ಬುಧವಾರ, ಅಕ್ಟೋಬರ್ 21, 2020
22 °C

‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಬ್ಯಾಡ್ಮಿಂಟನ್‌ನಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಅಪಾರ ತುಡಿತ ಹೊಂದಿದ್ದ ಆ ಯುವತಿಗೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದು ಸ್ವಲ್ಪ ಹಿನ್ನಡೆಯಾಯಿತು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಆಕೆ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭವಿಷ್ಯದ ಬೆಳಕು ಕಂಡರು.

ಅವರೇ ಮಾನಸಿ ಜೋಷಿ. ಹೋದ ವರ್ಷ ಬಿಡಬ್ಲ್ಯುಎಫ್‌ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಮಾನಸಿ ಅವರ ಸಾಧನೆಗೆ ಈಗ ಮತ್ತೊಂದು ಗರಿ ಮೂಡಿದೆ. ಭವಿಷ್ಯದ ಪೀಳಿಗೆಯ ನಾಯಕಿ (ನೆಕ್ಸ್ಟ್‌ ಜನರೇಷನ್‌ ಲೀಡರ್‌) ಎಂದು ಅವರನ್ನು ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆ ಗುರುತಿಸಿದೆ.

ಈ ವಿಷಯವನ್ನು ಮಾನಸಿ ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಾನೊಂದು ದಿನ ಟೈಮ್‌ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತೇನೆ  ಅಂದುಕೊಂಡಿರಲಿಲ್ಲ. ಇದೊಂದು ದೊಡ್ಡ ಗೌರವ‘ ಎಂದು ಬರೆದುಕೊಂಡಿದ್ದಾರೆ.

31 ವರ್ಷದ ಮಾನಸಿ, 2019ರಲ್ಲಿ ನಡೆದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್ ಎಸ್‌ಎಲ್‌3 ವಿಭಾಗದ ಫೈನಲ್‌ನಲ್ಲಿ ವಿಶ್ವದ ಅಗ್ರಕ್ರಮಾಂಕದ ಆಟಗಾರ್ತಿ, ಭಾರತದವರೇ ಆದ ಪಾರುಲ್‌ ಪಾರ್ಮರ್‌ ಅವರನ್ನು ಮಣಿಸಿದ್ದರು. ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಈ ವಿಶ್ವಚಾಂಪಿಯನ್‌ಷಿಪ್‌ ನಡೆದಿತ್ತು. ಅದೇ ವರ್ಷ ಪಿ.ವಿ. ಸಿಂಧು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದರು. ಇದರಿಂದಾಗಿ ಮಾನಸಿ ಅವರ ಸಾಧನೆಗೆ ಮುಖ್ಯವಾಹಿನಿಯಲ್ಲಿ ಹೆಚ್ಚು ಜಾಗ ಸಿಕ್ಕಿರಲಿಲ್ಲ.

ಆರು ವರ್ಷದವರಿದ್ದಾಗಲೇ ಬ್ಯಾಡ್ಮಿಂಟನ್‌ ರ‍್ಯಾಕೆಟ್‌ ಹಿಡಿದವರು ರಾಜ್‌ಕೋಟ್‌ನ ಮಾನಸಿ. ಅವರ ತಂದೆ, ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದರು. 2010ರಲ್ಲಿ ಪದವಿ ಮುಗಿಸಿದ ಮಾನಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ವೃತ್ತಿಯಲ್ಲಿ ತೊಡಗಿಸಿಕೊಂಡರು. ಅಂತರ್‌ ಸಂಸ್ಥೆಗಳ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಮಿಂಚತೊಡಗಿದರು. ಆದರೆ 2011ರ ಡಿಸೆಂಬರ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಟ್ರಕ್‌ ಡಿಕ್ಕಿ ಹೊಡೆದಿತ್ತು. ಅವರ ಎಡಗಾಲು ಊನವಾಯಿತು.

45 ದಿನಗಳ ಕಾಲ ಆಸ್ಪತ್ರೆ ವಾಸದ ಬಳಿಕ ಕೃತಕ ಕಾಲು ಅಳವಡಿಸಿಕೊಂಡ ಮಾನಸಿ, ಗುಣಮುಖರಾಗಲು ಮೂರು ತಿಂಗಳು ಹಿಡಿಯಿತು. ಆದರೆ ಅವರು ಎದೆಗುಂದಲಿಲ್ಲ. ಅಂತರ್‌ ಸಂಸ್ಥೆಗಳ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಕಣಕ್ಕಿಳಿಯತೊಡಗಿದರು. ಹಂತಹಂತವಾಗಿ ಯಶಸ್ಸಿನ ಶಿಖರ ಏರತೊಡಗಿದರು.

ಸದ್ಯ ಅವರು 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸುವತ್ತ ಚಿತ್ತ ನೆಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು