ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಇದ್ದರೆ ಒಲಿಂಪಿಕ್ಸ್ ಅಸಾಧ್ಯ: ಜಪಾನ್ ಪ್ರಧಾನಿ ಶಿಂಜೊ ಅಬೆ ಅಭಿಪ್ರಾಯ

ಮಹಾಮಾರಿಯನ್ನು ಗೆದ್ದ ಸಂಭ್ರಮ ಇದ್ದರಷ್ಟೇ ಕೂಟದ ಯಶಸ್ಸು
Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಟೋಕಿಯೊ: ಕೊರೊನಾ ವೈರಾಣು ಹಾವಳಿ ಮುಂದುವರಿದರೆ ಮುಂದಿನ ವರ್ಷವೂ ಟೋಕಿಯೊ ಒಲಿಂಪಿಕ್ಸ್ ಆಯೋಜಿಸಲು ಸಾಧ್ಯವೇ ಇಲ್ಲ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.

ಜಪಾನ್ ಸಂಸತ್ತಿನಲ್ಲಿ ಬುಧವಾರ ನಡೆದ ಬಜೆಟ್ ಸಮಿತಿಯ ಅಧಿವೇಶನದಲ್ಲಿ ಅವರು ವಿರೋಧ ಪಕ್ಷದವರ ಪ್ರಶ್ನೆಗೆ ಉತ್ತರಿಸಿದರು.

ಪ್ರಪಂಚವನ್ನು ಕೊರೊನಾ ವೈರಾಣು ನಡುಗಿಸುತ್ತಿದ್ದಂತೆ ಒಲಿಂಪಿಕ್ ಕೂಟವನ್ನು ಮುಂದಿನ ವರ್ಷದ ಜುಲೈ ತಿಂಗಳಿಗೆ ಮುಂದೂಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರ್ಕಾರ ಕಳೆದ ತಿಂಗಳು ನಿರ್ಧರಿಸಿತ್ತು. ಆದರೆ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದ್ದು ಈ ಮಹಾಮಾರಿಗೆ ಲಸಿಕೆ ಕಂಡುಹಿಡಿಯಲು ಇನ್ನೂ ಬಹಳಷ್ಟು ಕಾಲ ಬೇಕಾದೀತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಕೂಟವನ್ನು ಮತ್ತೊಮ್ಮೆ ಮುಂದೂಡುವ ಲಕ್ಷಣಗಳು ಕಾಣಿಸಿಕೊಂಡಿವೆ.

‘ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕೂಟವನ್ನು ಆಯೋಜಿಸುವುದಾದರೆ ಅದು ಪೂರ್ಣ ಪ್ರಮಾಣದಲ್ಲಿರಬೇಕು ಎಂಬುದು ನಮ್ಮೆಲ್ಲರ ಆಶಯ. ಕೂಟದಲ್ಲಿ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರು ನಿರಾತಂಕವಾಗಿ ಪಾಲ್ಗೊಳ್ಳುವಂತಹ ವಾತಾವರಣ ಇರಬೇಕು. ಕೊರೊನಾ ವೈರಾಣು ಇದೆ ಎಂದಾದರೆ ಇದು ಸಾಧ್ಯವಿಲ್ಲ’ ಎಂದು ಅಬೆ ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಹಾವಳಿಯನ್ನು ಇಲ್ಲದೆ ಮಾಡಲು ಸಮರೋಪಾದಿಯಲ್ಲಿ ಕೆಲಸಗಳು ಆಗಬೇಕು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿ ಮತ್ತು ಸ್ಥಳೀಯ ಸರ್ಕಾರದ ಜೊತೆ ನಿರಂತರ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಒಲಿಂಪಿಕ್ಸ್ ನಡೆದರೂ ಅಲ್ಲಿ ಕೊರೊನಾವನ್ನು ಗೆದ್ದ ಸಂಭ್ರಮವೂ ಇರಬೇಕು. ಕೊರೊನಾದೊಂದಿಗೇ ಕೂಟವನ್ನು ಆಯೋಜಿಸುವುದು ಕಷ್ಟ ಸಾಧ್ಯ’ ಎಂದು ಅಬೆ ಹೇಳಿದರು.

ಅಧಿಕೃತ ವರದಿಗಳ ಪ್ರಕಾರ ಟೋಕಿಯೊದಲ್ಲಿ ಮಂಗಳವಾರ 112 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಜಪಾನ್‌ನಲ್ಲಿ ಒಟ್ಟಾರೆ 13,895 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 413 ಮಂದಿ ಸಾವಿಗೀಡಾಗಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಆದರೆ ಜಪಾನ್‌ನಲ್ಲಿ ಸೋಂಕು ಪರೀಕ್ಷೆಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT