್ತಿದೆ ಎಂಬ ಚರ್ಚೆ ನಡೆಯುವ ಹೊತ್ತಿನಲ್ಲಿ ಈ ಆಯ್ಕೆ ಗಮನಸೆಳೆದಿದೆ.
ಬಹುತೇಕ ಪುರುಷರೇ ಇರುವ ಆಯೋಜನಾ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹಶಿಮೊಟೊ ಅವರ ಹೆಸರನ್ನು ಪ್ರಕಟಿಸಲಾಯಿತು. ಮಹಿಳೆಯರ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದ ಈ ಹಿಂದಿನ ಅಧ್ಯಕ್ಷ ಯೋಶಿರೊ ಮೋರಿ, ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಎರಡು ವಾರಗಳ ಹಿಂದೆ ರಾಜೀನಾಮೆ ನೀಡಿದ್ದರು.
ಹಶಿಮೊಟೊ ಅವರು ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಅವರ ಸಂಪುಟದಲ್ಲಿ ಒಲಿಂಪಿಕ್ಸ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಖಾತೆಗಳನ್ನೂ ಅವರು ಹೊಂದಿದ್ದರು.
56 ವರ್ಷದ ಹಶಿಮೊಟೊ ಮೂರು ಬೇಸಿಗೆ ಒಲಿಂಪಿಕ್ಸ್‌ಗಳಲ್ಲಿ (1988, 92 ಹಾಗೂ 96) ಸೈಕ್ಲಿಂಗ್ ವಿಭಾಗದಲ್ಲಿ ಮತ್ತು ನಾಲ್ಕು ಚಳಿಗಾಲದ ಒಲಿಂಪಿಕ್ ಕೂಟಗಳಲ್ಲಿ (1984, 88, 92 ಹಾಗೂ 94) ಸ್ಪೀಡ್‌ಸ್ಕೇಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. 1992ರಲ್ಲಿ ಸ್ಪೀಡ್‌ಸ್ಕೇಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.