ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ಕಂಡ ಥ್ರೋಬಾಲ್‌ ‘ಗೇಮ್‌ ಚಿಕಿತ್ಸೆ’

ಥ್ರೋಬಾಲ್ ಫೆಡರೇಷನ್‌ನ ಪ‍್ರಾಯೋಗಿಕ ತರಬೇತಿ ಮುಕ್ತಾಯ
Last Updated 8 ಏಪ್ರಿಲ್ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರಲ್ಲೂ ಸಂತಸ, ಸಂಭ್ರಮ ನೆಲೆಯಾಗಿತ್ತು. ಪ್ರಯೋಗವೊಂದರ ಕೊನೆಯಲ್ಲಿ ಪೂರಕ ಫಲ ಕಂಡ ತೃಪ್ತಿ .

ನಗರದ ಮಲ್ಲೇಶ್ವರದಲ್ಲಿರುವ ಅರುಣ ಚೇತನ ‘ವಿಶೇಷ’ ಶಾಲೆಯ ವಿದ್ಯಾರ್ಥಿಗಳಿಗೆ ಥ್ರೋಬಾಲ್ ಮೂಲಕ ಚಿಕಿತ್ಸೆ ನೀಡುವ ತರಬೇತಿ ಶುಕ್ರವಾರ ಮುಕ್ತಾಯವಾಯಿತು. ಸಮಾರೋಪ ಸಮಾರಂಭದ ವೇಳೆ ಅಲ್ಲಿ ಖುಷಿಯ ಅಲೆ ಎದ್ದಿತ್ತು. ಬೇಸಿಗೆ ರಜೆಯ ಮೋಜು ಅನುಭವಿಸಲು ಸಜ್ಜಾಗಿದ್ದ ವಿದ್ಯಾರ್ಥಿಗಳು ಈ ಬಾರಿ ಹೆಚ್ಚು ಉಲ್ಲಾಸದಲ್ಲಿದ್ದರು. ಇದಕ್ಕೆ ಕಾರಣ, ಎರಡು ವಾರ ಲಭಿಸಿದ ವಿಶೇಷ ತರಬೇತಿ.

ಆಟಿಸಂನಿಂದ ಬಳಲುವವರು, ಮೂಳೆಗಳ ಬಲ ಕಳೆದುಕೊಂಡಿರುವವರು, ಡೌನ್ ಸಿಂಡ್ರೋಮ್ ಸಮಸ್ಯೆ ಅನುಭವಿಸುತ್ತಿರುವವರು, ಏಕಾಗ್ರತೆಯ ಕೊರತೆ ಇರುವವರು... ಮುಂತಾದ ತೊಂದರೆ ಇರುವವರಲ್ಲಿ ತರಬೇತಿ ಮೂಲಕ ನವಚೇತನ ತುಂಬಲಾಗಿದೆ. ಅವರಲ್ಲಿ ಪೂರಕ ಬದಲಾವಣೆಗಳು ಕಾಣಿಸಿಕೊಂಡಿರುವುದು ಸಾಬೀತಾಗಿದೆ ಎಂದು ಸಂಘಟಕರು ‘ಪ್ರಜಾವಾಣಿ’ಗೆ ತಿಳಿಸಿದರು. ಭಾರತ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಆಯೋಜಿಸಿದ್ದ ತರಬೇತಿಗೆ ಈಗಾಗಲೇ ಬೇರೆ ಕಡೆ ನಡೆದಿರುವ ಪ್ರಯೋಗವನ್ನು ಮಾದರಿಯಾಗಿ ಬಳಸಿಕೊಳ್ಳಲಾಗಿತ್ತು. ಥ್ರೋಬಾಲ್‌ ನಿಯಮಗಳಲ್ಲಿ ಇರುವ ಕೆಲವು ‘ತಂತ್ರಗಳು’ ಇಲ್ಲಿ ಬಳಕೆಯಾಗಿದ್ದವು.

‘ಆ್ಯಕ್ಟೊಫಿಟ್ ಎಂಬ ಸ್ಮಾರ್ಟ್‌ ಸ್ಕೇಲ್ ಮೂಲಕ ವಿದ್ಯಾರ್ಥಿಗಳಲ್ಲಿ ಆಗಿರುವ ದೈಹಿಕ ಬದಲಾವಣೆಗಳನ್ನು ಗುರುತಿಸಲಾಗಿದೆ. ಕಡಿಮೆ ಅವಧಿಯಲ್ಲಿ ನಿರೀಕ್ಷಿತ ಫಲ ಸಿಕ್ಕಿದೆ’ ಎಂದು ಅಂತರರಾಷ್ಟ್ರೀಯ ಥ್ರೋಬಾಲ್ ಪಟು ಸಂಪೂರ್ಣಾ ಹೆಗಡೆ ತಿಳಿಸಿದರು.

‘ತೂಕ ಅಳೆಯುವ ಯಂತ್ರದ ಮೂಲಕ ಆ್ಯಕ್ಟೊಫಿಟ್ ಕೆಲಸ ಮಾಡು ತ್ತದೆ. ತರಬೇತಿಗೆ ಆಯ್ಕೆ ಮಾಡಿದ 18 ಮಂದಿಯ ಮಾಹಿತಿಯನ್ನು ಮೊದಲ ದಿನ ಈ ಉಪಕರಣದ ಮೂಲಕ ಕಲೆ ಹಾಕಲಾಗಿತ್ತು. ಕೊನೆಯ ದಿನ ಮತ್ತೊಮ್ಮೆ ಪರಿಶೀಲಿಸಿದಾಗ ಮಹತ್ವದ ಬದಲಾವಣೆಗಳು ಆಗಿರುವುದು ಕಂಡುಬಂದಿದೆ. ಕೆಲವರಲ್ಲಿ ಕೊಬ್ಬು ಕಡಿಮೆಯಾಗಿದ್ದು ಕೆಲವರ ಎಲುಬು, ಮಾಂಸಖಂಡ ಮತ್ತುಅಂಗಾಂಶ ಬೆಳವಣಿಗೆ ಹೊಂದಿದೆ. ಪ್ರೋಟೀನ್‌ ಪ್ರಮಾಣ ಹೆಚ್ಚಳವಾಗಿರುವುದು ಕೂಡ ಕಂಡುಬಂದಿದೆ’ ಎಂದು ಸಂಪೂರ್ಣಾ ವಿವರಿಸಿದರು.

ಥ್ರೋಬಾಲ್ ಯಾಕೆ ಪರಿಣಾಮಕಾರಿ?

ಬಲಗೈಯಲ್ಲಿ ಚೆಂಡು ಹಿಡಿದರೆ ಬಲಗೈಯಲ್ಲೇ ವಾಪಸ್ ಎಸೆಯಬೇಕು, ಎಡಗೈಯಲ್ಲಿ ಹಿಡಿದರೆ ಅದೇ ಕೈಯಲ್ಲಿ ಹಿಂದಿರುಗಿಸಬೇಕು ಎಂಬ ನಿಯಮದಿಂದಾಗಿ ಈ ಕ್ರೀಡೆ ಮಿದುಳು ಮತ್ತು ನರಗಳ ಶಕ್ತಿ ವೃದ್ಧಿಸಲು ಕಾರಣವಾಗುತ್ತದೆ ಎಂದು ಥ್ರೋಬಾಲ್ ಫೆಡರೇಷನ್‌ನ ಪದಾಧಿಕಾರಿಗಳು ಹೇಳುತ್ತಾರೆ.

‘ಥ್ರೋಬಾಲ್‌ ಪಟುಗಳ ಪೈಕಿ ಬಹುತೇಕರು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಮಿದುಳಿನ ಎರಡೂ ಭಾಗಗಳಿಗೆ ಕಸರತ್ತು ನೀಡಲು ಈ ಕ್ರೀಡೆ ನೆರವಾಗುತ್ತಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ನಡೆದ ಪ್ರಯೋಗಗಳು ಯಶಸ್ಸು ಕಂಡಿವೆ. ಬೆಂಗಳೂರಿನ ಟ್ರಸ್ಟ್‌ವೆಲ್ ಆಸ್ಪತ್ರೆಯ ಡಾ.ಅರವಿಂದ ಕಂಚಿ ಅವರು ಮೂತ್ರಪಿಂಡದ ಸಮಸ್ಯೆ ಇರುವವರ ಮೇಲೆ ಪ್ರಯೋಗ ನಡೆಸಿ ನಿರ್ದಿಷ್ಟ ಅವಧಿಯ ನಂತರ ಪರೀಕ್ಷಿಸಿದಾಗ ದೈಹಿಕವಾಗಿ ಬಲಿಷ್ಟ ವಾಗಿರುವುದು, ಬಿಪಿ ಮತ್ತು ಸಕ್ಕರೆಯ ಅಂಶ ಕಡಿಮೆಯಾಗಿರುವುದು ಕಂಡು ಬಂದಿದೆ’ ಎನ್ನುತ್ತಾರೆ ಅವರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT