ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಂತರದ ಆಟ ‘ಬೇರೇನಾ’?

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಹಾವಳಿಯು ಕೋಟ್ಯಂತರ ಜನರ ಜೀವನಶೈಲಿಯನ್ನೇ ಬದಲಾಯಿಸಿದೆ. ಕ್ರೀಡೆಗಳಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕೆಲವು ರೂಢಿಗಳೂ ಇದರಿಂದ ಬದಲಾಗಬಹುದೇ? ಹೀಗೊಂದು ಕಲ್ಪನೆ ಇಲ್ಲಿದೆ.

*****

ಚೆಂಡಿಗೆ ಎಂಜಲು ಲೇಪಿಸಿ ಹೊಳಪು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ ಬೌಲರ್‌ಗೆ ಎರಡು ಪಂದ್ಯಗಳಿಂದ ಅಮಾನತು...

....

ಆ ತಂಡದ ಮೂವರು ಫುಟ್‌ಬಾಲ್ ಆಟಗಾರರು ಗೋಲು ಗಳಿಸಿದ ತಮ್ಮ ಸಹಆಟಗಾರನನ್ನು ಬಿಗಿದಪ್ಪಿಕೊಂಡು ಸಂಭ್ರಮಿಸಿದರು. ಆದ್ದರಿಂದ ಆ ನಾಲ್ವರಿಗೂ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆಗಾಗಿ ದಂಡ...

....

ಕೊರೊನಾ ವೈರಸ್‌ ಹಾವಳಿ ಮುಗಿದ ನಂತರದ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೇಲಿನ ಇಂತಹ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಬಹುದೇ?

ಹೋದ ತಿಂಗಳು ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಏಕದಿನ ಪಂದ್ಯದ ಸಂದರ್ಭದಲ್ಲಿ ಬೌಲರ್ ಭುವನೇಶ್ವರ್ ಕುಮಾರ್, ‘ಕೊರೊನಾ ವೈರಸ್‌ ಹರಡುವ ಸಂಭವವಿರುವುದರಿಂದ ಚೆಂಡಿಗೆ ಸಲೈವಾ (ಎಂಜಲು) ಹಚ್ಚಿ ಹೊಳಪು ಉಳಿಸಿಕೊಳ್ಳುವ ರೂಢಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗಬಹುದು’ ಎಂದಿದ್ದರು. ಆದರೆ ಮಳೆಯಿಂದಾಗಿ ಆ ಪಂದ್ಯ ನಡೆಯಲಿಲ್ಲ. ನಂತರದ ಪಂದ್ಯಗಳು ಕೊರೊನಾ ವೈರಸ್‌ ಲಾಕ್‌ಡೌನ್ ಕಾರಣ ರದ್ದಾದವು. ಐಪಿಎಲ್ ಟೂರ್ನಿಯನ್ನು ಕೂಡ ಮುಂದೂಡಲಾಯಿತು. ವಿಶ್ವದ ಬೇರೆ ಬೇರೆ ದೇಶಗಳಲ್ಲಿಯೂ ಹಲವು ಕ್ರಿಕೆಟ್ ಪಂದ್ಯಗಳು ರದ್ದಾದವು. ಇದರಿಂದಾಗಿ ಅಂತಹ ಪ್ರಯೋಗ ನೋಡುವ ಅವಕಾಶ ದೊರೆಯಲಿಲ್ಲ.

ಭವಿಷ್ಯದಲ್ಲಿ ಹಾಗೊಂದು ವೇಳೆ ಬದಲಾವಣೆ ಆದರೆ, ಚೆಂಡಿನ ತಯಾರಕರು ಒಂದು ಬದಿಯಲ್ಲಿ ಶಾಶ್ವತ ಹೊಳಪು ಉಳಿಯುವಂತಹ ಪದಾರ್ಥವನ್ನು ಬಳಸುವ ಅನಿವಾರ್ಯತೆ ಬರಬಹುದು. ಏಕೆಂದರೆ ಹೊಳಪಿಲ್ಲದ ಚೆಂಡಿನಲ್ಲಿ ಬೌಲಿಂಗ್ ಮಾಡಿದರೆ ಬ್ಯಾಟ್ಸ್‌ಮನ್‌ ಕೈಯಲ್ಲಿ ಸಿಕ್ಕಾಪಟ್ಟೆ ದಂಡಿಸಿಕೊಳ್ಳುವುದು ಖಚಿತ. ಇಲ್ಲದಿದ್ದರೆ ನೀರಿನ ಪಸೆಯಿರುವ ಪುಟ್ಟ ಸಲಕರಣೆಯನ್ನು ಆಟಗಾರರಿಗೆ ಕೊಡುವ ವ್ಯವಸ್ಥೆಯೂ ಅಗಬಹುದಲ್ಲವೇ?

ಇನ್ನು ಸಾಮಾಜಿಕ ಅಂತರದ ನಿಯಮ ಜಾರಿಯಾದರೆ, ಬೌಲರ್ ವಿಕೆಟ್ ಪಡೆದಾಗ ಸಹ ಆಟಗಾರರು ಓಡಿ ಬಂದು ಅಪ್ಪಿಕೊಳ್ಳುವ ಪರಿಪಾಠಕ್ಕೂ ಪೂರ್ಣವಿರಾಮ ಬೀಳಬಹುದು. ಹಸ್ತಲಾಘವ ಮಾಡಿ ಕಿಸೆಯಲ್ಲಿನ ಸ್ಯಾನಿಟೈಸರ್‌ ತೆಗೆದುಕೊಂಡು ಶುಭ್ರಗೊಳಿಸಿಕೊಳ್ಳುವ ಕಾಲವೂ ಬರಬಹುದು!

ಯುರೋಪ್, ಅಮೆರಿಕಗಳಲ್ಲಿ ಜನಪ್ರಿಯ ಕ್ರೀಡೆಯಾದ ಫುಟ್‌ಬಾಲ್‌ನಲ್ಲಿ ಈ ಸಾಮಾಜಿಕ ಅಂತರದ ನಿಯಮ ಬಂದರೆ ಬಹಳಷ್ಟು ಬದಲಾವಣೆಗಳಾಗಬಹುದು. ಒಬ್ಬ ಆಟಗಾರ ಗೋಲು ಗಳಿಸಿದಾಗ ಉಳಿದವರು ಆತನ ಮೇಲೆ ಮುಗಿಬಿದ್ದು ಸಂಭ್ರಮಿಸುವ ಪರಿಯು ಇನ್ನು ಇತಿಹಾಸದ ಪುಟ ಸೇರಬಹುದು. ವೈಯಕ್ತಿಕ ನೃತ್ಯದ ಸೆಳಕು, ಕುಣಿತ, ನೆಗೆತಕ್ಕೆ ಸೀಮಿತವಾಗಬಹುದು. ಆಟದಲ್ಲಿಯೂ ತಳ್ಳಾಟ, ಎಳೆದಾಟಗಳನ್ನು ನಿಷೇಧಿಸಿ, ಸುರಕ್ಷಿತ ಅಂತರದೊಂದಿಗೆ ಪಾಸಿಂಗ್, ಡ್ರಿಬ್ಲಿಂಗ್‌ಗೆ ಆದ್ಯತೆ ಸಿಗಬಹುದು. ಅದಕ್ಕೆ ‘ಫೇರ್ ಪ್ಲೇ’ ಪುರಸ್ಕಾರವನ್ನು ನೀಡುವ ಕಾಲ ಬಂದರೆ ಅಚ್ಚರಿಯೇನೂ ಇಲ್ಲ. ಇಂತಹ ಬದಲಾವಣೆಗಳು ರಗ್ಬಿ, ಹಾಕಿ ಮತ್ತಿತರ ಎಲ್ಲ ಗುಂಪು ಕ್ರೀಡೆಗಳಲ್ಲಿ ಆಗಬಹುದು.

ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಬರುವ ಪ್ರೇಕ್ಷಕರು ಈಗಾಗಲೇ ಹಲವು ಸುತ್ತುಗಳ ಭದ್ರತಾ ತಪಾಸಣೆಗಳಿಗೆ ಒಳಪಡುತ್ತಿದ್ದಾರೆ. ಇನ್ನು ಮುಂದೆ ಅದರೊಂದಿಗೆ ಥರ್ಮಲ್ ಸ್ಕ್ಯಾನಿಂಗ್ (ಜ್ವರ, ನೆಗಡಿ ತಪಾಸಣೆ) ಕೂಡ ಮಾಡಬಹುದು. ಕ್ರೀಡಾಂಗಣಗಳ ಗ್ಯಾಲರಿಗಳ ವಿಸ್ತಾರವನ್ನು ಹಿಗ್ಗಿಸಿ, ಆಸನಗಳ ನಡುವಿನ ಅಂತರ ಹೆಚ್ಚಬಹುದು. ಇದರಿಂದಾಗಿ ಆಗುವ ನಷ್ಟವನ್ನು ಟಿಕೆಟ್‌ಗಳ ಬೆಲೆ ಹೆಚ್ಚಿಸಿ ಭರಿಸಿಕೊಳ್ಳುವ ಯೋಚನೆಯನ್ನು ಆಯೋಜಕರು ಮಾಡಬಹುದೇನೋ? ಮುಖಗವಸು, ಕೈಗವಸು ಧಾರಣೆ ಕಡ್ಡಾಯವಾಗಬಹುದು. ಪ್ರವೇಶದ್ವಾರ ದಾಟಿ ಒಳಬರುವಾಗ ಪ್ರೇಕ್ಷಕರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ವ್ಯವಸ್ಥೆ ಮಾಡಬಹುದಲ್ಲವೇ?

ಆದರೆ ವೈಯಕ್ತಿಕ ಕ್ರೀಡೆಗಳಾದ ಕುಸ್ತಿ, ಕರಾಟೆ, ಬಾಕ್ಸಿಂಗ್‌ಗಳಲ್ಲಿ ಏನು ಮಾಡಬಹುದು ಎಂಬುದು ಕಲ್ಪನೆಗೆ ಮೀರಿದ್ದು. ಕೈ ಕೈ ಮಿಲಾಯಿಸಲಾಗುವ ಈ ಕ್ರೀಡೆಗಳಲ್ಲಿ ಸಾಮಾಜಿಕ ಅಂತರದ ನಿಯಮ ಜಾರಿ ಕಡುಕಷ್ಟ. ‌ಕಬಡ್ಡಿಯಲ್ಲೂ ಬದಲಾವಣೆ ಕಷ್ಟ! ಅಲ್ಲಿ ಸಾಮಾಜಿಕ ಅಂತರದ ಪ್ರಶ್ನೆಯೇ ಬರುವುದಿಲ್ಲ!

ಇದೆಲ್ಲವೂ ಈಗ ಸುಮ್ಮನೆ ಊಹಿಸಿಕೊಳ್ಳುತ್ತಿರುವುದಷ್ಟೇ. ದಿನದಿಂದ ದಿನಕ್ಕೆ ತನ್ನ ಪ್ರತಾಪ ಹೆಚ್ಚಿಸಿಕೊಂಡು ಜನರನ್ನು ಬಲಿ ಪಡೆಯುತ್ತಿರುವ ಕೊರೊನಾ ವೈರಸ್‌ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನೂ ಬಹಳಷ್ಟು ಸಮಯ ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ. ಒಂದೊಮ್ಮೆ ಎಲ್ಲವೂ ಮೊದಲಿನ ಹಾದಿಗೆ ಬಂದ ನಂತರ ಕ್ರೀಡಾ ಸಂಸ್ಥೆಗಳಲ್ಲಿ ಏನೇನು ಚರ್ಚೆಗಳು ನಡೆಯುತ್ತವೆಯೋ ಗೊತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳು ಬಂದ ನಂತರವಷ್ಟೇ ಕ್ರೀಡಾ ಫೆಡರೇಷನ್‌ಗಳು ನಿರ್ಧಾರ ಕೈಗೊಳ್ಳುತ್ತವೆ. ಆಗ ಈ ಎಲ್ಲ ಊಹೆಗಳು ನಿಜವಾದರೂ ಆಗಬಹುದು!

ಒಂದಂತೂ ನಿಜ. ಆಟಗಾರರು, ಸಿಬ್ಬಂದಿ, ಪ್ರೇಕ್ಷಕರ ಸುರಕ್ಷತೆಗಾಗಿ ಹತ್ತು ಕೆಲವು ನಿಯಮಗಳು ರೂಪುಗೊಳ್ಳುತ್ತವೆ. ಅವುಗಳ ನಿರ್ವಹಣೆಗೆ ಹೊಸ ತಂತ್ರಜ್ಞಾನ, ಗ್ಯಾಜೆಟ್‌ಗಳು ಬಳಕೆಗೆ ಬರುತ್ತವೆ. ಒಟ್ಟಾರೆ ಅಪಾರ ನಷ್ಟ ಅನುಭವಿಸಿರುವ ಕ್ರೀಡಾಲೋಕಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT