ಶನಿವಾರ, ನವೆಂಬರ್ 16, 2019
21 °C
ಇಂದಿನಿಂದ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಸಿಂಧು ಮೇಲೆ ಎಲ್ಲರ ಕಣ್ಣು

Published:
Updated:
Prajavani

ಚಾಂಗ್‌ಜೌ, ಚೀನಾ: ವಿಶ್ವಚಾಂಪಿಯನ್‌ ಭಾರತದ ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ನಲ್ಲಿ ತಮ್ಮ ಪಾರಮ್ಯ ಉಳಿಸಿಕೊಳ್ಳುವ ಸವಾಲಿಗೆ ಸಜ್ಜಾಗಿದ್ದಾರೆ. ಮಂಗಳವಾರ ಆರಂಭವಾಗುವ ಚೀನಾ ಓಪನ್‌ ವಿಶ್ವ ಟೂರ್‌ ಟೂರ್ನಿಯಲ್ಲಿ ಅವರು ಭಾರತವನ್ನು ಮುನ್ನಡೆಸಲಿದ್ದಾರೆ.

₹ 7 ಕೋಟಿಗಿಂತ ಅಧಿಕ ಒಟ್ಟು ಬಹುಮಾನ ಮೊತ್ತದ (10,00,000 ಅಮೆರಿಕನ್‌ ಡಾಲರ್‌) ಟೂರ್ನಿ ಇದಾಗಿದೆ. ವಿಶ್ವದ ಐದನೇ ರ‍್ಯಾಂಕಿನ ಆಟಗಾರ್ತಿ ಸಿಂಧು, ಹೋದ ತಿಂಗಳು ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದರು. ಭಾರತದ ಚಿನ್ನದ ಪದಕದ ಬರವನ್ನು ನೀಗಿಸಿದ್ದರು.

2016ರಲ್ಲಿ ಚೀನಾ ಓಪನ್‌ ಗರಿ ಮುಡಿಗೇರಿಸಿಕೊಂಡಿರುವ ಹೈದರಾಬಾದ್‌ ಆಟಗಾರ್ತಿ, ಇಲ್ಲಿ ಮತ್ತೊಮ್ಮೆ ಅದೇ ರೀತಿಯ ಸಾಮರ್ಥ್ಯ ತೋರುವ ಭರವಸೆಯಲ್ಲಿ ಇದ್ದಾರೆ. 24 ವರ್ಷದ ಸಿಂಧು ಮೊದಲ ಪಂದ್ಯದಲ್ಲಿ ಚೀನಾದ ಲೀ ಕ್ಸೆರುಯ್‌ ಎದುರು ಸೆಣಸಲಿರುವರು. ಲೀ ಈ ಹಿಂದೆ ವಿಶ್ವ ಚಾಂಪಿಯನ್‌ ಆಗಿದ್ದವರು ಹಾಗೂ ಒಲಿಂಪಿಕ್ಸ್ ಚಿನ್ನ ವಿಜೇತ ಆಟಗಾರ್ತಿ.

ಅಚ್ಚರಿಯೆಂದರೆ ಸಿಂಧು, 2012ರಲ್ಲಿ ಚೀನಾ ಮಾಸ್ಟರ್ಸ್ ಟೂರ್ನಿಯಲ್ಲಿ ಲೀ ಅವರನ್ನೇ ಮಣಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ  ಜನಪ್ರಿಯರಾಗಿದ್ದರು. 20ನೇ ರ‍್ಯಾಂಕಿನ ಆಟಗಾರ್ತಿಯ ಎದುರು ಸಿಂಧು 3–3 ಗೆಲುವು ಸೋಲಿನ ರುಚಿ ಕಂಡಿದ್ದಾರೆ.

ಈ ಋತುವಿನಲ್ಲಿ ಗಾಯಗಳಿಂದ ಬಳಲಿದ್ದ ಸೈನಾ ನೆಹ್ವಾಲ್‌ ಕೂಡ ಇಲ್ಲಿ ಪ್ರಶಸ್ತಿ ಬೇಟೆಗೆ ಸಜ್ಜಾಗಿದ್ದಾರೆ. ವಿಶ್ವದ 8ನೇ ರ‍್ಯಾಂಕಿನ ಆಟಗಾರ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತಿದ್ದರು. ಮೊದಲ ಹಣಾಹಣಿಯಲ್ಲಿ ಸೈನಾ ಅವರಿಗೆ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಫಾನ್‌ ಎದುರಾಳಿ.

ಮೊಣಕಾಲು ನೋವಿಗೆ ಒಳಗಾಗಿರುವ ಕಿದಂಬಿ ಶ್ರೀಕಾಂತ್‌ ಹಾಗೂ ಡೆಂಗ್ಯೂನಿಂದ ಬಳಲುತ್ತಿರುವ ಎಚ್‌.ಎಸ್‌. ಪ್ರಣಯ್‌ ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಬಿ.ಸಾಯಿ ಪ್ರಣೀತ್‌ ಆಡುತ್ತಿದ್ದು, ಥಾಯ್ಲೆಂಡ್‌ನ ಸುಪನ್ಯು ಅವಿಹಿಂಗ್‌ಸನೊನ್‌ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್‌, ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ಶೆಟ್ಟಿ, ಮನು ಅತ್ರಿ–ಬಿ.ಸುಮಿತ್‌ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌– ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ–ಪ್ರಣವ್‌ ಜೆರಿ ಚೋಪ್ರಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ– ಅಶ್ವಿನಿ ಜೋಡಿ ಕಣಕ್ಕಿಳಿಯಲಿದೆ. 

ಪ್ರತಿಕ್ರಿಯಿಸಿ (+)