ಸೋಮವಾರ, ಏಪ್ರಿಲ್ 12, 2021
32 °C
ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ: ಚಿರಾಗ್–ಸಾತ್ವಿಕ್ ಜೋಡಿ ಮೇಲೆ ಕಣ್ಣು

ಸ್ವಿಸ್ ಓಪನ್: ಸೆಮಿಫೈನಲ್‌ನಲ್ಲಿ ಸಿಂಧು–ಸೈನಾ ಪೈಪೋಟಿ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಸೆಲ್, ಸ್ವಿಟ್ಜರ್ಲೆಂಡ್‌: ಭಾರತದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಮಂಗಳವಾರ ಆರಂಭವಾಗಲಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್, ಬಿ.ಸಾಯಿ ಪ್ರಣೀತ್‌ ಮತ್ತು ಸಮೀರ್ ವರ್ಮಾ ಭರವಸೆ ಮೂಡಿಸಿದ್ದಾರೆ.

ಪುರಷರ ವಿಭಾಗದಲ್ಲಿ ಭಾರತದ ಆಟಗಾರರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಸಮೀರ್ ವರ್ಮಾ, ಪ್ರಣಯ್ ಮತ್ತು ಕಿದಂಬಿ ಶ್ರೀಕಾಂತ್ ಕ್ರಮವಾಗಿ 2018, 2016 ಮತ್ತು 2015ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಸಾಯಿ ಪ್ರಣೀತ್ ಕಳೆದ ಬಾರಿ ರನ್ನರ್ ಅಪ್ ಆಗಿದ್ದರು. ಒಲಿಂಪಿಕ್ಸ್‌ ಅರ್ಹತೆ ಗಳಿಸುವ ಅವಧಿ ಸ್ವಲ್ಪದರಲ್ಲೇ ಆರಂಭವಾಗಲಿರುವುದರಿಂದ ಈ ಟೂರ್ನಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧು ಎರಡು ತಿಂಗಳ ಹಿಂದೆ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಮೂರು ಟೂರ್ನಿಗಳಲ್ಲಿ  ನೀರಸ ಆಟವಾಡಿದ್ದರು. ಸ್ವಿಜ್ ಓಪನ್‌ನಲ್ಲಿ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗಿದ್ದು ಟರ್ಕಿಯ ನೆಸ್ಲಿಯಾನ್ ಇಜಿಟ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ. ಸೆಮಿಫೈನಲ್ ವರೆಗೂ ಅವರ ಹಾದಿ ಸುಗಮವಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಬುಸನನ್ ಒಂಗ್ಬಾಮ್‌ರುಂಫಮ್ ವಿರುದ್ಧ ಸೆಣಸುವರು. ಜನವರಿಯಲ್ಲಿ ನಡೆದಿದ್ದ ಥಾಯ್ಲೆಂಡ್ ಓಪನ್‌ನಲ್ಲಿ ಬುಸನನ್‌ ವಿರುದ್ಧ ಸಿಂಧು ಸುಲಭ ಜಯ ಸಾಧಿಸಿದ್ದರು. 

ಎರಡು ಬಾರಿ ಸ್ವಿಸ್ ಓಪನ್ ಚಾಂಪಿಯನ್ ಆಗಿರುವ ಸೈನಾ ಹಾದಿ ಸ್ವಲ್ಪ ಕಠಿಣವಾಗಿದೆ. ಸೆಮಿಫೈನಲ್ ತಲುಪಬೇಕಾದರೆ ಕೊರಿಯಾದ ಆರನೇ ಶ್ರೇಯಾಂಕಿತೆ ಸಂಗ್ ಜೀ ಹ್ಯೂನ್ ಮತ್ತು ಡೆನ್ಮಾರ್ಕ್‌ನ ನಾಲ್ಕನೇ ಶ್ರೇಯಾಂಕಿತೆ ಮಿಯಾ ಬ್ಲಿಚ್‌ಫೆಲ್ಟ್ ಸವಾಲನ್ನು ಸೈನಾ ಮೀರಬೇಕಾಗಿದೆ. ಆರಂಭಿಕ ಸುತ್ತುಗಳಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಜಯ ಗಳಿಸಿದರೆ ನಾಲ್ಕರ ಘಟ್ಟದಲ್ಲಿ ಮುಖಾಮುಖಿಯಾಗಲಿದ್ದಾರೆ.

ಈ ತಿಂಗಳಲ್ಲಿ 31ನೇ ವರ್ಷಕ್ಕೆ ಕಾಲಿಡಲಿರುವ ಸೈನಾ ಈಚೆಗೆ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಹೀಗಾಗಿ ವಿಶ್ವ  ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಥಾಯ್ಲೆಂಡ್‌ನ ಫಿಟಾಯಪರ್ನ್‌ ಚೈವಾನ್ ಎದುರು ಸೆಣಸುವರು. ಫಿಟಾಯಪರ್ನ್‌ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದರು. 

ಸಾತ್ವಿಕ್ ಸಾಯಿರಾಜ್–ಚಿರಾಗ್‌ ಮೇಲೆ ಕಣ್ಣು

ಥಾಯ್ಲೆಂಡ್ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ವಿಶ್ವದ 10ನೇ ಕ್ರಮಾಂಕದ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎರಡನೇ ಶ್ರೇಯಾಂಕ ಹೊಂದಿರುವ ಈ ಜೋಡಿ ಡೆನ್ಮಾರ್ಕ್‌ನ ಮಥಾಯಸ್ ಬೋಯೆ ಬಳಿ ಕಠಿಣ ತರಬೇತಿ ಪಡೆದುಕೊಂಡಿದ್ದು ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಸ್ಕಾಟ್ಲೆಂಡ್‌ನ ಕ್ರಿಸ್ಟೋಫರ್ ಗ್ರಿಮ್ಲಿ ಮತ್ತು ಮ್ಯಾಥ್ಯೂ ಗ್ರಿಮ್ಲಿ ಎದುರಾಳಿಗಳು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಮೇಲೆಯೂ ನಿರೀಕ್ಷೆಯ ಭಾರವಿದೆ. ಹಿಂದಿನ ಟೂರ್ನಿಯಲ್ಲಿ ಇವರಿಬ್ಬರು ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಮೊದಲ ಸುತ್ತಿನಲ್ಲಿ ಈ ಜೋಡಿಗೆ ಕಠಿಣ ಸವಾಲು ಎದುರಾಗಿದ್ದು ಇಂಡೊನೇಷ್ಯಾದ ಎರಡನೇ ಶ್ರೇಯಾಂಕಿತ ಜೋಡಿ ಹಫೀಜ್ ಫೈಜಲ್ ಮತ್ತು ಗ್ಲೋರಿಯಾ ಇಮ್ಯಾನ್ಯುಯೆಲ್‌ ಅವರ ವಿರುದ್ಧ ಆಡಲಿದ್ದಾರೆ. 

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸಮೀರ್ ವರ್ಮಾಗೆ ಕಿದಂಬಿ ಶ್ರೀಕಾಂತ್ ಎದುರಾಳಿ. ಎಚ್‌.ಎಸ್‌.ಪ್ರಣಯ್‌ ನೆದರ್ಲೆಂಡ್ಸ್‌ನ ಮಾರ್ಕ್ ಕಲಿಜೋ ಎದುರು, ಸೌರಭ್ ವರ್ಮಾ ಸ್ವಿಟ್ಜರ್ಲೆಂಡ್‌ನ ಕ್ರಿಸ್ಟಿಯನ್ ಕಿರ್ಚ್‌ಮಯರ್ ಎದುರು, ಪರುಪಳ್ಳಿ ಕಶ್ಯಪ್ ಸ್ಪೇನ್‌ನ ಪ್ಯಾಬ್ಲೊ ಅಬಿಯನ್ ವಿರುದ್ಧ, ಅಜಯ್ ಜಯರಾಮ್ ಥಾಯ್ಲೆಂಡ್‌ನ ಸಿಟಿಕೊಮ್ ತಮಸಿನ್ ವಿರುದ್ಧ, ಪ್ರಣೀತ್‌ ಇಸ್ರೇಲ್‌ನ ಮಿಶಾ ಜಿಲ್ಬೆರಮ್ ವಿರುದ್ಧ ಮತ್ತು ಲಕ್ಷ್ಯಸೇನ್ ಥಾಯ್ಲೆಂಡ್‌ನ ನೊಂಗ್‌ಸಕ್ ಎದುರು ಸೆಣಸುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು