ಸೋಮವಾರ, ಫೆಬ್ರವರಿ 24, 2020
19 °C
ರಾಜ್ಯ ಮಿನಿ ಒಲಿಂಪಿಕ್ಸ್‌: ಹಾಕಿಯಲ್ಲಿ ಕೊಡಗು, ಬಳ್ಳಾರಿ, ಹಾಸನ ತಂಡಗಳು ಫೈನಲ್‌ಗೆ

ಅಥ್ಲೆಟಿಕ್ಸ್‌: ಮುತ್ತಣ್ಣ, ಹಲೀಮಾಗೆ ಚಿನ್ನದ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುತ್ತಣ್ಣ ಮತ್ತು ಹಲೀಮಾ ಫಜೀಲತ್ ಇಲ್ಲಿ ನಡೆಯುತ್ತಿರುವ ರಾಜ್ಯ ಮಿನಿ ಒಲಿಂಪಿಕ್ಸ್‌ (14 ವರ್ಷದೊಳಗಿನವರು) ಕ್ರೀಡಾಕೂಟದ 200 ಮೀಟರ್ಸ್ ಓಟದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಿನ್ನ ಗೆದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಓಟದಲ್ಲಿ ಮುತ್ತಣ್ಣ 23.6 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಸಂಜು ಕೋಲಾರ್ ಮತ್ತು ಆಯುಷ್ ದೇವಾಡಿಗ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಫಜೀಲತ್ 26.7 ಸೆಕೆಂಡುಗಳಲ್ಲಿ ಗುರಿ ತಲುಪಿದರೆ ನೀಮಾ ಮತ್ತು ನಿಮೇಕ್ಷಾ ಸಿದ್ಧಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗಳಿಸಿದರು.

ಬಾಲಕರ 600 ಮೀಟರ್ಸ್ ಓಟದಲ್ಲಿ ಚಂದ್ರಶೇಖರ್‌ (1ನಿ 32.4 ಸೆ), ಸಚಿನ್ ಬೀರಬಲ್ ಮತ್ತು ಓಂಕಾರ್ ದೇಸಾಯಿ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗಳಿಸಿದರು. ಬಾಲಕಿಯರ 600 ಮೀಟರ್ಸ್ ಓಟದಲ್ಲಿ ಪ್ರಿಯಾಂಕ ಓಲೇಕಾರ್ (1 ನಿ, 38.2 ಸೆ), ಶ್ರೇಯಾ ಮತ್ತು ಗೀತಾ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು.

ಬಾಲಕರ 4x100 ಮೀಟರ್ಸ್ ರಿಲೆಯಲ್ಲಿ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ನಗರ ಜಿಲ್ಲೆ ತಂಡಗಳು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು. ಬಾಲಕಿಯರ 4x100 ಮೀಟರ್ಸ್ ರಿಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಧಾರವಾಡ ಜಿಲ್ಲೆ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗಳಿಸಿತು. 

ಹಾಕಿ: ಕೊಡಗು, ಹಾಸನ, ಬಳ್ಳಾರಿ ತಂಡಗಳು ಫೈನಲ್‌ಗೆ: ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆದ ಹಾಕಿ ಟೂರ್ನಿಯ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಕೊಡಗು ತಂಡಗಳು ಫೈನಲ್ ಪ್ರವೇಶಿಸಿದವು. ಹಾಕಿ ಕೊಡಗು ಬಾಲಕರ ವಿಭಾಗದಲ್ಲಿ ಹಾಕಿ ಬಳ್ಳಾರಿಯನ್ನು, ಬಾಲಕಿಯರ ವಿಭಾಗದಲ್ಲಿ ಹಾಸನವನ್ನು ಎದುರಿಸಲಿದೆ.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಕೊಡಗು ತಂಡ ಕೂಡಿಗೆ ತಂಡವನ್ನು 3–2ರಲ್ಲಿ ಮಣಿಸಿತು. ಕೊಡಗು ಪರವಾಗಿ ಆಕಾಶ್ ಬಿದ್ದಪ್ಪ, ಶಶಾಂಕ್ ಮತ್ತು ಕುಶಲ್ ಬೋಪಯ್ಯ ಗೋಲು ಗಳಿಸಿದರೆ ಕೂಡಿಗೆಗಾಗಿ ಎರಡೂ ಗೋಲುಗಳನ್ನು ಸುಪ್ರೀತ್ ಗಳಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಹಾಕಿ ಬಳ್ಳಾರಿ ತಂಡ ಹಾಕಿ ಕಲಬುರ್ಗಿಯನ್ನು 7–0ಯಿಂದ ಸೋಲಿಸಿತು. ಬಳ್ಳಾರಿ ತಂಡಕ್ಕಾಗಿ ರಮೇಶ್ 3, ದುರ್ಗ, ಕಿರಣ್, ಷಣ್ಮುಖ ಮತ್ತು ಯಶವಂತ್ ತಲಾ ಒಂದೊಂದು ಗೋಲು ಗಳಿಸಿದರು.

ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕೊಡಗು ತಂಡ ಧಾರವಾಡವನ್ನು 3–1ರಲ್ಲಿ ಸೋಲಿಸಿತು. ಕೊಡಗು ಪರವಾಗಿ ಶಿವಾಲಿ 2, ರಕ್ಷಿತಾ 1 ಗೋಲು ಗಳಿಸಿದರು. ಧಾರವಾಡದ ಏಕೈಕ ಗೋಲು ಪದ್ಮಶ್ರೀ ಕಾಗದಾಳ ಅವರಿಂದ ಮೂಡಿ ಬಂತು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಹಾಸನ ತಂಡ ಬೆಂಗಳೂರು ಗ್ರಾಮಾಂತರವನ್ನು 10–0ಯಿಂದ ಮಣಿಸಿತು. ಯಮುನಾ 4, ಸುಪ್ರೀತಾ 3, ತುಳಸಿ 2 ಮತ್ತು ಲಕ್ಷ್ಮಿ 1 ಗೋಲು ಗಳಿಸಿದರು. 

ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಾಲಕರ ಮತ್ತು 11.30ಕ್ಕೆ ಬಾಲಕಿಯರ ಫೈನಲ್ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು