ಬುಧವಾರ, ಸೆಪ್ಟೆಂಬರ್ 29, 2021
20 °C

Olympics: ಕರ್ಣಂ ಮಲ್ಲೇಶ್ವರಿ ಹಾದಿಯಲ್ಲಿ ಅರಳಿದ ಮತ್ತೊಂದು ಹೂ ಮೀರಾಬಾಯಿ ಚಾನು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೀರಾಬಾಯಿ ಚಾನು

ವೇಟ್‌ಲಿಫ್ಟಿಂಗ್: ಕರ್ಣಂ ಮಲ್ಲೇಶ್ವರಿ ಹಾದಿಯಲ್ಲಿ ಅರಳಿದ ಮತ್ತೊಂದು ಹೂ ಮೀರಾಬಾಯಿ ಚಾನು ಟೋಕಿಯೊದಲ್ಲಿ ಭಾರತದ ಪರ ಮೊದಲ ಪದಕದ ಸಾಧನೆ ಮಾಡುವುದರಲ್ಲಿ ಸಫಲರಾಗಿದ್ದಾರೆ.

49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 

2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ನಂತರ ಮುಂದಿನ ವರ್ಷ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಮೀರಾಬಾಯಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದರು.

ವೇಟ್‌ಲಿಫ್ಟಿಂಗ್ ಕ್ರೀಡೆ ಒಲಿಂಪಿಕ್ಸ್‌ನ ಮೊದಲ ಆವೃತ್ತಿಯಿಂದಲೇ ಇದೆ. ಆದರೆ ಭಾರತ ಈ ಕ್ರೀಡೆಯಲ್ಲಿ ಮೊದಲು ಪಾಲ್ಗೊಂಡದ್ದು 10ನೇ ಆವೃತ್ತಿಯಲ್ಲಿ, 1936ರಲ್ಲಿ. ಆ ವರ್ಷ ಭಾರತವನ್ನು ಪ್ರತಿನಿಧಿಸಿದ್ದು ಬರ್ಮಾ ಮೂಲದ ವು ಜಾ ವೇಕ್‌. ಭಾರತ ಮೂಲದ ಲಿಫ್ಟರ್ ಮೊದಲು ಪಾಲ್ಗೊಂಡದ್ದು 1948ರ ಲಂಡನ್‌ ಕೂಟದಲ್ಲಿ. ಈ ಕೀರ್ತಿಗೆ ಪಾತ್ರರಾದವರು ದಂಡಮುಂಡಿ ರಾಜಗೋಪಾಲ್. ಅವರು ಹೆಲ್ಸಿಂಕಿ ಮತ್ತು ಮೆಲ್ಬರ್ನ್‌ ಕೂಟಗಳಲ್ಲೂ ದೇಶವನ್ನು ಪ್ರತಿನಿಧಿಸಿದ್ದರು. 1936ರಿಂದ ಎಲ್ಲ ಕೂಟಗಳಲ್ಲಿ ಭಾರತ ಪಾಲ್ಗೊಂಡಿದ್ದರೂ ಪದಕ ಗೆಲ್ಲಲು ಯಾರಿಗೂ ಸಾಧ್ಯವಾಗಿರಲಿಲ್ಲ. 1984ರಲ್ಲಿ ಮಹೇಂದ್ರ ಕಣ್ಣನ್ ಮತ್ತು ದೇವನ್ ಗೋವಿಂದಸಾಮಿ ಮೊದಲ ಬಾರಿ ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದರು.

2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕದ ಸವಿ ನೀಡಿದರು. 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಸ್ನ್ಯಾಚ್‌ನಲ್ಲಿ 110 ಕೆಜಿ ಸೇರಿದಂತೆ ಒಟ್ಟು 240 ಕೆಜಿ ಭಾರ ಎತ್ತಿದ್ದರು.

ಇದನ್ನೂ ಓದಿ: Tokyo Olympics | ಭಾರತಕ್ಕೆ ಮೊದಲ ಪದಕ; ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಅವರು ಹಾಕಿಕೊಟ್ಟ ಹಾದಿಯಲ್ಲಿ ಮತ್ತೆ ಹೂ ಅರಳಲೇ ಇಲ್ಲ. ಮೀರಾಬಾಯಿ ಚಾನು ಈ ಶೂನ್ಯವನ್ನು ತುಂಬುವ ಭರವಸೆಯೊಂದಿಗೆ ಟೋಕಿಯೊ ತಲುಪಿದ್ದರು. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯಧಿಕ ಐದು ಮಂದಿಯ ತಂಡವನ್ನು ಕಣಕ್ಕೆ ಇಳಿಸಿತ್ತು. ಆದರೆ ದೇಶವನ್ನು ಒಬ್ಬರೇ ಪ್ರತಿನಿಧಿಸಿದ್ದು ಐದು ಬಾರಿ ಮಾತ್ರ. ಈ ವರ್ಷ ಕೋಟಿ ಕೋಟಿ ಜನರ ಪದಕದ ನಿರೀಕ್ಷೆಯ ‘ಭಾರವನ್ನು’ ಹೊತ್ತು ಬೆಳ್ಳಿಯ ಉಡುಗೊರೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು