ಭಾನುವಾರ, ಆಗಸ್ಟ್ 25, 2019
24 °C

ಬ್ಯಾಡ್ಮಿಂಟನ್‌: ತೇಜಸ್‌, ವಿಜೇತಾಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಅಗ್ರಕ್ರಮಾಂಕದ ಆಟಗಾರ ತೇಜಸ್‌ ಸಂಜಯ್‌ ಕಲ್ಲೋಳಕರ್‌ ಅವರು ಎಂ.ಎಸ್‌.ರಾಮಯ್ಯ ಆನಂದಾಶ್ರಮ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕೆನರಾ ಯೂನಿಯನ್‌ ಅಂಗಳದಲ್ಲಿ ನಡೆದ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ತೇಜಸ್‌ 21–11, 21–19 ನೇರ ಗೇಮ್‌ಗಳಿಂದ ಎರಡನೇ ಶ್ರೇಯಾಂಕದ ಆಟಗಾರ ಎಸ್‌.ಭಾರ್ಗವ್‌ ಅವರನ್ನು ಸೋಲಿಸಿದರು.

ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದ ತೇಜಸ್‌, ಎರಡನೇ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ರೋಚಕ ಘಟ್ಟದಲ್ಲಿ ಮಿಂಚಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಡಬಲ್ಸ್‌ ವಿಭಾಗದಲ್ಲಿ ಸಿ.ಎಸ್‌.ಸಾಕೇತ್‌ ಜೊತೆಗೂಡಿ ಆಡಿದ ತೇಜಸ್‌, ಮತ್ತೊಂದು ಪ್ರಶಸ್ತಿಗೆ ಮುತ್ತಿಕ್ಕಿದರು.

ಆರನೇ ಶ್ರೇಯಾಂಕದ ಜೋಡಿ ಸಾಕೇತ್‌ ಮತ್ತು ತೇಜಸ್‌ 19–21, 21–19, 22–20ರಲ್ಲಿ ಎಚ್‌.ವಿ.ನಿತಿನ್‌ ಮತ್ತು ಎಸ್‌.ಭಾರ್ಗವ್‌ಗೆ ಆಘಾತ ನೀಡಿತು. ನಿತಿನ್‌ ಮತ್ತು ಭಾರ್ಗವ್‌ ಅವರು ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.

ವಿಜೇತಾಗೆ ಪ್ರಶಸ್ತಿ: ಬಾಲಕಿಯರ ವಿಭಾಗದಲ್ಲಿ ವಿಜೇತಾ ಹರೀಶ್‌, ಚಾಂಪಿಯನ್‌ ಆದರು.

ಅಂತಿಮ ಘಟ್ಟದ ಹಣಾಹಣಿಯಲ್ಲಿ ವಿಜೇತಾ 21–6, 21–16ರಲ್ಲಿ ಡಿ.ಶೀತಲ್‌ ಎದುರು ಗೆದ್ದರು.

ಬಾಲಕಿಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಜೋಡಿ ದೀತ್ಯಾ ಮತ್ತು ರಮ್ಯಾ ವೆಂಕಟೇಶ್‌ 21–16, 21–16ರಲ್ಲಿ ಕಿಶಾ ಕೊಠಾರಿ ಮತ್ತು ಶ್ರುತಿ ನಿತಿನ್‌ ಮೊಗೆ ಅವರನ್ನು ಪರಾಭವಗೊಳಿಸಿತು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಎಚ್‌.ವಿ.ನಿತಿನ್‌ ಮತ್ತು ರಮ್ಯಾ ವೆಂಕಟೇಶ್‌ ಪ್ರಶಸ್ತಿ ಜಯಿಸಿದರು.

ಫೈನಲ್‌ನಲ್ಲಿ ನಿತಿನ್‌ ಮತ್ತು ರಮ್ಯಾ 21–23, 21–13, 21–9ರಲ್ಲಿ ಅಗ್ರಶ್ರೇಯಾಂಕದ ಸಿ.ಎಸ್‌.ಸಾಕೆತ್‌ ಮತ್ತು ಡಿ.ಶೀತಲ್‌ ಅವರಿಗೆ ಆಘಾತ ನೀಡಿದರು.

Post Comments (+)