ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೀಟ್‌ ಅಥ್ಲೀಟ್‌ಗಳಿಗೆ ವಿಶ್ವದರ್ಜೆಯ ಚಿಕಿತ್ಸೆ: ರಿಜಿಜು

ಕೇಂದ್ರಿಕೃತ ಕ್ರೀಡಾಪಟುಗಳ ಗಾಯ ನಿರ್ವಹಣಾ ವ್ಯವಸ್ಥೆ ಕಾರ್ಯಕ್ರಮಕ್ಕೆ ಕ್ರೀಡಾ ಸಚಿವರ ಚಾಲನೆ
Last Updated 11 ಜೂನ್ 2021, 14:18 IST
ಅಕ್ಷರ ಗಾತ್ರ

ನವದೆಹಲಿ: ತರಬೇತಿ ಅಥವಾ ಟೂರ್ನಿಗಳಲ್ಲಿ ಗಾಯಗೊಂಡ ಎಲೀಟ್‌ ಅಥ್ಲೀಟ್‌ಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ಹಾಗೂ ಪುನಶ್ಚೇತನ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ‘ಕೇಂದ್ರೀಕೃತ ಕ್ರೀಡಾಪಟುಗಳ ಗಾಯ ನಿರ್ವಹಣಾ ವ್ಯವಸ್ಥೆ (ಸಿಎಐಎಮ್‌ಎಸ್‌)’ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಚಾಲನೆ ನೀಡಿದರು.

ಕ್ರೀಡಾಪಟುಗಳಿಗೆ ಗಾಯವಾಗದಂತೆ ತಡೆಯುವ ವಿಧಾನ, ಸಕಾಲದಲ್ಲಿ ರೋಗನಿರ್ಣಯ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಪುನಶ್ಚೇತನ ಕುರಿತು ಒಳನೋಟ ಒದಗಿಸುವ ಉದ್ದೇಶವನ್ನುಸಿಎಐಎಮ್‌ಎಸ್ ಹೊಂದಿದೆ.

ದೇಶದ ಪ್ರಮುಖ ವೈದ್ಯಕೀಯ ತಜ್ಞರ ಸಹಕಾರದೊಂದಿಗೆ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಅಥ್ಲೀಟ್‌ಗಳಿಗೆ ಆರಂಭಿಕವಾಗಿ ಈ ಯೋಜನೆ ಅನ್ವಯವಾಗಲಿದೆ. ನಂತರ ಇತರರಿಗೆ ವಿಸ್ತರಿಸಲಾಗುತ್ತದೆ.

‘ಸಾಮಾನ್ಯ ಗಾಯಗಳಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ವೃತ್ತಿಜೀವನವನ್ನೇ ಕೊನೆಗೊಳಿಸಿಕೊಂಡ ಅನೇಕ ಕ್ರೀಡಾಪಟುಗಳನ್ನು ಕಂಡಿದ್ದೇನೆ. ಕೆಲವು ಗಾಯಗಳಿಗೆ ನಮ್ಮ ದೇಶದಲ್ಲಿ ಚಿಕಿತ್ಸೆ ಲಭಿಸದ ಸಂದರ್ಭದಲ್ಲಿ ಅಥ್ಲೀಟ್‌ಗಳು ವಿದೇಶಗಳಿಗೆ ತೆರಳಬೇಕಾಗುತ್ತದೆ. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಮುಂದಡಿ ಇಟ್ಟಿದ್ದೇವೆ. ಎಲ್ಲ ಕ್ರೀಡಾಪಟುಗಳು ಈ ವ್ಯವಸ್ಥೆಯನ್ನು ಬಯಸಿದ್ದರು‘ ಎಂದು ಆನ್‌ಲೈನ್ ಸಂವಾದವೊಂದರಲ್ಲಿ ಕಿರಣ್‌ ರಿಜಿಜು ಹೇಳಿದ್ದಾರೆ.

‘ದೇಶದಲ್ಲಿ ಕ್ರೀಡಾವಿಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿದ್ದು ಇನ್ನಷ್ಟು ಸುಧಾರಿಸಬೇಕಿದೆ‘ ಎಂದು ಇದೇ ವೇಳೆ ಅವರು ನುಡಿದರು.

ಕ್ರೀಡಾ ಸಚಿವಾಲಯ ಹಾಗೂ ಸಾಯ್‌ನ ಈ ಕಾರ್ಯಕ್ರಮಕ್ಕೆ ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್‌, ಸಾಯ್‌ನ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್‌, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ವೈದ್ಯಕೀಯ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT