ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಸಿಂಧು ಮೇಲೆ ಎಲ್ಲರ ಗಮನ

ಇಂದಿನಿಂದ ಸುದೀರ್‌ಮನ್ ಕಪ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಮಲೇಷ್ಯಾ ಮೊದಲ ಎದುರಾಳಿ
Last Updated 18 ಮೇ 2019, 19:45 IST
ಅಕ್ಷರ ಗಾತ್ರ

ನ್ಯಾನಿಂಗ್‌, ಚೀನಾ (ಪಿಟಿಐ): ಭಾರತ ತಂಡವು ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಹೊಂದಿದೆ.

ಭಾನುವಾರ ಟೂರ್ನಿಗೆ ಚಾಲನೆ ಸಿಗಲಿದ್ದು, ಸೋಮವಾರ ನಿಗದಿಯಾಗಿರುವ 1–ಡಿ ಗುಂಪಿನ ತನ್ನ ಮೊದಲ ಹಣಾಹಣಿಯಲ್ಲಿ ಭಾರತವು ಮಲೇಷ್ಯಾ ಸವಾಲು ಎದುರಿಸಲಿದೆ.

ಭಾರತ ಟೂರ್ನಿಯಲ್ಲಿ ಒಮ್ಮೆಯೂ ನಾಲ್ಕರ ಘಟ್ಟ ಪ್ರವೇಶಿಸಿಲ್ಲ. 2011 ಮತ್ತು 2017ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ತಂಡದ ಉತ್ತಮ ಸಾಧನೆಯಾಗಿದೆ.

ಟೂರ್ನಿಯು ಮಿಶ್ರ ತಂಡ ವಿಭಾಗದಲ್ಲಿ ನಡೆಯುವ ಕಾರಣ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್ ವರ್ಮಾ ಅವರ ಮೇಲೆ ಹೆಚ್ಚಿನ ಹೊಣೆ ಇದೆ.

ಒಲಿಂಪಿಕ್ಸ್‌ ಪದಕ ವಿಜೇತರಾಗಿರುವ ಸೈನಾ ಮತ್ತು ಸಿಂಧು ಹಿಂದಿನ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಸಿಂಧು ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದು, ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಡೊನೇಷ್ಯಾ ಮಾಸ್ಟರ್ಸ್‌ನಲ್ಲಿ ಸೈನಾ ಚಾಂಪಿಯನ್‌ ಆಗಿದ್ದರು.

ಶ್ರೀಕಾಂತ್‌ ಅವರು ಈ ಸಲದ ಇಂಡಿಯಾ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಸಮೀರ್‌, ವಿಶ್ವ ಟೂರ್‌ ಫೈನಲ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು.

ಟೂರ್ನಿಯಲ್ಲಿ ‌ಎಂಟನೇ ಶ್ರೇಯಾಂಕ ಹೊಂದಿರುವ ಭಾರತವು ಮಲೇಷ್ಯಾವನ್ನು ಸುಲಭವಾಗಿ ಮಣಿಸುವ ವಿಶ್ವಾಸ ಹೊಂದಿದೆ. ಸಿಂಗಲ್ಸ್‌ ವಿಭಾಗದ ಪ್ರಮುಖ ಆಟಗಾರ ಲೀ ಚೊಂಗ್ ವೀ ಈ ಟೂರ್ನಿಗೆ ಅಲಭ್ಯರಾಗಿ ದ್ದಾರೆ. ಅವರ ಅನುಪಸ್ಥಿತಿ ಭಾರತಕ್ಕೆ ವರವಾಗುವ ಸಾಧ್ಯತೆ ಇದೆ.

ಲೀ ಜೀ ಜಿಯಾ, ಗೊಹ್‌ ಜಿನ್‌ ವೀ, ಸೋನಿಯಾ ಚೆಹ್‌ ಅವರು ಮಲೇಷ್ಯಾ ತಂಡದ ಆಧಾರಸ್ಥಂಭಗಳಾಗಿದ್ದಾರೆ. ಭಾರತದ ಸ್ಪರ್ಧಿಗಳು ಇವರ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಗಾಯದಿಂದ ಗುಣಮುಖರಾಗಿದ್ದಾರೆ. ಇದು ಭಾರತದ ಪಾಲಿಗೆ ಶುಭ ಸುದ್ದಿ. ಸಾತ್ವಿಕ್‌ ಅವರು ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ತಂಡಕ್ಕೆ ಶಕ್ತಿ ತುಂಬಬಲ್ಲರು.

ಡಬಲ್ಸ್‌ನಲ್ಲಿ ಅವರು ಚಿರಾಗ್‌ ಶೆಟ್ಟಿ ಜೊತೆ ಆಡಲಿದ್ದು, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಜೊತೆ ಅಂಗಳಕ್ಕಿಳಿಯಲಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ಭಾರತ ತಂಡದಿಂದ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದ್ದವು. ತಂಡವು, 1989ರಲ್ಲಿ ಪ್ರಶಸ್ತಿ ಜಯಿಸಿದ್ದ ಇಂಡೊನೇಷ್ಯಾವನ್ನು ಗುಂಪು ಹಂತದಲ್ಲಿ ಮಣಿಸಿ ಅಚ್ಚರಿ ಮೂಡಿಸಿತ್ತು.

ಚೀನಾ ತಂಡ ಈ ಬಾರಿಯೂ ಪ್ರಾಬಲ್ಯ ಮೆರೆಯುವ ಹುಮ್ಮಸ್ಸಿನಲ್ಲಿದೆ. ಈ ತಂಡ ಟೂರ್ನಿಯಲ್ಲಿ ಅತಿ ಹೆಚ್ಚು (10) ಪ್ರಶಸ್ತಿ ಗೆದ್ದ ದಾಖಲೆ ಹೊಂದಿದೆ.

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಚೆನ್‌ ಲಾಂಗ್‌, 2018ರ ಆಲ್ ಇಂಗ್ಲೆಂಡ್‌ ಓಪನ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಶಿ ಯೂಕಿ ಮತ್ತು ಈ ಬಾರಿಯ ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಚೆನ್‌ ಯೂಫಿ ಅವರು ತಂಡದ ಶಕ್ತಿಯಾಗಿದ್ದಾರೆ. ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲೂ ಈ ತಂಡ ಬಲಯುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT