ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ತಾರೆ ಫೆಂಗ್ ಶುಯಿ ಎಲ್ಲಿದ್ದಾರೆ? ಚೀನಾ ಸರ್ಕಾರದ ಮೇಲೆ ಆಟಗಾರರ ಒತ್ತಡ

Last Updated 21 ನವೆಂಬರ್ 2021, 3:59 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ಒಲಿಂಪಿಯನ್ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಎಲ್ಲಿದ್ದಾರೆ ತೋರಿಸಿ’ ಎಂದು ಚೀನಾ ಸರ್ಕಾರವನ್ನು ಟೆನಿಸ್ ತಾರೆಯರು ಪ್ರಶ್ನಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಪೆಂಗ್ ಶುಯಿ ನಾಪತ್ತೆಯಾಗಿರುವುದು ಈಗ ವಿಶ್ವಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚೀನಾ ಸರ್ಕಾರದ ಕುರಿತು ಮತ್ತೊಮ್ಮೆ ಅನುಮಾನಗಳು ವ್ಯಕ್ತವಾಗುತ್ತಿವೆ. ಕಮ್ಯುನಿಸ್ಟ್‌ ಪಕ್ಷದ ಪ್ರಭಾವಿ ನಾಯಕ ಝಾಂಗ್ ಗವೊಲಿ ತಮ್ಮ ಮೆಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದು ಪೆಂಗ್ ಎರಡು ವಾರಗಳ ಹಿಂದೆ ಆರೋಪಿಸಿದ್ದರು.

ಅದರಿಂದಾಗಿ ’ವೇರ್‌ ಇಸ್‌ ಪೆಂಗ್‌ ಶುಯಿ‘ ಎಂಬ ಹ್ಯಾಷಟ್ಯಾಗ್‌ನಡಿಯಲ್ಲಿ ಅಭಿಯಾನವನ್ನು ಟೆನಿಸ್ ತಾರೆಯರು, ಟೆನಿಸ್ ಆಡಳಿತ ಸಂಸ್ಥೆಗಳು, ಅಥ್ಲೀಟ್‌ಗಳು ಮತ್ತು ಮಾಜಿ ಆಟಗಾರರು ಆರಂಭಿಸಿದ್ದಾರೆ.

‘ಸೆನ್ಸಾರ್‌ಷಿಪ್‌ ಯಾವುದೇ ಕಾರಣಕ್ಕೂಇರಬಾರದು’ ಎಂದು ಜಪಾನಿನ ಟೆನಿಸ್ ತಾರೆ ನವೊಮಿ ಒಸಾಕಾ ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಬೆಂಬಲಿಸಿರುವ ಸೆರೆನಾ ವಿಲಿಯಮ್ಸ್, ‘ಪ್ರಕರಣದ ಸಮಗ್ರ ತನಿಖೆಯಾಗಲೇಬೇಕು. ನಾವು ಸುಮ್ಮನೆ ಕೂರಬಾರದು’ ಎಂದಿದ್ದಾರೆ.

‘ಇದು ಭಯಾನಕವಾದದ್ದು. ಒಬ್ಬ ವ್ಯಕ್ತಿ ಕಾಣೆಯಾಗುವುದೆಂದರೇನು’ ಎಂದು ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

‘ಇದೇ ಸ್ಥಿತಿ ಮುಂದುವರಿದರೆ, ಚೀನಾದಲ್ಲಿ ನಡೆಯಲಿರುವ ಡಬ್ಲ್ಯುಟಿಎ ಟೆನಿಸ್ ಟೂರ್ನಿಗಳನ್ನು ರದ್ದುಪಡಿಸಲಾಗುವುದು‘ ಎಂದು ಮಹಿಳಾ ಟೆನಿಸ್ ಅಸೋಸಿಯೇಷನ್ ಮುಖ್ಯಸ್ಥ ಸ್ಟೀವ್ ಸೈಮನ್ ಎಚ್ಚರಿಕೆ ನೀಡಿದ್ದಾರೆ.

ಪೆಂಗ್ ಬೆಂಬಲಕ್ಕೆ ಇಡೀ ಟೆನಿಸ್ ಕ್ಷೇತ್ರ ಒಂದಾಗಿ ನಿಲ್ಲಬೇಕು ಎಂದು ವೃತ್ತಿಪರ ಟೆನಿಸ್ ಆಟಗಾರರ ಸಂಘಟನೆಯು ಕರೆ ನೀಡಿದೆ.

‘ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ತನ್ನ ವಿಶೇಷಾಧಿಕಾರ ಬಳಸಬೇಕು. ಪೆಂಗ್ ಶುಯಿ ಅವರು ಎಲ್ಲಿದ್ದಾರೆ ಎಂಬ ಕುರಿತ ಮಾಹಿತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗ ಮಾಡಬೇಕೆಂದು ಚೀನಾದ ಮೇಲೆ ಒತ್ತಡ ಹೇರಬೇಕು ಪಾರದರ್ಶಕ ತನಿಖೆಗೆ ಒತ್ತಾಯಸಿಬೇಕು’ ಎಂದು ಗ್ಲೋಬಲ್ ಅಥ್ಲೀಟ್ ಮುಖ್ಯಸ್ಥ ರಾಬ್ ಕೊಯೆಲರ್‌ ಹೇಳಿದ್ದಾರೆ.

ಇನ್ನು ಎರಡೂವರೆ ತಿಂಗಳುಗಳ ನಂತರ ಚೀನಾದಲ್ಲಿ ಚಳಿಗಾಲದ ಒಲಿಂಪಿಕ್ಸ್‌ ನಡೆಯಲಿದೆ. ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಯೈಗುರ್ ಮುಸ್ಲಿಂ ಸಮುದಾಯ ಮತ್ತು ಮೂಲನಿವಾಸಿಗಳ ಮೇಲೆ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ, ಚಳಿಗಾಲದ ಒಲಿಂಪಿಕ್ಸ್‌ ಬಹಿಷ್ಕರಿಸಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಆಟಗಾರ ಎನೆಸ್ ಕಾಂಟರ್ ಈ ಕುರಿತು ‘ಕ್ರೂರ ಸರ್ವಾಧಿಕಾರಿ‘ ಎಂದು ಈಚೆಗೆ ಖಂಡಿಸಿದ್ದರು.

ಪೆಂಗ್ ಸುರಕ್ಷಿತವಾಗಿದ್ದಾರೆ: ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿರುವ ಪಿಪಲ್ಸ್ ಡೇಲಿ ಪತ್ರಿಕೆಯ ಸಂಪಾದಕ ಹು ಷಿನ್, ‘ಪೆಂಗ್‌ ಶುಯ್ ತಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ಶೀಘ್ರದಲ್ಲಿಯೇ ಅವರು ಎಲ್ಲರ ಮುಂದೆ ಬರಲಿದ್ದಾರೆ’ ಎಂದು ವೀ ಚಾಟ್‌ನಲ್ಲಿ ದೇಶ ಹಾಕಿದ್ದಾರೆ. ಜೊತೆಗೆ ಪೆಂಗ್ ಅವರು ತಮ್ಮ ಬೆಕ್ಕು ಮತ್ತು ಗೊಂಬೆಗಳೊಂದಿಗೆ ಆಟವಾಡುತ್ತಿರುವ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT