ಮಂಗಳವಾರ, ಮಾರ್ಚ್ 21, 2023
20 °C

ಐಟಿಟಿಎಫ್‌ ಅಥ್ಲೀಟ್‌ಗಳ ಸಮಿತಿಗೆ ಶರತ್‌ ಕಮಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತದ ಅಚಂತಾ ಶರತ್‌ ಕಮಲ್ ಅವರು ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ (ಐಟಿಟಿಎಫ್‌) ಅಥ್ಲೀಟ್‌ಗಳ ಸಮಿತಿಗೆ ಆಯ್ಕೆಯಾಗಿದ್ದಾರೆ. ಭಾರತದ ಆಟಗಾರನೊಬ್ಬ ಈ ಸಮಿತಿಗೆ ಆಯ್ಕೆಯಾಗಿರುವುದು ಇದೇ ಮೊದಲು.

ಏಷ್ಯಾ, ಆಫ್ರಿಕಾ, ಅಮೆರಿಕಾ, ಯೂರೋಪ್‌ ಮತ್ತು ಓಷಿಯಾನಿಯಾ ವಲಯದಿಂದ ತಲಾ ನಾಲ್ಕು ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಮತದಾನದ ಮೂಲಕ ಸಮಿತಿಗೆ ಆಯ್ಕೆ ಮಾಡಲಾಯಿತು. ಇವರು 2022 ರಿಂದ 2026ರ ವರೆಗೆ  ಕಾರ್ಯನಿರ್ವಹಿಸಲಿದ್ದಾರೆ.

ನ.7 ರಿಂದ 13ರ ವರೆಗೆ ನಡೆದ ಮತದಾನದಲ್ಲಿ ವಿವಿಧ ದೇಶಗಳ ಒಟ್ಟು 283 ಆಟಗಾರರು ಮತ ಚಲಾಯಿಸಿದ್ದರು. ಶರತ್‌ ಕಮಲ್‌ ಅವರು ಎರಡನೇ ಅತಿಹೆಚ್ಚು ಮತಗಳನ್ನು (187) ಪಡೆದು ಆಯ್ಕೆಯಾದರು. ರೊಮೇನಿಯದ ಎಲಿಜಬೆತ್‌ ಸಮರಾ ಅವರು ಅತ್ಯಧಿಕ (212) ಮತಗಳನ್ನು ಗಳಿಸಿದರು.

ಮಹಿಳೆಯರ ಕೋಟಾದಲ್ಲಿ ಚೀನಾದ ಲಿಯು ಶಿವೆನ್‌ ಅವರು 153 ಮತಗಳನ್ನು ಗಳಿಸಿ ಆಯ್ಕೆಯಾದರು. ಈ ಸಮಿತಿಯಲ್ಲಿ ಏಷ್ಯಾದಿಂದ ಶರತ್‌ ಮತ್ತು ಲಿಯು ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.

‘ನಿರೀಕ್ಷೆಗೂ ಹೆಚ್ಚಿನ ಮತಗಳನ್ನು ನೀಡಿ ನನ್ನನ್ನು ಸಮಿತಿಗೆ ಆಯ್ಕೆ ಮಾಡಿರುವುದಕ್ಕೆ ಏಷ್ಯಾ ಹಾಗೂ ಇತರ ದೇಶಗಳ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ನನಗೆ ದೊರೆತ ಬಲುದೊಡ್ಡ ಗೌರವ’ ಎಂದು ಶರತ್‌ ಕಮಲ್‌ ಪ್ರತಿಕ್ರಿಯಿಸಿದ್ದಾರೆ.

ಅಥ್ಲೀಟ್‌ಗಳ ಸಮಿತಿಗೆ ಆಯ್ಕೆಯಾದವರು: ಎಲಿಜಬೆತ್‌ ಸಮರಾ (ರೊಮೇನಿಯ), ಅಚಂತಾ ಶರತ್‌ ಕಮಲ್‌ (ಭಾರತ), ಡೇನಿಯಲಿ ರಿಯೊಸ್ (ಪೋರ್ಟೊರಿಕೊ), ಒಮರ್‌ ಅಸ್ಸರ್‌ (ಈಜಿಪ್ಟ್‌), ಮೆಲಿಸಾ ಟಾಪೆರ್ (ಆಸ್ಟ್ರೇಲಿಯಾ), ಸ್ಟೆಫಾನ್ ಫೆಗೆರ್ಲ್ (ಆಸ್ಟ್ರಿಯಾ), ಜಾನ್‌ ಪೆರ್ಸನ್ (ಸ್ವೀಡನ್), ಲಿಯು ಶಿವೆನ್‌ (ಚೀನಾ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು