ಶುಕ್ರವಾರ, ಡಿಸೆಂಬರ್ 3, 2021
20 °C

ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ; ಚಿರಾಗ್–ಸಾತ್ವಿಕ್ ಜೋಡಿ ಮೇಲೆ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಒಡೆನ್ಸ್‌: ಒಲಿಂಪಿಕ್ಸ್‌ನಲ್ಲಿ ಎರಡು ಪದಕದ ಸಾಧನೆ ಮಾಡಿರುವ ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ವಿರಾಮದ ನಂತರ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮಂಗಳವಾರ ಆರಂಭವಾಗಲಿರುವ ಡೆನ್ಮಾರ್ಕ್‌ ಓಪನ್ ವಿಶ್ವ ಬ್ಯಾಡ್ಮಿಂಟನ್ ಟೂರ್‌ನಲ್ಲಿ ಅವರು ಸೆಣಸಲಿದ್ದಾರೆ. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಸಿಂಧು ವಿರಾಮ ಬಯಸಿದ್ದರು. ಸತತ ಪಂದ್ಯಗಳಿಂದಾಗಿ ಬಸವಳಿದಿದ್ದ ಕಾರಣ ವಿಶ್ರಾಂತಿ ಪಡೆದಿದ್ದರು. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಡೆನ್ಮಾಕರ್‌ ಓಪನ್‌ ಮೂಲಕ ಪುನರಾರಂಭಗೊಳ್ಳುತ್ತಿದ್ದು ಸಿಂಧು ಗೆಲುವಿನ ಓಟದ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ ಆಡುತ್ತಿರುವುದರಿಂದ ಸ್ಪರ್ಧಾ ಕಣ ರಂಗೇರಿದೆ. ಊಬರ್ ಕಪ್ ಫೈನಲ್ಸ್‌ನಲ್ಲಿ ನೋವಿನಿಂದ ಬಳಲಿದ ಸೈನಾ ಮೊದಲ ಪಂದ್ಯದ ಅರ್ಧದಲ್ಲೇ ವಾಪಸಾಗಿದ್ದರು.

ನಾಲ್ಕನೇ ಶ್ರೇಯಾಂಕ ಸಿಂಧು ಮೊದಲ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹನ್ ಯಿಗಿತ್ ವಿರುದ್ಧ ಸೆಣಸಲಿದ್ದು ಸೈನಾಗೆ ಜಪಾನ್‌ನ ಅಯಾ ಒಹೊರಿ ಮೊದಲ ಎದುರಾಳಿ. ಮೊದಲ ಪಂದ್ಯದಲ್ಲಿ ಗೆದ್ದರೆ ನಂತರ ಸಿಂಧು ನಂತರ ಥಾಯ್ಲೆಂಡ್‌ನ ಬುಸನನ್ ಒಂಗ್‌ಬಂಗ್ರುಂಫನ್ ಅವರನ್ನು ಎದುರಿಸುವರು. 

ಚಿರಾಗ್‌–ಸಾಯಿರಾಜ್ ಮೇಲೆ ಕಣ್ಣು

ಡಬಲ್ಸ್‌ನಲ್ಲಿ ಎಲ್ಲರ ಕಣ್ಣು ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮೇಲೆ ಬಿದ್ದಿದೆ. ಏಳನೇ ಶ್ರೇಯಾಂಕದ ಭಾರತದ ಜೋಡಿ ಇಂಗ್ಲೆಂಡ್‌ನ ಕಲುಂ ಹೆಮಿಂಗ್ ಮತ್ತು ಸ್ಟೀವನ್ ಸ್ಟಾಲ್‌ವುಡ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಚಿರಾಗ್ ಮತ್ತು ಸಾತ್ವಿಕ್ ಈಚೆಗೆ ಉತ್ತಮ ಲಯದಲ್ಲಿರುವುದರಿಂದ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರು ಎನಿಸಿಕೊಂಡಿದ್ದಾರೆ. 

ಭಾನುವಾರ ಮುಕ್ತಾಯಗೊಂಡ ಡಚ್ ಓಪನ್‌ನಲ್ಲಿ ಮಿಂಚಿರುವ ಯುವ ಆಟಗಾರ ಲಕ್ಷ್ಯ ಸೇನ್‌ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಸೌರಭ್ ವರ್ಮಾ ಎದುರು ಸೆಣಸುವರು. ಅರ್ಹತಾ ಸುತ್ತಿನ ಏಕೈಕ ‍ಪಂದ್ಯ ಸೋತ ಕಾರಣ ಲಕ್ಷ್ಯ ಸೇನ್ ಅವರಿಗೆ ಸುದಿರ್‌ಮನ್ ಕಪ್ ಮತ್ತು ಥಾಮಸ್ ಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಮೊದಲ ಸುತ್ತಿನಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಬಿ.ಸಾಯಿ ಪ್ರಣೀತ್ ಕೂಡ ಮುಖಾಮುಖಿಯಾಗಲಿದ್ದಾರೆ. 

ಸಮೀರ್ ವರ್ಮಾ, ಎಚ್‌.ಪ್ರಣಯ್‌, ‍ಪರುಪಳ್ಳಿ ಕಶ್ಯಪ್‌, ಎಂ.ಆರ್.ಅರ್ಜುನ್‌, ಧ್ರುವ ಕಪಿಲ, ಮನು ಅತ್ರಿ, ಸುಮಿತ್ ರೆಡ್ಡಿ, ಎನ್‌.ಸಿಕ್ಕಿ ರೆಡ್ಡಿ, ಅಶ್ವಿನಿ ಪೊನ್ನಪ್ಪ, ಮೇಘನಾ ಜಕ್ಕಂಪುಡಿ, ರಾಮ್ ಪೂರ್ವಿಶಾ ಮುಂತಾದವರು ಕಣದಲ್ಲಿರುವ ಭಾರತದ ಇತರರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು