ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸ್ಥಿತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ: ವಂದನಾ ಕಟಾರಿಯಾ

Last Updated 5 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅನುಭವಿ ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡಿರುವ ಭಾರತ ಮಹಿಳಾ ಹಾಕಿ ತಂಡ ಸದ್ಯ ಉತ್ತಮ ಮತ್ತು ಸಮತೋಲನ ಸ್ಥಿತಿಯಲ್ಲಿದೆ. ಆದ್ದರಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರುವ ಭರವಸೆ ಇದೆ...’

ಅರ್ಜನು ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಮಹಿಳಾ ತಂಡದ ಆಟಗಾರ್ತಿಯರಾದ ವಂದನಾ ಕಟಾರಿಯಾ ಮತ್ತು ಮೋನಿಕಾ ಅವರು ಆಡಿದ ಮಾತು ಇದು.

ನವೆಂಬರ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅಮೆರಿಕವನ್ನು ಒಟ್ಟಾರೆ 6–5 ಗೋಲುಗಳ ಅಂತರದಲ್ಲಿ ಮಣಿಸಿ ಭಾರತ ತಂಡ ಟಿಕೆಟ್ ಪಡೆದುಕೊಂಡಿತ್ತು. ಆದರೆ ಕೊರೊನಾ ವೈರಾಣು ಹಾವಳಿಯಿಂದಾಗಿ ಒಲಿಂಪಿಕ್ಸ್ ಕೂಟವನ್ನು ಮುಂದೂಡಲಾಗಿದೆ. ತಂಡದ ಆಟಗಾರ್ತಿಯರು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ ಇದ್ದಾರೆ.

‘ತಂಡವು ಸಾಮರ್ಥ್ಯ ವೃದ್ಧಿಸುವ ಮತ್ತು ನೈಪುಣ್ಯವನ್ನು ಹೆಚ್ಚಿಸುವ ಕಾರ್ಯವನ್ನು ಸಮರ್ಥವಾಗಿ ಮಾಡಿದೆ. ಒಲಿಂಪಿಕ್ಸ್‌ಗೆ ಪೂರ್ಣಪ್ರಮಾಣದಲ್ಲಿ ಸಜ್ಜಾಗಿದೆ’ ಎಂದು ಮೋನಿಕಾ ಹೇಳಿದರೆ, ‘ತಂಡದ ಸಹ ಆಟಗಾರ್ತಿಯರು ಅಮೋಘ ಬೆಂಬಲ ನೀಡುತ್ತಿದ್ದಾರೆ. ನನ್ನ ಎಲ್ಲ ಸಾಧನೆಗೂ ಅವರೇ ಕಾರಣ’ ಎಂದು ವಂದನಾ ನುಡಿದರು.

ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಈ ವಾರದ ಆರಂಭದಲ್ಲಿ ಹಾಕಿ ಇಂಡಿಯಾ ಶಿಫಾರಸು ಮಾಡಿದೆ. ನಂತರ ವಂದನಾ, ಮೋನಿಕಾ ಮತ್ತು ಪುರುಷರ ತಂಡದ ಹರ್ಮನ್ ಪ್ರೀತ್‌ ಸಿಂಗ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತು.

ವಂದನಾ 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಮೋನಿಕಾ 150 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಕಳೆದ ವರ್ಷ ಹಿರೋಶಿಮಾದಲ್ಲಿ ನಡೆದಿದ್ದ ಎಫ್‌ಐಎಚ್ ಸೀರಿಸ್ ಫೈನಲ್ಸ್‌ನ ಪ್ರಶಸ್ತಿ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಸಾಧನೆ ಮಾಡಲು ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT